‘ಭೂತ ಪಟ್ಟಣ’ವಾದ ಚೀನಾದ ವುಹಾನ್ : ಕೊರೊನಾ ವೈರಸ್ ಗೆ 130 ಜನ ಬಲಿ!

ವಿಶ್ವಾದ್ಯಂತ ಮಹಾಮಾರಿಯಂತೆ ಭಾರೀ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಚೀನಾವನ್ನ ಸಾವಿನ ಮನೆಯಂತಾಗಿಸಿದೆ. ಚೀನಾದ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಇನ್ನೂ ಒಂದು ವಾರದಲ್ಲಿ ಸೋಂಕಿಗೆ ಒಳಗಾದವರ ಸಾವಿನ ಸಂಖ್ಯೆ ಅಧಿಕವಾಗುವ ಸಾಧ್ಯತೆ ಇದೆ.

ಇದರಿಂದ ಡೆಡ್ಲಿ ಕೊರೊನಾ ವೈರಸ್‍ನ ಕೇಂದ್ರಬಿಂದು ಚೀನಾದ ವುಹಾನ್ ಪ್ರಾಂತ್ಯ ಜನರ ಪಾಲಿಗೆ ಅಕ್ಷರಶ: ‘ಭೂತ ಪಟ್ಟಣ’ವಾಗಿ ಹೋಗಿದೆ. ಕೊರೊನಾ ವೈರಸ್ ಭೀತಿಯಿಂದ ಜನ ಮನೆಯಿಂದ ಹೊರಗಡೆ ಬರಲಾಗದೇ ಮನೆಯಲ್ಲಿ ಬಂಧಿಯಾಗಿದ್ದು, ವುಹಾನ್ ನಲ್ಲಿ ಬಂದ್ ವಾತಾವರಣ ನಿರ್ಮಾಣವಾಗಿದೆ. ರಸ್ತೆಗಳಲೆಲ್ಲವೂ ಖಾಲಿ ಖಾಲಿ. ಜನ ನಿತ್ಯದ ಕೆಲಸಗಳಿಗೂ ತೆರಳುತ್ತಿಲ್ಲ, ಮಾರುಕಟ್ಟೆಗಳಿಗೂ ಹೋಗುತ್ತಿಲ್ಲ. ಪ್ರತಿಯೊಂದು ಕುಟುಂಬಗಳು ಹೊರಗಡೆ ಬಂದರೆ ವೈರಸ್ ತಮಗೂ ತಗಲುವು ಭಯದಿಂದ ಮನೆಬಿಟ್ಟು ಹೊರಬರಲು ಹಿಂದೇಟು ಹಾಕುತ್ತಿದ್ದು, ಇದರಿಂದ ವುಹಾನ್ ಪ್ರಾಂತ್ಯ ‘ಭೂತ ಪಟ್ಟಣ’ ಎಂದು ಕರೆಸಿಕೊಳ್ಳುತ್ತಿದೆ.

ಕೊರೊನಾ ವೈರಸ್ ಸೋಂಕಿಗೆ 130 ಜನ ಬಲಿಯಾಗಿದ್ದು, ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಅಲ್ಲದೆ ಮತ್ತೆ 6000 ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರುವ ಆತಂಕವಿದೆ. ವೇಗವಾಗಿ ವ್ಯಾಪಿಸುತ್ತಿರುವ ಈ ರೋಗಕ್ಕೆ ಕಡಿವಾಣ ಹಾಕಲು ಚೀನಾ ಸರ್ಕಾರ ತುರ್ತು ಕ್ರಮಗಳೊಂದಿಗೆ ಸಮರೋಪಾದಿಯ ಹೋರಾಟದ ಹೊರತಾಗಿಯೂ ವೈರಸ್‍ನ ಕಬಂಧ ಬಾಹುಗಳು ವಿಸ್ತರಿಸುತ್ತಿವೆ.

ಹೊಸದಾಗಿ ಸೋಂಕು ಕಾಣಿಸಿಕೊಂಡವರಲ್ಲಿ 2550 ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಪರಿಸ್ಥಿತಿಯ ಭಯಾನಕತೆಗೆ ಸಾಕ್ಷಿಯಾಗಿದೆ.  ಡೆಡ್ಲಿ ವೈರಸ್‍ನ ಕೇಂದ್ರಬಿಂದು ವುಹಾನ್ ಪ್ರಾಂತ್ಯ ಸೇರಿದಂತೆ ಒಟ್ಟು 24 ಪ್ರಾಂತೀಯ ಪ್ರದೇಶಗಳ ಲಕ್ಷಾಂತರ ಜನರು ಮನೆಗಳಲ್ಲೇ ಗೃಹಬಂಧನಕ್ಕೆ ಒಳಗಾಗಿದ್ದಾರೆ. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಆಹಾರ ಮತ್ತು ನೀರು ಪೂರೈಕೆ ಕ್ರಮೇಣ ಕಡಿಮೆಯಾಗುತ್ತಿದ್ದು, ಮತ್ತೊಂದು ಗಂಭೀರ ಸಮಸ್ಯೆಗೆ ಕಾರಣವಾಗಿದೆ.

ಕೊರೊನಾ ವೈರಸ್ ಸೋಂಕು ಭಾರತಕ್ಕೂ ಕಾಲಿಡುವ ಭೀತಿ ಹಿನ್ನೆಲೆಯಲ್ಲಿ ದೇಶದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಬೆಂಗಳೂರು ಸೇರಿ ದೇಶದ ವಿವಿಧೆಡೆ ಚೀನಾದಿಂದ ಬಂದ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದ್ದು, ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಚೀನಾದ ವುಹಾನ್ ನಗರಿಯಲ್ಲಿ ಮೊದಲು ಕಾಣಿಸಿಕೊಂಡ ಕರೋನಾ ಸೋಂಕು ವಿಶ್ವದ ಅನೇಕ ದೇಶಗಳಿಗೂ ಹಬ್ಬಿದ್ದು , ಆತಂಕ ಸೃಷ್ಟಿಸಿದೆ.ಚೀನಾಗೆ ಪ್ರವಾಸ ಕೈಗೊಳ್ಳದಂತೆ ವಿಶ್ವದ ಬಹುತೇಕ ಎಲ್ಲ ರಾಷ್ಟ್ರಗಳೂ ತನ್ನ ನಾಗರಿಕರಿಗೆ ಸ್ಪಷ್ಟ ಸೂಚನೆ ನೀಡಿದೆ. ಅಲ್ಲದೆ, ಚೀನಾದಲ್ಲಿ ಸಿಲುಕಿರುವ ತನ್ನ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಯನ್ನೂ ಆರಂಭಿಸಿದೆ. ಭಾರತವೂ ಸಹ ಚೀನಾದಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights