ಬಿಜೆಪಿಯಲ್ಲಿ ಶುರುವಾದ ಅತೃಪ್ತರ ರಾಗ : ಅಲುಗಾಡುತ್ತಾ ಸಿಎಂ ಖುರ್ಚಿ…?
ಬಿಜೆಪಿಯಲ್ಲಿ ಭಿನ್ನಮತೀಯರ ಕೂಗು ಸದ್ದಿಲ್ಲದೇ ಸುದ್ದಿ ಮಾಡುತ್ತಿದೆ. ಕೊರೊನಾ ಲಾಕ್ ಡೌನ್ ನಿಂದಾಗಿ ತಣ್ಣಗಿದ್ದ ಸಚಿವ ಸ್ಥಾನದ ಆಕಾಂಕ್ಷಿಗಳು ಸದ್ಯ ಸದ್ದಿಲ್ಲದೇ ಸುದ್ದಿ ಮಾಡುತ್ತಿದ್ದಾರೆ.
ಹೌದು… ಕೊರೊನಾ ಲಾಕ್ ಡೌನ್ ನಿಂದಾಗಿ ಬಿಜೆಪಿಯಲ್ಲಿನ ಸೈಲೆಂಟ್ ಇದ್ದ ಭಿನ್ನಮತೀಯರು ಸಚಿವ ಸ್ಥಾನದ ಲಾಬಿನಡೆಸಿದ್ದಾರೆ. ಸುಮಾರು 10 ಕ್ಕೂ ಹೆಚ್ಚು ಬಿಜೆಪಿ ಸಚಿವಾಕಾಂಶಿ ಶಾಸಕರು ಇಂದು ಔತಣ ಕೂಡದಲ್ಲಿ ಭಾಗಿಯಾಗಲಿದ್ದು ಸಿಎಂ ಖುರ್ಚಿ ಅಲುಗಾಡುವ ಮನ್ಸೂಚನೆಗೆ ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಉತ್ತರ ಕರ್ನಾಟಕದ ಪ್ರಬಲ ನಾಯಕರಲ್ಲಿ ಒಬ್ಬರಾದ ಉಮೇಶ್ ಕತ್ತಿ, ಈ ಹಿಂದೆ ಕೇಂದ್ರ ಸಂಪುಟದಲ್ಲಿ ಸಚಿವರಾಗಿದ್ದ ಹಿರಿಯ ಮುಖಂಡ ಬಸನಗೌಡ ಪಾಟೀಲ್, ಪ್ರಬಲ ಪಂಚಮ ಸಾಲಿ ಲಿಂಗಾಯತ ಕೋಮಿಗೆ ಸೇರಿರುವ ಮಾಜಿ ಸಚಿವ ಮುರುಗೇಶ್ ನಿರಾಣಿ ಹೀಗೆ ಬಿಜೆಪಿಯಲ್ಲಿ ಹಲವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಅತೃಪ್ತ ಶಾಸಕರು ಪಕ್ಷ ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲು ಕಾರಣರಾಗಿದ್ದರು. ಅವರಿಗೆಲ್ಲಾ ಸಚಿವ ಸ್ಥಾನ ನೀಡಲಾಗಿತ್ತು. ಇದು ಮೂಲ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ ಇದರ ಕಿಚ್ಚು ಕಾಡ್ಗಿಚ್ಚಾಗುವ ಮೊದಲೇ ಕೊರೊನಾ ಲಾಕ್ ಡೌನ್ ಶುರುವಾದ ಪರಿಣಾಮ ಭಿನ್ನಮತ ಬೂದಿಮುಚ್ಚಿದ ಕೆಂಡಂದಂತಿತ್ತು. ಸದ್ಯ ಸಚಿವ ಸ್ಥಾನದ ಆಂಕಾಕ್ಷಿಗಳು ಪಕ್ಷದ ವಿರುದ್ಧ ಒಳಗೊಳಗೆ ಕಿಡಿ ಕಾರಲು ಶುರು ಮಾಡಿದ್ದಾರೆ. ಮಾತ್ರವಲ್ಲದೇ ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನ ಕೆಳಗಿಳಿಸುವ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ.
ಇಂದು ಔತಣ ಕೂಟದ ನೆಪದಲ್ಲಿ ಬೆಂಗಳೂರಿನಲ್ಲಿ ಖಾಸಗಿ ಅಪಾರ್ಟ್ಮೆಂಟ್ ಒಂದರಲ್ಲಿ ಬಿಜೆಪಿ ಅತೃಪ್ತ ಶಾಸಕರು ಸಭೆ ಸೇರಲಿದ್ದಾರೆ ಎನ್ನಲಾಗುತ್ತಿದೆ.

