ರೈತ-ಕಾರ್ಮಿಕರ ಬದುಕನ್ನು ಸಮಾಧಿ ಮಾಡಲು ಮುಂದಾಗಿದೆ ಸರ್ಕಾರ: ಡಿಕೆಶಿ

ಕಾರ್ಮಿಕ ಕಾಯ್ದೆಯನ್ನು ತಿದ್ದುಪಡಿ ಮಾಡಲು ಹೊರಟಿರುವ ರಾಜ್ಯ ಸರ್ಕಾರ, ಉದ್ಯಮಪತಿಗಳಿಗೆ ಲಾಭ ಮಾಡಿಕೊಡಲು ಮುಂದಾಗಿದೆ. ಇದರಿಂದಾಗಿ, ರೈತರ ಮತ್ತು ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಂಡು ಅವರ ಮೇಲ ಸಮಾಧಿ ಕಟ್ಟಲು ಸರ್ಕಾರ ಮುಂದಾಗಿದೆ  ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜ್ಯ ಸರ್ಕಾರದ ವಿರುದ್ಧ  ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ಕಾರ್ಮಿಕ ಕಾಯ್ದೆಯನ್ನು ರಾಜ್ಯ ಸರ್ಕಾರ ತಿದ್ದುಪಡಿ ಮಾಡಲು ಮುಂದಾಗಿದ್ದು, ತಿದ್ದುಪಡಿ ಕಾಯ್ದೆಯಲ್ಲಿ ಸಾಕಷ್ಟು ಕಾರ್ಮಿಕವಿರೋಧಿ ಅಂಶಗಳಿವೆ. ಹಾಗಾಗಿ ತಿದ್ದುಪಡಿ ತರಕೂಡದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

ಸುದ್ದಿಗೋ‍ಷ್ಟಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, “ಸರ್ಕಾರ ಎಲ್ಲಾ ವರ್ಗದ ಜನರನ್ನ ಸರಿಸಮನಾಗಿ ನೋಡುವಲ್ಲಿ ವಿಫಲವಾಗಿದೆ. ಮೇಲ್ವರ್ಗದ ಜನರ ಮಾತು ಕೇಳಿಕೊಂಡು ಬಿಜೆಪಿ ನಾಯಕರು ಸಕಾರ ನಡೆಸುತ್ತಿದ್ದಾರೆ. ಕಾರ್ಮಿಕ ಕಾಯ್ದೆಯ ವಿಚಾರದಲ್ಲಿ ಸಾಕಷ್ಟು ತಿದ್ದುಪಡಿ ಮಾಡಲು ಹೊರಟಿದ್ದಾರೆ.

ಈ ಮೂಲಕ ರೈತರ ಮತ್ತು ಕಾರ್ಮಿಕರನ್ನು ಸಮಾಧಿ ಮಾಡಲು ಹೊರಟಿದ್ದಾರೆ. ಆದರೆ, ನಾವು ಇದಕ್ಕೆ ಅವಕಾಶ ನೀಡುವುದಿಲ್ಲ. ನೂತನ ತಿದ್ದುಪಡಿ ಕಾಯ್ದೆಯ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಿದ್ದೇವೆ, ರೈತರ ಮತ್ತು ಕಾರ್ಮಿಕರ ಪರ ಕಾಂಗ್ರೆಸ್‌ ಪಕ್ಷ ನಿಲ್ಲಲಿದೆ” ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಕೊರೋನಾ ನಿಯಂತ್ರಿಸುವಲ್ಲಿ ಕೇಂದ್ರ – ರಾಜ್ಯ ಸರ್ಕಾರಗಳು ವಿಫಲ: ಸಿದ್ದರಾಮಯ್ಯ

ಇದೇ ಸಂದರ್ಭದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಸಿದ್ದರಾಮಯ್ಯ, “ಕೋವಿಡ್ 19 ಮಹಾಮಾರಿ ರೋಗವನ್ನು ಮೊದಲೇ ದಿನದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ತಡೆಗಟ್ಟುವಲ್ಲಿ ವಿಫಲವಾಗಿದೆ” ಎಂದು ಆರೋಪಿಸಿದ್ದಾರೆ.

“ಜನವರಿ 30 ರಂದು ಕೊರೋನಾ ವೈರಸ್‌ ಕೇರಳದಲ್ಲಿ ಪತ್ತೆಯಾಗಿತ್ತು. ಹೀಗಾಗಿ ದೇಶದಲ್ಲಿ ಈ ಸೋಂಕು ಹರಡದಂತೆ ತಡೆಯಲು ಜನವರಿ, ಫೆಬ್ರವರಿ ಸೇರಿದಂತೆ ಎರಡು ತಿಂಗಳ ಸಮಯಾವಕಾಶ ಇತ್ತು. ಆದರೆ, ಲಾಕ್ ಡೌನ್ ಮಾಡಿದ್ದು ಮಾರ್ಚ್ ಕೊನೆ ವಾರದಲ್ಲಿ.

ಅದಕ್ಕೂ ಮೊದಲು ಸಿದ್ದತೆಗಳನ್ನ ಮಾಡಲು ಸಾಕಷ್ಟು ಸಮಯವಿತ್ತು. ಆಗ ಯಾವ ಸರ್ಕಾರಗಳೂ ಏನೂ ಮಾಡಲಿಲ್ಲ. ಕೇಂದ್ರ ಸರ್ಕಾರ ನರೇಂದ್ರ ಮೋದಿ ಅವರ ವಿದೇಶಿ ವಿಮಾನಯಾನ ಬಂದ್ ಮಾಡಿದ್ರೆ ಈ ಸಮಸ್ಯೆ ಇರುತ್ತಿರಲಿಲ್ಲ. ಇಷ್ಟು ದೊಡ್ಡ ಮಟ್ಟದಲ್ಲಿ ರೋಗ ಹಬ್ಬುತ್ತಿರಲಿಲ್ಲ” ಎಂದು ಕಿಡಿಕಾರಿದ್ದಾರೆ.

ಇದೇ ಸಂದರ್ಭದಲ್ಲಿ ತಬ್ಲಿಘಿಗಳ ಬಗ್ಗೆಯೂ ಮಾತನಾಡಿರುವ ಸಿದ್ದರಾಮಯ್ಯ, “ದೇಶದಾದ್ಯಂತ ಕೊರೋನಾ ವೈರಸ್ ಹೆಚ್ಚಾಗಲು ತಬ್ಲಿಘಿಗಳೇ ಕಾರಣ ಎಂದು ರಾಜಕೀಯ ಮಾಡಲಾಗುತ್ತಿದೆ. ಆದರೆ, ಇಟಲಿ, ಅಮೇರಿಕಾ, ಸ್ಪೇನ್ ನಲ್ಲಿ ಯಾವ ತಬ್ಲಿಘಿಗಳಿದ್ದಾರೆ? ಅಸಲಿಗೆ ತಬ್ಲಿಘಿಗಳಿಗೆ ಸಭೆ ಮಾಡಲು ಲೈಸೆನ್ಸ್ ಕೊಟ್ಟವರ್ಯಾರು?, ಪೊಲೀಸ್ ಮತ್ತು ಕೇಂದ್ರ ಸರ್ಕಾರವೇ ಅನುಮತಿ ಕೊಟ್ಟು ಈಗ ಗೂಬೆ ಕೂರಿಸುವುದು ಎಷ್ಟು ಸರಿ? ಇವೆಲ್ಲಾ ಆರ್‌ಎಸ್‌ಎಸ್‌ ನವರ ಹುನ್ನಾರ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಿಎಂ ಕೇರ್ ಹಣ ಎಲ್ಲಿ ಹೋಯ್ತು?

“ಈವರೆಗೆ 35,000 ಕೋಟಿ ಹಣ ಪಿಎಂ ಫಂಡ್ ಗೆ ಬಂದಿದೆ. ಕರ್ನಾಟಕದಿಂದ ಮೂರು ಸಾವಿರ ಕೋಟಿ ಹಣ ಹೋಗಿದೆ. ಈ ಹಣವನ್ನು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಕೊಡೋದಕ್ಕೆ ಆಗಲ್ವಾ?

ನರೇಂದ್ರ ಮೋದಿ ಕೋವಿಡ್ ಪ್ಯಾಕೇಜ್ ಎಂದು ಯಾವ ರಾಜ್ಯಕ್ಕೂ ಒಂದು ರೂಪಾಯಿ ಹಣ ನೀಡಿಲ್ಲ. ಆದರೆ, ದೀಪ ಹಚ್ಚಿ, ಚೆಪ್ಪಾಳೆ ಹೊಡಿರಿ ಅಂತಾರೆ. ಇದ್ರಿಂದ ಬಡವರ ಕಷ್ಟ ನೀಗುತ್ತಾ?” ಎಂದು ಪ್ರಶ್ನೆ ಮಾಡಿರುವ ಸಿದ್ದರಾಮಯ್ಯ,

“ಮಾರ್ಚ್ 24 ರಂದು ಲಾಕ್‌ಡೌನ್ ಮಾಡಿದ್ದರೂ ಸಹ ವಲಸೆ ಕಾರ್ಮಿಕರನ್ನು ಅವರವರ ಮನೆಗೆ ಕಳುಹಿಸಲು ಯಾವುದೇ ಸಿದ್ದತೆ ಮಾಡಿಕೊಂಡಿರಲಿಲ್ಲ. ಇದರಿಂದ ವಲಸೆ ಕಾರ್ಮಿಕರು ಸಾಕಷ್ಟು ಪರದಾಡಿದ್ದಾರೆ. ಮೊದಲೇ ಎಚ್ಚೆತ್ತುಕೊಂಡಿದ್ದರೆ ಕಾರ್ಮಿಕರಿಗೆ ಈ ಸಮಸ್ಯೆ ಬರುತ್ತಿರಲಿಲ್ಲ.

ಇದೀಗ 5.05 ಲಕ್ಷ ವಲಸೆ ಕಾರ್ಮಿಕರು ಆನ್‌ಲೈನ್‌ ನಲ್ಲಿ ಅಪ್ಲೈ ಮಾಡಿದ್ದಾರೆ. ಆದರೆ, ಅರವತ್ತು ಸಾವಿರ ಮಂದಿಗೆ ಪರ್ಮಿಷನ್ ಕೊಟ್ಟು ಹಣ ವಸೂಲಿ ಮಾಡಲಾಗುತ್ತಿದೆ. ಹಾಗಾದರೆ ಉಳಿದವರ ಕಥೆ ಏನು? ಹೀಗಾಗಿ ಎಲ್ಲಾ ವಲಸೆ ಕಾರ್ಮಿಕರನ್ನು ಉಚಿತವಾಗಿ ಅವರವರ ರಾಜ್ಯಗಳಿಗೆ ಕಳುಹಿಸುವ ಕೆಲಸವಾಗಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights