ಬಾವಿ ನೀರು ಕುಡಿದ 8 ವಿದ್ಯಾರ್ಥಿಗಳು ಅಸ್ವಸ್ಥ : ಅಲ್ಲೇ ಇದ್ದ ಕ್ಯಾನ್ ನಲ್ಲಿತ್ತು…

ಶಾಲೆಯ ಬಾವಿ ನೀರು ಕುಡಿದು ಎಂಟು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಶಿಬಾಜೆ ಪೆರ್ಲ ಎಂಬಲ್ಲಿರುವ ಸರಕಾರಿ ಉನ್ನತೀಕರಿಸಿದ ಶಾಲೆಯಲ್ಲಿ ಸೋಮವಾರ ನಡೆದಿರುವುದು ವರದಿಯಾಗಿದೆ.

ಅಸ್ವಸ್ಥಗೊಂಡಿರುವ ವಿದ್ಯಾರ್ಥಿಗಳ ಪೈಕಿ ಗಂಭೀರಾವಸ್ಥೆಯಲ್ಲಿರುವ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಬಾವಿ ನೀರಿಗೆ ಯಾರೋ ದುಷ್ಕರ್ಮಿಗಳು ವಿಷ ಬೆರೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

7ನೇ ತರಗತಿ ವಿದ್ಯಾರ್ಥಿ ಚೇತನ್ ಕುಮಾರ್(13), 8ನೇ ತರಗತಿ ವಿದ್ಯಾರ್ಥಿಗಳಾದ ಸುದೀಶ್(14), ಯೋಗೀಶ್ (14), ರಾಧಾಕೃಷ್ಣ(14), 6ನೇ ತರಗತಿಗಳಾದ ವಿದ್ಯಾರ್ಥಿ ಸುದೀಪ್(12), ರಾಜೇಶ್ (12), ಮೋನಿಸ್( 12) ಹಾಗೂ ಶ್ರವಣ್(12) ಅಸ್ವಸ್ಥಗೊಂಡವರಾಗಿದ್ದಾರೆ.

ಲಭ್ಯ ಮಾಹಿತಿಗಳ ಪ್ರಕಾರ ಈ ದಿನ ಶಾಲಾ ಮಕ್ಕಳು ಶಾಲಾ ತರಕಾರಿ ತೋಟಕ್ಕೆ ಬಾವಿಯಿಂದ ಪಂಪ್ ನಲ್ಲಿ ನೀರು ಹಾಕುತ್ತಿದ್ದರು. ಈ ಸಮಯ ಎಂಟು ವಿದ್ಯಾರ್ಥಿಗಳು ಅದೇ ನೀರನ್ನು ಕುಡಿದಿದ್ದರೆನ್ನಲಾಗಿದೆ. ನೀರು ಕುಡಿಯುತ್ತಲೇ ಈ ಮಕ್ಕಳಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ವಿಷಯ ತಿಳಿದು ಶಾಲಾ ಮುಖ್ಯ ಶಿಕ್ಷಕಿ ಶಾರದಾ ಪರಿಶೀಲನೆ ಮಾಡಿದಾಗ ಬಾವಿ ಸಮೀಪ ಕ್ಯಾನ್ ಒಂದು ಕಂಡುಬಂದಿದೆ. ಈ ನಡುವೆ ಅಸ್ವಸ್ಥಗೊಂಡ 8 ವಿದ್ಯಾರ್ಥಿಗಳನನ್ನು ಕೊಕ್ಕಡ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣ ನಾಲ್ಕು ಮಕ್ಕಳನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಹಾಗೂ ನಾಲ್ಕು ಮಕ್ಕಳನ್ನು ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಮಾಹಿತಿ ಪ್ರಕಾರ ವಿಷ ಮಿಶ್ರಿತ ನೀರು ಕುಡಿದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

ಬಾವಿಗೆ ಯಾರೋ ದುಷ್ಕರ್ಮಿಗಳು ವಿಷ ಸೇವಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೋಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights