ಸ್ಪೀಕರ್‌ ಕಾಗೇರಿ ಕ್ಷೇತ್ರದಲ್ಲಿ ಬಡಕುಟುಂಬದ ಮನೆ ದ್ವಂಸಗೊಳಿಸಿದ ಅಧಿಕಾರಿಗಳು

ಲಾಕ್‌ಡೌನ್‌ನಿಂದ ಜನರೆಲ್ಲರೂ ಮನೆಯಲ್ಲಿದ್ದಾರೆ. ಮನೆ ಬಿಟ್ಟು ಹೊರಗೆ ಬಾರದೆಂದು ಸರ್ಕಾರ ಸೂಚಿಸಿದೆ. ಆದರೆ ಮನೆಯಲ್ಲಿದ್ದವರನ್ನು ಹೊರಹಾಕಿ, ಬಡವನ ಮನೆಯನ್ನು ನೆಲಸಮಗೊಳಿಸಿರುವ ಅಮಾನವೀಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಬೇಡ್ಮಣಿ ಗ್ರಾಮ ಪಂಚಾಯ್ತಿಯ ಭಾನ್ಕುಳಿ ಗ್ರಾಮದಲ್ಲಿ ಜರುಗಿದೆ.

ನಾರಾಯಣ್ ದುರ್ಗಾ ನಾಯ್ಕ್ ನೇರ್ಲಾ ಮನೆ ಎಂಬುವವರು ಕೂಲಿ ಕಾರ್ಮಿಕರಾಗಿದ್ದು 25 ವರ್ಷಗಳಿಂದ ಭಾನ್ಕುಳಿ ಗ್ರಾಮದಲ್ಲಿ ವಾಸಿಸಿದ್ದಾರೆ. ಅವರ ಹೆಸರಿನಲ್ಲಿ ರೇಷನ್‌ಕಾರ್ಡ್‌ ಇದೆ. 15 ವರ್ಷಗಳಿಂದ ತೆಂಗಿನ ಸಸಿಗಳನ್ನು ನೆಟ್ಟು ಮರಗಳನ್ನಾಗಿ ಮಾಡಿದ್ದಾರೆ. ಅವರು ಸ್ವಂತ ಮನೆಯನ್ನು ಹೊಂದುವುದಕ್ಕಾಗಿ 2017-2018ನೇ ಸಾಲಿನಲ್ಲಿ ಬಸವ ವಸತಿ ಯೋಜನೆಯಡಿ ಅರ್ಜಿ ಹಾಕಿದ್ದಾರೆ. ಅದರನ್ವಯ ಸರ್ಕಾರ ಅವರಿಗೆ ಮನೆ ಕಟ್ಟಿಕೊಡಲು ಷರತ್ತುಬದ್ಧವಾಗಿ ಒಪ್ಪಿದೆ. ಮನೆ ನಿರ್ಮಾಣದ ಅಡಿಪಾಯ ಹಾಕಿ ಹಣ ಸಾಲದಿದ್ದುದ್ದಕ್ಕೆ ಅರ್ಧಕ್ಕೆ ನಿಲ್ಲಿಸಲಾಗಿದೆ. ಅವರು ಪಕ್ಕದಲ್ಲಿ ದನ ಕಟ್ಟುವ ಮನೆಯಲ್ಲಿ ವಾಸಿಸುತ್ತಾ ಬಂದಿದ್ದಾರೆ.

ನಾರಾಯಣ್ ದುರ್ಗಾ ನಾಯ್ಕ್ ನೇರ್ಲಾ ಮನೆಯವರ ಪಡಿತರ ಗುರುತಿನ ಚೀಟಿ

ಅಂತಹ ಮನೆಗೆ ಇಂದು ಏಕಾಏಕಿ ನುಗ್ಗಿದ ಅರಣ್ಯ ಅಧಿಕಾರಿಗಳು ಕ್ಷಣ ಮಾತ್ರದಲ್ಲಿ ನೆಲಸಮ ಮಾಡಿದ್ದಾರೆ. ಅದಕ್ಕೆ ಅವರು ಕೊಟ್ಟಿರುವ ಕಾರಣ ಯಥಾಪ್ರಕಾರ ಅರಣ್ಯ ಒತ್ತುವರಿ ಎಂಬುದಾಗಿದೆ. ಆದರೆ ಮನೆಯ ಮಾಲೀಕರಾದ ನಾರಾಯಣ್ ದುರ್ಗಾ ನಾಯ್ಕ್ ರವರು ಕಳೆದ 25 ವರ್ಷಗಳಿಂದ ಇಲ್ಲಿ ವಾಸಿಸಿದ್ದಾರೆ. ತೆಂಗಿನ ಮರಗಳನ್ನು ಬೆಳೆಸಿದ್ದಾರೆ. ಕಳೆದ 8 ವರ್ಷಗಳಿಂದ ಸರ್ಕಾರದ ವತಿಯಿಂದಲೇ ವಿದ್ಯುತ್‌ ಸಂಪರ್ಕ ಪಡೆದಿದ್ದಾರೆ. ಅಷ್ಟು ಮಾತ್ರವಲ್ಲದೇ 2017-18ರ ಅವಧಿಯಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ, ಕೃಷ್ಣಪ್ಪನವರು ವಸತಿ ಸಚಿವರಾಗಿದ್ದಾಗಿ ಮನೆ ಕಟ್ಟಲು ಇವರಿಗೆ ಷರತ್ತಬದ್ಧ ಒಪ್ಪಿಗೆ ಪತ್ರವನ್ನು ಸಹ ನೀಡಲಾಗಿದೆ. ಇಷ್ಟೆಲ್ಲ ಇದ್ದರೂ ಕಣ್ಣು ಕಾಣದ ಅರಣ್ಯ ಅಧಿಕಾರಿಗಳು ಅಟ್ಟಹಾಸ ಮೆರೆದಿದ್ದಾರೆ.

ಸರ್ಕಾರದಿಂದ ನೀಡಿರುವ ಅರ್ಹತಾ ಪತ್ರ

“ನಾರಾಯಣ್ ದುರ್ಗಾ ನಾಯ್ಕ್ ರವರು ಬಡವರಾಗಿದ್ದು ಕಳೆದ 25 ವರ್ಷಗಳಿಂದ ಇಲ್ಲಿಯೇ ವಾಸಿಸುತ್ತಿದ್ದಾರೆ. ಅರಣ್ಯಕ್ಕೆ ಇವರಿಂದ ಯಾವ ತೊಂದರೆಯೂ ಆಗಿಲ್ಲ. ಅರಣ್ಯ ಅಧಿಕಾರಿಗಳು ತಪ್ಪು ಮಾಹಿತಿಯಿಂದ ಈ ಅತಾಚುರ್ಯ ಎಸಗಿದ್ದಾರೆ. ಇಲ್ಲಿಯೇ ಪಕ್ಕದಲ್ಲಿ 50 ಎಕರೆಯನ್ನು ಒತ್ತುವರಿ ಮಾಡಿಕೊಂಡು ಗೋಸ್ವರ್ಗ ಎಂಬ ಕಟ್ಟಡ ಕಟ್ಟಲಾಗಿದೆ. ಹತ್ತಾರು ಬಲಾಢ್ಯ ಜನರು ಒತ್ತುವರಿ ಮಾಡಿದ್ದಾರೆ. ಅವರನ್ನು ಮುಟ್ಟುವ ಧೈರ್‍ಯವಿಲ್ಲದ ಅರಣ್ಯ ಅಧಿಕಾರಿಗಳು ಬಡವನ ಮೇಲೆ ದೌರ್ಜನ್ಯ ಮೆರೆದಿದ್ದಾರೆ” ಎಂದು ಸ್ಥಳೀಯ ನಿವಾಸಿಯಾದ ಗುರುಮೂರ್ತಿ ದೀವ್ರು ಅವರು ತಿಳಿಸಿದ್ದಾರೆ.

ಘಟನೆ ನಡೆದ ಬಳಿಕ ನಾವು ಡಿಎಫ್‌ಓ (district forest officer) ಬಳಿ ಮಾತನಾಡಿ ದೂರು ಸಲ್ಲಿಸಿದ್ದೇವೆ. ಕೂಡಲೇ ವಾಪಸ್ ಮನೆ ಕಟ್ಟಿಕೊಡುವುದು ನಿಮ್ಮ ಜವಾಬ್ದಾರಿ ಎಂದು ತಾಕೀತು ಮಾಡಿದ್ದೇವೆ. ಸ್ಥಳೀಯ ಶಾಸಕರ ಗಮನಕ್ಕೆ ತಂದರೂ ಅವರು ಕಾಳಜಿವಹಿಸಿಲ್ಲ ಎಂದರು.

ಸ್ಪೀಕರ್‌ ಕಾಗೇರಿಯವರು ಏನು ಮಾಡುತ್ತಿದ್ದಾರೆ?

ಅರಣ್ಯ ಇಲಾಖೆಯ ಈ ಅತಾಚುರ್ಯದಿಂದಾಗಿ ಬಡವನ ಮನೆ ನೆಲಸಮವಾಗಿದೆ. ಈ ಕುರಿತು ಸ್ಥಳೀಯ ಶಾಸಕರಾದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ದೂರು ನೀಡಲಾಗಿದೆ. ಆದರೂ ಅವರು ಮೌನವಹಿಸಿದ್ದಾರೆ. ಮೇಲ್ನೋಟದಲ್ಲಿಯೇ ಇದರಲ್ಲಿ ಆ ಬಡವನ ತಪ್ಪಿಲ್ಲ ಎಂದು ಅನಿಸಿದರೂ, ಹಲವಾರು ಸಾಕ್ಷಿಗಳಿದ್ದರೂ ಸಹ ಅವರು ಕನಿಷ್ಠ ಕಾಳಜಿವಹಿಸಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ಶಾಸಕರು ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ. ಕೂಡಲೇ ಆ ಬಡವನಿಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸಬೇಕಿದೆ. ಮತ್ತೆ ಮನೆ ಕಟ್ಟಿಕೊಟ್ಟು, ಅಚಾತುರ್ಯವೆಸಗಿದ ಅರಣ್ಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights