ಲಾಕ್ ಡೌನ್ ಭವಿಷ್ಯ ನಿರ್ಧಾರ : ಇಂದು ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಮೋದಿ ಮಾತು…
ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವೈರಸ್ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಬರೋಬ್ಬರಿ 3,604 ಕೊರೊನಾ ಕೇಸ್ ದಾಖಲಾಗಿದ್ದು, ಈವರೆಗೆ ಸೋಂಕಿತರ ಸಂಖ್ಯೆ 70,756ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಇಂದು ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ದೇಶದ ಲಾಕ್ ಡೌನ್ ಭವಿಷ್ಯ ಕೂಡ ನಿರ್ಧಾರವಾಗುವ ಸಾಧ್ಯತೆ ಕೂಡ ಇದೆ.
ಹೌದು… ವಿಶ್ವ ನರ್ಸ್ ದಿನವಾದ ಇಂದು ಕೊರೊನಾ ತಡೆಯುವ ಯುದ್ಧದಲ್ಲಿ ಮುಂಚುಣಿಯಲ್ಲಿ ನಿಂತು ಹೋರಾಡುತ್ತಿರುವ ನರ್ಸ್ ಗಳಿಗೆ ಗುಡ್ ನ್ಯೂಸ್ ಸಿಗುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ. ಮೋದಿ ಅವರು ರಾತ್ರಿ 8 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಿಎಂಒ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ. ಈ ವೇಳೆ ಲಾಕ್ಡೌನ್ ವಿಸ್ತರಣೆ ಬಗ್ಗೆ ಮೋದಿ ಮಾಹಿತಿ ನೀಡುವ ಸಾಧ್ಯತೆ ಇದೆ.
ಜೊತೆಗೆ ಕೊರೊನಾ ವಿರುದ್ಧ ಹೋರಾಡುತ್ತಿರುವ ನರ್ಸ್ ಗ ಳಿಗೆ ಧನ್ಯವಾದಗಳನ್ನು ಸಲ್ಲಿಸಲಿದ್ದಾರೆ. ಜೊತೆಗೆ ನಿನ್ನೆಯಷ್ಟೇ ದೇಶದ ಎಲ್ಲಾ ಸಿಎಂಗಳ ಜೊತೆಗೆ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದು ಈ ಬಗ್ಗೆ ಪ್ರಮುಖ ಅಂಶಗಳನ್ನು ಹಂಚಿಕೊಳ್ಳುವ ಸಾಧ್ಯತೆ ಕೂಡ ಇದೆ. ಈ ವೇಳೆ ಲಾಕ್ಡೌನ್ ವಿಸ್ತರಣೆ ಬಗ್ಗೆ ಮೋದಿ ಎಲ್ಲ ಸಿಎಂಗಳಿಂದ ಸಲಹೆಗಳನ್ನು ಪಡೆದರು. ಅಲ್ಲದೆ, ಲಾಕ್ಡೌನ್ ವಿನಾಯಿತಿ ನೀಡುವ ಬಗ್ಗೆಯೂ ಚರ್ಚೆ ನಡೆಸಿದ್ದರು. ಆ ಎಲ್ಲ ವಿಚಾರಗಳನ್ನು ಇಂದು ಮೋದಿ ಪ್ರಸ್ತಾಪಿಸಲಿದ್ದಾರೆ ಎನ್ನಲಾಗಿದೆ.
ಕೇಂದ್ರದ ಪ್ರಕಾರ ಇದುವರೆಗೂ 70,756 ಸೋಂಕಿತರ ಪೈಕಿ ಕೇವಲ 22454 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಮೂಲಕ ಪ್ರಸ್ತುತ ದೇಶದಲ್ಲಿ 46008 ಸಕ್ರಿಯ ಪ್ರಕರಣಗಳಿವೆ. ಎಲ್ಲರಿಗೂ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ.
https://twitter.com/PMOIndia/status/1260097752073003008

