ಬೆಣ್ಣೆ ನಗರಿ ದಾವಣಗೆರೆಯಲ್ಲಿ ಮಾರಕ ಕೊರೊನಾ ವೈರಸ್ ಗೆ ಮೊದಲ ಬಲಿ!
ಬೆಣ್ಣೆ ನಗರಿ ದಾವಣಗೆರೆಯಲ್ಲಿ ಮಾರಕ ಕೊರೋನಾ ವೈರಸ್ ಗೆ ಮೊದಲ ಬಲಿಯಾಗಿದ್ದು, 69 ವರ್ಷದ ವೃದ್ಧರೊಬ್ಬರು ಇಂದು ಮೃತಪಟ್ಟಿದ್ದಾರೆ.
ನಿನ್ನೆಯಷ್ಟೇ ಕೊರೊನಾ ಸೋಂಕು ಹರಡದಂತೆ ದೇಶದ ಹಿತದೃಷ್ಟಿಯಿಂದ ಲಾಕ್ಡೌನ್ ಮುಂದುವರೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವ ಸಂಪುಟದ ಸದಸ್ಯರ ಜೊತೆ ಪ್ರಧಾನಿ ಮೋದಿ ಸಭೆ ನಡೆಸಿದ ಬಳಿಕ ಕೇಂದ್ರ ಗೃಹ ಸಚಿವಾಲಯದಿಂದ ಮೂರನೇ ಅವಧಿಗೆ ಲಾಕ್ಡೌನ್ ವಿಸ್ತರಣೆ ಘೋಷಿಸಲಾಗಿದೆ. ಹೀಗಿರುವಾಗಲೇ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧ(ರೋಗಿ ಸಂಖ್ಯೆ 556) ಇಂದು ರಾತ್ರಿ ಸಾವನ್ನಪ್ಪಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾಗೆ ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.
ದಾವಣೆಗೆರೆಯ ಜಾಲಿನಗರದ ನಿವಾಸಿಯಾಗಿದ್ದ ವ್ಯಕ್ತಿ ಮೂರು ದಿನಗಳ ಹಿಂದೆ ಉಸಿರಾಟದ ಸಮಸ್ಯೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಈ ವ್ಯಕ್ತಿಗೆ ಕೊರೋನಾ ಹೇಗೆ ಬಂದಿದೆ ಎನ್ನುವುದು ತಿಳಿದಿಲ್ಲ. ವೃದ್ಧನ ಟ್ರಾವೆಲ್ ಹಿಸ್ಟರಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಈ ವ್ಯಕ್ತಿಯಿಂದ 1 ವರ್ಷದ ಮಗು ಸೇರಿದಂತೆ 5 ಮಂದಿಗೆ ಕೊರೋನಾ ಹರಡಿದೆ. ವೃದ್ಧನ ಮೂರು ಮಂದಿ ಸೊಸೆಯಂದಿರು, ಓರ್ವ ಪುತ್ರ ಸೇರಿ ಒಂದು ವರ್ಷದ ಮೊಮ್ಮಗನಿಗೂ ಕೂಡ ಸೋಂಕು ತಗುಲಿದ್ದು ಎಲ್ಲರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ದಾವಣಗೆರೆ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದ್ದಾರೆ.
ಈ ನಡುವೆ ಜಿಲ್ಲೆಯಲ್ಲಿ ಸೋಂಕು ಪೀಡಿತರ ಸಂಪರ್ಕ ಹೊಂದಿದ್ದ ಸುಮಾರು 82 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಶನಿವಾರ ಅವರ ವರದಿ ಕೂಡ ಬಿಡುಗಡೆಯಾಗುವ ಸಾಧ್ಯತೆಯಿದೆ. ಇಲ್ಲಿಯವರೆಗೆ ದಾವಣಗೆರೆಯಲ್ಲಿ 10 ಮಂದಿಗೆ ಕೊರೋನಾ ಬಂದಿದ್ದು, ಇಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 8 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಶುಕ್ರವಾರ ಒಂದೇ ದಿನ 24 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 589ಕ್ಕೆ ಏರಿಕೆಯಾಗಿದೆ. ನಿನ್ನೆ ಬೆಳಗ್ಗೆ 11 ಹೊಸ ಕೊವಿಡ್-19 ಪ್ರಕರಣ ಪತ್ತೆಯಾಗಿದ್ದು, ಸಂಜೆ ಮತ್ತೆ 13 ಮಂದಿಗೆ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. 589 ಸೋಂಕಿತರ ಪೈಕಿ 23 ಮಂದಿ ಮೃತಪಟ್ಟಿದ್ದು, 251 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಈ ಮಾಹಿತಿ ನೀಡಲಾಗಿದೆ.
ಇನ್ನು ಲಾಕ್ ಡೌನ್ ಮೇ.4 ರಿಂದ 17ರವರೆಗೆ ವಿಸ್ತಾರಗೊಂಡಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾಗುವ ಆತಂಕ ಎದುರಾಗಿದೆ.

