ಫ್ಯಾಕ್ಟ್ಚೆಕ್ : ತಿರುಪತಿ ಲಡ್ಡು ಪ್ರಸಾದಕ್ಕೆ ಬಳಸಲಾಗುತ್ತಿದ್ದ ನಂದಿನಿ ತುಪ್ಪವನ್ನು ಪೂರೈಕೆ ಮಾಡಲು ಕಾಂಗ್ರೆಸ್ ವಿಫಲವಾಗಿದೆಯೇ?
ತಿರುಪತಿ ಲಡ್ಡು ತಯಾರಿಗೆ ಕರ್ನಾಟಕದ ನಂದಿನಿ ತುಪ್ಪ ಸರಬರಾಜು ಮಾಡದೇ ಕಾಂಗ್ರೆಸ್ ಪಕ್ಷ ತನ್ನ ಅಜೆಂಡಾಕ್ಕಾಗಿ ಸುವರ್ಣ ಕರ್ನಾಟಕವನ್ನು ನಾಶ ಮಾಡಲು ಮುಂದಾಗಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಸರಣಿ ಟ್ವೀಟ್ ಮಾಡಿದ್ದಾರೆ.
https://twitter.com/madhumaiya/status/1686030784824811520
ಈ ಹಿಂದೆ ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಚುನಾವಣಾ ಪ್ರಚಾರಕ್ಕೆಂದು ಕರ್ನಾಟಕಕ್ಕೆ ಬಂದಿದ್ದ ಗೃಹ ಸಚಿವ ಅಮಿತ್ ಶಾ ಕೆಎಂಎಫ್ ಅನ್ನು ಅಮೂಲ್ನೊಂದಿಗೆ ವಿಲಿನಗೊಳಿಸುವ ಮಾತುಗಳನ್ನಾಡಿದ್ದರು, ಇದಕ್ಕೆ ಕರ್ನಾಟಕದಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಈಗ ಅದರ ಮುಯ್ಯಿ ತೀರಿಸಿಕೊಳ್ಳುಲು ಕಾದು ಕುಳಿತಂತಿದ್ದ ಬಜೆಪಿಯು, ಈಗ ತಿರುಪತಿ ದೇವಸ್ಥಾನದ ಪ್ರಸಾದವಾದ ತಿರುಪತಿ ಲಡ್ಡು ತಯಾರಿಕೆಗೆ ಸರಬರಾಜಾಗುತ್ತಿದ್ದ ನಂದಿನಿ ತುಪ್ಪ ಸ್ಥಗಿತಗೊಳ್ಳಲು ರಾಜ್ಯದ ಕಾಂಗ್ರೆಸ್ ಸರ್ಕಾರ ಕಾರಣ ಎಂದು ಹೇಳಿಕೊಳ್ಳುತ್ತಿದೆ.
https://twitter.com/yoganarasimha19/status/1685964184780193792
ಕೇರಳದಲ್ಲಿ ನಂದಿನಿ ಮಾರುಕಟ್ಟೆ ವಿಸ್ತರಣೆಗೆ ವಾಪಸ್ ಬೆನ್ನಲ್ಲೇ ತಿರುಪತಿ ಲಡ್ಡು ತಯಾರಿಕೆಗೆ ಬಳಸುತ್ತಿದ್ದ ನಂದಿನಿ ತುಪ್ಪದ ಪೂರೈಕೆಯನ್ನು ಕರ್ನಾಟಕ ಸರ್ಕಾರವೇ ಸ್ಥಗಿತಗೊಳಿಸಿದೆ.
“ದೇವಸ್ಥಾನ ಹಾಗೂ ಹಿಂದೂಗಳ ಶ್ರದ್ಧೆ-ಭಕ್ತಿಯ ವಿಚಾರಕ್ಕೆ ಬಂದಾಗ ಲಾಭ-ನಷ್ಟದ ಲೆಕ್ಕ ಹೇಳುವ ಕಾಂಗ್ರೆಸ್ ಇದೇ ಸೂತ್ರವನ್ನು ಇತರ ಧರ್ಮಗಳಿಗೆ ಅನ್ವಯಿಸಲು ಒಪ್ಪುವುದಿಲ್ಲ. ಹಿಂದೂಗಳೆಡೆಗೆ ತಾತ್ಸಾರ ತಮ್ಮ ಜಾತ್ಯಾತೀತ ಸೂತ್ರ ಎಂಬುದನ್ನು ಸಿದ್ದರಾಮಯ್ಯ ಅವರು ಈಗ ಮತ್ತೆ ರುಜುವಾತು ಮಾಡಿದ್ದಾರೆ” ಎಂದು ಬಿಜೆಪಿ ಆಕ್ರೋಶ ಹೊರಹಾಕಿದೆ.
ಚುನಾವಣೆಗೂ ಮುನ್ನ ನಂದಿನಿಯನ್ನು ದುರುಪಯೋಗ ಪಡಿಸಿಕೊಂಡ @INCKarnataka ಇಂದು ನಂದಿನಿಯ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದೆ.
ನಂದಿನಿಗೆ ರಾಜಕೀಯ ಸ್ಪರ್ಶ ನೀಡಿದ ಪರಿಣಾಮ ಕೇರಳ ಮಾರುಕಟ್ಟೆಯನ್ನು ನಂದಿನಿ ಈಗಾಗಲೇ ಕಳೆದುಕೊಂಡಿದೆ.
ಇದೀಗ ತಿರುಪತಿ ಲಡ್ಡುವಿಗೆ ನಂದಿನಿ ತುಪ್ಪ ಸರಬರಾಜು ನಿಲ್ಲಿಸುವ ಮೂಲಕ 50 ವರ್ಷಗಳ ಪರಂಪರೆಗೆ ಎಳ್ಳು ನೀರು… https://t.co/LFpX2OghEj
— BJP Karnataka (@BJP4Karnataka) July 31, 2023
“ಚುನಾವಣೆಗೂ ಮುನ್ನ ನಂದಿನಿಯನ್ನು ದುರುಪಯೋಗ ಪಡಿಸಿಕೊಂಡ ಕಾಂಗ್ರೆಸ್ ಇಂದು ನಂದಿನಿಯ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದೆ. ನಂದಿನಿಗೆ ರಾಜಕೀಯ ಸ್ಪರ್ಶ ನೀಡಿದ ಪರಿಣಾಮ ಕೇರಳ ಮಾರುಕಟ್ಟೆಯನ್ನು ನಂದಿನಿ ಈಗಾಗಲೇ ಕಳೆದುಕೊಂಡಿದೆ. ಇದೀಗ ತಿರುಪತಿ ಲಡ್ಡುವಿಗೆ ನಂದಿನಿ ತುಪ್ಪ ಸರಬರಾಜು ನಿಲ್ಲಿಸುವ ಮೂಲಕ 50 ವರ್ಷಗಳ ಪರಂಪರೆಗೆ ಎಳ್ಳು ನೀರು ಬಿಡಲಾಗಿದೆ” ಎಂದು ಬಿಜೆಪಿ ಟ್ವೀಟ್ ಮಾಡಿದೆ. ಹಾಗಿದ್ದರೆ ಬಿಜೆಪಿ ಮಾಡಿದ ಆರೋಪದ ಹಿಂದೆ ಎಷ್ಟು ಸತ್ಯೆವಿದೆ ಎಂದು ಪರಿಶೀಲಿಸೋಣ.
ಈ ವಿಚಾರವಾಗಿ ಕೆಎಂಎಫ್ ಎಂಡಿ ಜಗದೀಶ್ ಏನು ಹೇಳ್ತಾರೆ?
https://twitter.com/KarkalaUdaya/status/1686231234861821952
ಆಂಧ್ರಪ್ರದೇಶದ ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ತಡೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಎಂಎಫ್ ಎಂಡಿ ಜಗದೀಶ್, ಒಂದೂವರೆ ವರ್ಷದ ಹಿಂದೆಯೇ ನಂದಿನಿ ತುಪ್ಪ ಪೂರೈಕೆ ಸ್ಥಗಿತವಾಗಿದೆ. 2021-22ರಲ್ಲಿ 345 ಮೆಟ್ರಿಕ್ ಟನ್ ತುಪ್ಪ ಪೂರೈಕೆ ಮಾಡಿದ್ದೇವೆ. ಟೆಂಡರ್ ಮೂಲಕ ಭಾಗವಹಿಸಿದರೆ ನಮ್ಮ ರೈತರಿಗೆ ನಷ್ಟವಾಗುತ್ತದೆ. ಕಳೆದ ಬಾರಿ ನಾವು ಬಿಡ್ಡಿಂಗ್ನಲ್ಲಿ L3 ಇದ್ದರೂ ಖರೀದಿಸಿದ್ದಾರೆ. ಕೆಎಂಎಫ್ನಿಂದಲೇ ನಂದಿನಿ ತುಪ್ಪ ಖರೀದಿಸಿದ್ದಾರೆ. ಈಗಲೂ ನಮ್ಮ ಬೆಲೆಗೆ ಖರೀದಿಸಲು ಸಿದ್ಧರಿದ್ದರೆ ಪೂರೈಕೆ ಮಾಡುತ್ತೇವೆ. ಯಾವುದೇ ಗೊಂದಲವಿಲ್ಲ, ಈಗ ನಿಲ್ಲಿಸಿದ್ದಾರೆ ಅನ್ನೋದು ಸುಳ್ಳು ಎಂದರು.
ಈ ವಿಚಾರವಾಗಿ ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ್ ಏನು ಹೇಳ್ತಾರೆ?
ತಿರುಪತಿಗೆ 2005 ರಿಂದ 2020 ರವರೆಗೆ ನಂದಿನಿ ತುಪ್ಪ ಸಪ್ಲೈ ಆಗಿದೆ. ಟಿಟಿಡಿ ಆರು ತಿಂಗಳಿಗೊಮ್ಮೆ 1700-2000 ಮೆಟ್ರಿಕ್ ಟನ್ ತುಪ್ಪಕ್ಕೆ ಟೆಂಡರ್ ಕರೆಯುತ್ತಾರೆ.ಆಗ ಶೇ.45 ರಷ್ಟು ತುಪ್ಪ ಸರಬರಾಜು ಮಾಡುತ್ತೇವೆ. ನಮ್ಮ ನಂದಿನಿ ತುಪ್ಪ ವಿಶ್ವಾಸಾರ್ಹ, ಮನೆಯಲ್ಲಿ ತಯಾರಿಸುವಷ್ಟು ಉತ್ಕೃಷ್ಟ ಗುಣಮಟ್ಟ ಹೊಂದಿದೆ. 2020 ರಿಂದ L3 ಟೆಂಡರ್ ದಾರರು ನಾವು. L1 ಮತ್ತು L2 ಟೆಂಡರ್ ದಾರರ ಪೂರೈಕೆ ಬಳಿಕ ನಾವು ಸಪ್ಲೈ ಮಾಡಬೇಕು.
ತಿರುಪತಿಯಲ್ಲಿ ಲಡ್ಡು ತಯಾರಿಸಲು ಕರ್ನಾಟಕದಿಂದ ಸರಬರಾಜು ಆಗುತ್ತಿದ್ದ ನಂದಿನಿ ತುಪ್ಪ 2021ರಿಂದಲೇ ಬಂದ್ ಆಗಿದೆ. ಬಹಳ ಕಡಿಮೆ ದರಕ್ಕೆ ಬಿಡ್ ಕರೆಯುವುದರಿಂದ ಟಿಟಿಡಿ ಟೆಂಡರ್ನಲ್ಲಿ ಕೆಎಂಎಫ್ ಪಾಲ್ಗೊಂಡಿರಲಿಲ್ಲ ಎಂದು ಕೆಎಂಎಫ್ ಅಧ್ಯಕ್ಷರಾದ ಭೀಮಾ ನಾಯ್ಕ್ ತಿಳಿಸಿದ್ದಾರೆ.
ನಮ್ಮ ತುಪ್ಪಕ್ಕೆ ಸೂಕ್ತ ಮೌಲ್ಯ ಕೊಡುವುದಾದರೆ ಖಂಡಿತಾ ಸಪ್ಲೈ ಮಾಡುತ್ತೇವೆ. ನಂದಿನಿ ತುಪ್ಪಕ್ಕೆ ಬಹಳಷ್ಟು ಬೇಡಿಕೆ ಇದೆ. ಕೆಲಸವಿಲ್ಲದೇ ರಾಜಕೀಯ ಮಾಡಲು ಅನವಶ್ಯಕವಾಗಿ ವಿವಾದವನ್ನು ಬಿಜೆಪಿ ನಾಯಕರು ಸೃಷ್ಟಿಸುತ್ತಿದ್ದಾರೆ. ರೈತ ಸಂಕಷ್ಟದಲ್ಲಿ ಇದ್ದಾನೆ, ಕಚ್ಚಾ ಪದಾರ್ಥಗಳ ಬೆಲೆ ಹೆಚ್ಚಾಗಿದೆ. ನಮ್ಮ ಸರ್ಕಾರ ರೈತರನ್ನ ಸಬಲರನ್ನಾಗಿಸಲು 3 ರೂ. ಹಾಲಿನ ದರ ಏರಿಸಿ ನೇರವಾಗಿ ರೈತರಿಗೆ ತಲುಪುವಂತೆ ಮಾಡಿದೆ ಎಂದು ಹೇಳಿದರು.
ಇನ್ನು ಸಿಟಿ ರವಿ ಹೇಳಿಕೆಯಂತೆ ಕೇರಳದಲ್ಲಿ ನಂದಿನಿ ಮಾರುಕಟ್ಟೆ ಕಳೆದುಕೊಂಡಿಲ್ಲ. ನಾಳೆಯೂ ಕೂಡ ನಮ್ಮ ನಂದಿನಿ ಹಾಲಿಗೆ ಬೇಡಿಕೆ ಇಟ್ಟಿದ್ದಾರೆ, ಅದರ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದರು. ಹಾಲು, ಮೊಸರು ಮತ್ತು ತುಪ್ಪದ ಬೆಲೆ ಏರಿಕೆ ಬಗ್ಗೆ ಕೆಎಂಎಫ್ ಮಂಡಳಿ ನಿರ್ಧಾರ ತೆಗೆದುಕೊಳ್ಳುತ್ತದೆ. ಸರ್ಕಾರದ ಸಹಮತ ಪಡೆಯುತ್ತೇವೆ ಅಷ್ಟೇ. ಸದ್ಯ ಹಾಲು ಮೊಸರಿನ ಬೆಲೆ 3 ರೂ ಹೆಚ್ಚಳವಾಗಿರುವುದಕ್ಕೂ, ತುಪ್ಪ ಸರಬರಾಜು ನಿಲ್ಲಿಸಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಒಟ್ಟಾರೆಯಾಗಿ ಹೇಳುವುದಾದರೆ, ವಾಸ್ತವವನ್ನು ತಿಳಿಯದ ಬಿಜೆಪಿ ನಂದಿನಿ ತುಪ್ಪವನ್ನು ಪೂರೈಕೆ ಮಾಡಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಸುಳ್ಳು ಆರೋಪ ಮಾಡುವ ಮೂಲಕ ಮುಖಭಂಗ ಅನುಭವಿಸಿದೆ. ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಾಗದ ಬಿಜೆಪಿ ಕಾಂಗ್ರೆಸ್ ಕೆಲಸಗಳ ಬಗ್ಗೆ ಸುಳ್ಳು ಆರೋಪ ಮಾಡುತ್ತಿರುವುದು ಎಷ್ಟು ಸರಿ ಎಂದು ರಾಜ್ಯದ ಜನ ಪ್ರಶ್ನಿಸುತ್ತಿದ್ದಾರೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್ : ಶಾಸಕ ಬಿ.ಆರ್. ಪಾಟೀಲ್ ಹೆಸರಿನಲ್ಲಿ ಹರಿದಾಡುತ್ತಿರುವ ಪತ್ರ ಅಸಲಿಯೋ? ನಕಲಿಯೋ?

