ಮಾರಣಾಂತಿಕ ಕೊರೊನಾ ತಡೆಗೆ ಕರೆ : ನಮೋರ ಜನತಾ ಕರ್ಫ್ಯೂಗೆ ಜನ ಸಜ್ಜು
ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಸಿಲಿಕಾನ್ ಸಿಟಿ ಮಂದಿ ಒಂದು ದಿನ ಮುಂಚಿತವಾಗಿ ಸಿದ್ಧಗೊಂಡಿದ್ದಾರೆ.ಇಂದಿನಿಂದಲೇ ಜನ ಮನೆ ಬಿಟ್ಟು ಹೊರಬರುವುದನ್ನ ಬಹುತೇಕ ಕಡಿಮೆ ಮಾಡಿದ್ದಾರೆ. ಜೊತೆಗೆ ನಾಳೆಗೆ ಬೇಕಾದ ವಸ್ತುಗಳನ್ನ ಇಂದೇ ಖರೀದಿ ಮಾಡಲು ಮುಂದಾಗಿದ್ದಾರೆ.
ಗುರುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, “ಮಾರಣಾಂತಿಕ ಕೊರೋನಾ ಹಬ್ಬುತ್ತಿರುವ ಇಂತಹ ಸಂಕಷ್ಟಕರ ಸಮಯದಲ್ಲಿ ಜನರು ತಮ್ಮಷ್ಟಕ್ಕೆ ತಾವೇ ಕರ್ಫ್ಯೂ ವಿಧಿಸಿಕೊಳ್ಳಬೇಕು. ಈ ಮೂಲಕ ಮಾರಕ ಸೋಂಕು ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಇದೇ ಮಾರ್ಚ್ 22ರ ಭಾನುವಾರದಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ದೇಶದ ಪ್ರತಿಯೊಬ್ಬರು ಜನತಾ ಕರ್ಫ್ಯೂ ಪಾಲಿಸಬೇಕು. ಈ ಸಮಯದಲ್ಲಿ ಯಾರೊಬ್ಬರೂ ಕೂಡ ತಮ್ಮ ಮನೆಯಿಂದ ಹೊರಗೆ ಬರಬಾರದು” ಎಂದು ಕರೆ ನೀಡಿದ್ದರು.
ಪ್ರಧಾನಿ ನರೇಂದ್ರ ಮೋದಿಯ ಹೊಸ ಪ್ರಯತ್ನಕ್ಕೆ ಬೆಂಗಳೂರು ಜನರು ಸಾಥ್ ನೀಡಿದ್ದಾರೆ. ಮೋದಿಯ ಜನತಾ ಕರ್ಫ್ಯೂಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ನಾಳೆ ಎಲ್ಲರೂ ಮನೆ ಬಿಟ್ಟು ಹೊರಗೆ ಬರದೆ ಇರುವುದಕ್ಕೆ ಸಿದ್ಧಗೊಂಡಿದ್ದಾರೆ.
ಭಾನುವಾರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಯಾರು ಕೂಡ ಮನೆಯಿಂದ ಹೊರಗೆ ಬರಬಾರದು ಹಾಗೂ ಸಂಜೆ 5 ಗಂಟೆಗೆ ಅವರರವರ ಮನೆಯ ಬಾಲ್ಕಾನಿಯಲ್ಲಿ ನಿಂತು ಮಹಾಮಾರಿಯನ್ನು ಮಟ್ಟಹಾಕಲು ತಮ್ಮ ಪ್ರಾಣವನ್ನು ಲೆಕ್ಕಿಸದೇ ಶ್ರಮಿಸುತ್ತಿರುವ ವೈದ್ಯರು, ದಾದಿಯರು, ಪೊಲೀಸರು, ಪತ್ರಿಕ್ಯೋದ್ಯಮದ ಬಳಗದವರಿಗೆ ಚಪ್ಪಾಳೆ ಹೊಡೆಯುವ ಮೂಲಕ ಅವರಿಗೆ ಮನಪೂರ್ವಕ ಅಭಿನಂದನೆ ಸಲ್ಲಿಸಲ್ಲು ಬೆಂಗಳೂರು ಜನರು ತಯಾರಾಗಿದ್ದಾರೆ.
ಈಗಾಗಲೇ ಸಿನಿಮಾ, ಸಿರೀಯಲ್, ಮಾಲ್, ಪಬ್, ಪಾರ್ಕ್ಗಳನ್ನ ಬಂದ್ ಮಾಡಲಾಗಿದೆ. ನಾಳೆ ಮೆಟ್ರೋ, ಟ್ಯಾಕ್ಸಿ, ಆಟೋ, ಕೆಎಸ್ ಆರ್ಟಿಸಿ, ಬಿಎಂಟಿಸಿ ಬಂದ್, ಆಸ್ಪತ್ರೆಗಳ ಓಪಿಡಿ ಕೂಡ ಬಂದ್ ಆಗಿಲಿದೆ. ಇನ್ನೂ ಮಾರುಕಟ್ಟೆ, ಹಾಲು, ಮೊಸರು ಎಲ್ಲವೂ ಬಂದ್ ಆಗಲಿದೆ.ಬೆಂಗಳೂರಿನಲ್ಲಿ ಎಲ್ಲ ಹೋಟೆಲ್, ಬೇಕರಿ, ಜ್ಯೂಸ್ ಅಂಗಡಿ ಬಾಗಿಲು ತೆರೆಯುವುದಿಲ್ಲ. ರಾಜ್ಯದ ಇತರ ಭಾಗಗಳಲ್ಲೂ ಇದು ಜಾರಿಗೆ ಬರುವ ಸಾಧ್ಯತೆ ಇದೆ. ಎಪಿಎಂಪಿ, ಕ್ಯಾಟರಿಂಗ್ ಸೇವೆ, ರಾಜ್ಯಾದ್ಯಂತ ಎಲ್ಲ ಆಭರಣ ಮಳಿಗೆಗಳು, ಆಟೋ, ಲಾರಿ ಸಂಚಾರ ಸ್ತಬ್ಧ ಸಾಧ್ಯತೆ ಇದೆ. ಓಲಾ, ಉಬರ್ ಟ್ಯಾಕ್ಸಿ ಸೇವೆ ಇರುವುದಿಲ್ಲ. ರಾಜ್ಯದ ಎಲ್ಲಾ ಆಭರಣ ಮಳಿಗೆಗಳು ಸಂಪೂರ್ಣ ಬಂದ್ ಆಗಲಿದೆ. ಒಟ್ಟಿನಲ್ಲಿ ನಾಳೆ ಜನ ತುರ್ತು ಪರಿಸ್ಥಿತಿಯನ್ನು ಬಿಟ್ಟು ಮನೆಯಿಂದ ಹೊರಗಡೆ ಬರುವುದಿಲ್ಲ.
ಭಾನುವಾರ ಮುಂಜಾನೆಯಿಂದ ಎಲ್ಲರೂ ಅದರಲ್ಲೂ ಹಿರಿಯ ನಾಗರಿಕರು ಹಾಗೂ ಮಕ್ಕಳು ಯಾರು ಕೂಡ ಹೊರಗೆ ಬರದ ರೀತಿಯಲ್ಲಿ ನೋಡಿಕೊಳ್ಳುವಂತೆ ಪ್ರಧಾನಿ ಸಂದೇಶ ಸಾರಿದ್ದರು. ಪ್ರಧಾನಿ ನರೇಂದ್ರ ಮೋದಿಯ ಈ ಸಂದೇಶಕ್ಕೆ ಬದ್ಧರಾಗಿರುಲು ಜನರು ಸಜ್ಜಾಗಿದ್ದಾರೆ.

