ಮಣಿಪುರ ಮೂಲದ ಮಹಿಳೆಗೆ ಉಗಿದು ಕೊರೊನ ಎಂದು ನಿಂದಿಸಿದ ದೆಹಲಿ ವ್ಯಕ್ತಿ: ಎಫ್ ಐ ಆರ್ ದಾಖಲು

ವಾಯುವ್ಯ ದೆಹಲಿಯಲ್ಲಿ ಭಾನುವಾರ ಸಂಜೆ ದೆಹಲಿ ವ್ಯಕ್ತಿಯೊಬ್ಬ ತನ್ನ ಜೊತೆ ಅನುಚಿತ ವರ್ತನೆ ತೋರಿಸಿರುವುದಾಗಿ 25 ವರ್ಷದ ಮಣಿಪುರ ಮೂಲದ ಮಹಿಳೆ ದೂರಿದ್ದಾರೆ. ತನ್ನ ಮೇಲೆ ಉಗಿದು, ಕೊರೊನ ಎಂದು ಕರೆದು ದ್ವಿಚಕ್ರ ವಾಹಕನದಲ್ಲಿ ತಪ್ಪಿಸಿಕೊಂಡ  ಎಂದು ದೂರಿದ್ದಾರೆ.

ದೆಹಲಿ ವಾಯುವ್ಯ ಡಿಸಿಪಿ ವಿಜಯಂತ ಆರ್ಯ ಎಫ್ ಐ ಆರ್ ದಾಖಲಿಸಿದ್ದು ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.

ಯುವತಿ ಪ್ರಾದೇಶಿಕ ಮಾರುಕಟ್ಟೆಯಲ್ಲಿ ದಿನಬಳಕೆಯ ಸಾಮಾನು ಖರೀದಿಸಿ ತನ್ನ ವಿಜಯನಗರದ ಮನೆಗೆ ನಡೆದುಹೋಗುತ್ತಿದ್ದಾಗ ಈ ಘಟನೆ ನಡೆದಿದೆ. “ಕತ್ತಲಲ್ಲಿ ನಡೆದು ಹೋಗುವಾಗ ಸುಮಾರು ೫೦ ವರ್ಷದ ವ್ಯಕ್ತಿ ಅನುಚಿತವಾಗಿ ವರ್ತಿಸಿ ಕೆಟ್ಟದಾಗಿ ಮಾತನಾಡಿದ್ದಾನೆ. ಇದಕ್ಕೆ ವಿರೋಧಿಸಿದಾಗ ಆಗ ಆಕೆಯ ಮೇಲೆ ಉಗಿದು, ಕೊರೊನ ಎಂದು ಕರೆದು ತಪ್ಪಿಸಿಕೊಂಡಿದ್ದಾನೆ” ಎಂದು ದೂರು ನೀಡಿರುವುದಾಗಿ ಹಿರಿಯ ಪೋಲಿಸ್ ಅಧಿಕಾರಿ ಹೇಳಿದ್ದಾರೆ. ಪೊಲೀಸರು ಹತ್ತಿರದಲ್ಲಿ ಇದ್ದ ಸಿಸಿಟಿವಿಗಳ ಸಹಾಯದಿಂದ ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ.

ಈ ಆರೋಪಿಯನ್ನು ಪತ್ತೆ ಹಚ್ಚಿ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ದೆಹಲಿ ಮುಖ್ಯಮಂತ್ರಿ ಆಗ್ರಹಿಸಿದ್ದಾರೆ. “ನಾವು ಕೋವಿದ್-19 ರ ವಿರುದ್ಧ ಹೋರಾಡಲು ಇಡೀ ದೇಶ ಒಗ್ಗೂಡಬೇಕು” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಚೈನಾ ಮೂಲದಿಂದ ಕೊರೊನ ರೋಗ ವಿಶ್ವದಾದ್ಯಂತ ಹರಡಿರುವುದರಿಂದ ಭಾರತವೂ ಸೇರಿ ವಿವಿಧ ರಾಷ್ಟ್ರಗಳಲ್ಲಿ ಜನಾಂಗೀಯ ನಿಂದನೆ ಹೆಚ್ಚಿರುವುದು ವರದಿಯಾಗಿದೆ. ಇತರ ದೇಶಗಳಲ್ಲಿ ಚೈನಾ ನಾಗರಿಕರ ಮೇಲೆ ಈ ನಿಂದನೆ ನಡೆಯುತ್ತಿದ್ದರೆ ಭಾರತದಲ್ಲಿ ಈಶಾನ್ಯ ರಾಜ್ಯಗಳ ನಾಗರಿಕರು ಇಂತಹ ನಿಂದನೆಗೆ ಗುರಿಯಾಗಿದ್ದಾರೆ.

ಇಂತಹುದೇ ಒಂದು ಘಟನೆ ಗುಜರಾತ್ ನಲ್ಲಿ ಕೂಡ ನಡೆದಿದ್ದು, ವಿದೇಶಕ್ಕೆ ತೆರಳಿದ ಯಾವುದೇ ಇತಿಹಾಸ ಇಲ್ಲದೆ ಇದ್ದರೂ, ಕೊರೊನ ಸೋಂಕಿನ ಯಾವುದೇ ಗುಣಲಕ್ಷಣ ಇಲ್ಲದೆ ಇದ್ದರೂ ಮತ್ತು ಕೊರೊನ ಸೋಂಕಿನ ವ್ಯಕ್ತಿಗಳ ಸಂಪರ್ಕಕ್ಕೆ ಬರದೆ ಇದ್ದರೂ, ಅನಾಮದೇಯ ದೂರಿನಿಂದ ನಾಗಾಲ್ಯಾಂಡ್ ಮೂಲದ ವ್ಯಕ್ತಿಗಳು ಇಡೀ ಒಂದು ರಾತ್ರಿ ಪ್ರತ್ಯೇಕತೆಯಲ್ಲಿ ಕಳೆಯುವಂತೆ ಅಧಿಕಾರಿಗಳು ಮಾಡಿದ್ದರು.

ಎಲ್ಲರೂ ಒಗ್ಗೂಡಿ ಈ ಸಾಂಕ್ರಾಮಿಕದ ವಿರುದ್ಧ ಹೋರಾಡಬೇಕಾದ ಸಂದರ್ಭದಲ್ಲಿ ಜನಾಂಗೀಯ ನಿಂದನೆಯಲ್ಲಿ ಕೆಲವರು ತೊಡಗಿಕೊಂಡಿರುವುದು ಆತಂಕಕಾರಿಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights