ಮನೆ ಪಕ್ಕದ ಕಿರಾಣಿ ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡಿ – ದಚ್ಚು ಪತ್ನಿ ಮನವಿ
ಕೊರೊನಾ ಲಾಕ್ ಡೌನ್ ನಿಂದಾಗಿ ಇಡೀ ರಾಜ್ಯವೇ ಆರ್ಥಿಕ ಸಂಕಷ್ಟ ಅನುಭವಿಸುತ್ತದೆ. ಇದಕ್ಕಾಗಿ ಹಲವಾರು ನಟ-ನಟಿಯರು ಬಡವರಿಗೆ ಹಣದ ಸಹಾಯ, ಆಹಾರಗಳ ಕಿಟ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇವರಲ್ಲಿ ಚಾಲೆಂಜಿಂಗ್ ಸ್ಟಾರ್ ಕೂಡ ಒಬ್ಬರು. ಸದ್ಯ ದಚ್ಚು ಪತ್ನಿ ವಿಜಯಲಕ್ಷ್ಮಿ ಕೂಡ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ನೆರವಾಗಿ ಎನ್ನುವ ಮನವಿ ಮಾಡಿಕೊಂಡಿದ್ದಾರೆ.
ಹೌದು… ಲಾಕ್ ಡೌನ್ ನಿಂದಾಗಿ ಅಂಗಡಿ ಬಾಗಿಲುಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಕಾಲಕ್ರಮೇಣ ಅಂಗಡಿಗಳು ತೆರೆಯಲಾರಂಭಿಸಿವೆ. ಆದರೆ ಅದೆಷ್ಟೋ ಅಂಗಡಿಗಳಲ್ಲಿ ವ್ಯಾಪಾರವೇ ಇಲ್ಲದಂತಾಗಿ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ದಿನಸಿ ಅಂಗಡಿಗಳು, ತರಕಾರಿ, ಹಣ್ಣು ಹೀಗೆ ದಿನನಿತ್ಯ ಬಳಕೆಯ ವಸ್ತುಗಳ ಖರೀದಿಗೂ ಜನ ಅಂಗಡಿಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ನಟ ದರ್ಶನ್ ಪತ್ನಿ ಕಿರಾಣಿ ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡಿ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಕೊರೊನಾ ಲಾಕ್‍ಡೌನ್‍ನಿಂದ ಸಣ್ಣ ಉದ್ಯಮಗಳು ದೊಡ್ಡ ಸಂಕಷ್ಟವನ್ನು ಅನುಭವಿಸುತ್ತಿವೆ.ಲಾಕ್‍ಡೌನ್ ಮುಗಿದ ನಂತರ ಸ್ಥಳೀಯ ಮಾರಾಟಗಾರರಿಂದ ತರಕಾರಿಗಳನ್ನು ಖರೀದಿಸಿ. ಸ್ಟಾರ್ ಹೋಟೆಲ್‍ಗೆ ಹೋಗಿ ಕಾಫಿ ಕುಡಿಯುವ ಬದಲು ನಿಮ್ಮ ಮನೆಯ ಹತ್ತಿರ ಇವರ ಅಂಗಡಿಗೆ ಹೋಗಿ ಕಾಫಿ ಕುಡಿಯಿರಿ. ಅಮೆಜಾನ್ ಬದಲಿಗೆ ಸ್ಥಳೀಯ ಕಿರಾಣಿ ಅಂಗಡಿಗಳಲ್ಲಿ ದಿನಸಿ ವಸ್ತುಗಳನ್ನು ಖರೀದಿಸಿ. ಈ ಕೊರೊನಾ ಮಹಾಮಾರಿ ವೇಳೆ ಸಣ್ಣ ವ್ಯಾಪಾರಿಗಳಿಗೆ ನಿಮ್ಮ ಸಹಾಯದ ಅಗತ್ಯವಿದೆ’ ಎಂದು ಮನವಿ ಮಾಡಿಕೊಂಡಿದ್ದಾರೆ.
“ಅಮೆಜಾನ್, ಪಿಜ್ಜಾ, ಕೆಎಫ್‍ಸಿ, ಮ್ಯಾಕ್ ಡೊನಾಲ್ಡ್ ಲಾಕ್‍ಡೌನ್ ಇದ್ದರೂ ಬದುಕುತ್ತವೆ. ಆದರೆ ಸಣ್ಣ ವ್ಯಾಪಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಅಕ್ಕಪಕ್ಕದ ಕಿರಾಣಿ ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡಿ. ಇದರಿಂದ ಅವರ ಬದುಕಿಗೆ ಸಹಾಯ ಆಗುತ್ತದೆ” ಎಂದು ಎಂದು ವಿಜಯಲಕ್ಷ್ಮೀ ಟ್ವೀಟ್ ಮಾಡಿದ್ದಾರೆ.

