ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ ಏನು ನಿಯಮ? ಏನು ವ್ಯವಸ್ಥೆ? ಸಾಕ್ಷಾತ್ ವರದಿ

ಹೊರ ರಾಜ್ಯಗಳಿಂದ ಬರುವವರನ್ನು ಕ್ವಾರಂಟೈನ್‍ಗೆ ಒಳಪಡಿಸದೇ ರಾಜ್ಯದೊಳಗೆ ಬಿಡುತ್ತಿಲ್ಲ. ಬರುವವರು ಕ್ವಾರಂಟೈನ್‍ಗೆ ಒಪ್ಪುತ್ತಿಲ್ಲ. ಹೀಗಾಗಿ ಕೊರೊನಾ ವಾರಿಯರ್ಸ್, ಪೊಲೀಸರು ಮತ್ತು ರಾಜ್ಯಕ್ಕೆ ಬರುವ ಜನರ ನಡುವೆ ವಾಗ್ವಾದಗಳು ನಡೆಯುತ್ತಿದ್ದು, ಸಾವಿರಾರು ಜನರು ಎರಡು ಮಾರು ದಿನಗಳ ಕಾಲ ರಾಜ್ಯದ ಗಡಿ ಭಾಗದಲ್ಲಿಯೇ ಕಾದು ಕುಳಿತಿದ್ದಾರೆ. ನಾವು ಹೋಂ ಕ್ವಾರಂಟೈನ್ ತೆಗೆದುಕೊಳ್ಳುತ್ತೇವೆ ಎಂದರೂ ವೈದ್ಯರು ಮತ್ತು ಪೊಲೀಸರು ಬಗ್ಗುತ್ತಿಲ್ಲ. ತಮಿಳುನಾಡು ಮತ್ತು ಬೆಂಗಳೂರಿನ ಗಡಿಭಾಗ ಹೊಸೂರು ರಸ್ತೆಯಲ್ಲಿಯೂ ಹಲವಾರು ಕನ್ನಡಿಗರು ಕಾದು ಕುಳಿದ್ದಾರೆ ಎಂದ ಸುದ್ದಿ ಕೇಳಿಬಂದಿತ್ತು.

ಈ ಸುದ್ದಿಯ ಬೆನ್ನತ್ತಿ, ವಸ್ತುನಿಷ್ಟ ವರದಿ ಮಾಡುವ ಉದ್ದೇಶದಿಂದ ಬೆಂಗಳೂರು ಮತ್ತು ಹೊಸೂರು ಹೆದ್ದಾರಿಯಲ್ಲಿರುವ ಗಡಿಭಾಗಕ್ಕೆ ಭೇಟಿ ನೀಡಿ ಸಾಕ್ಷಾತ್ ವರದಿ ಮಾಡಲಾಗಿದೆ.

ಲಾಕ್‍ಡೌನ್ ಸಡಿಲವಾದ ಮೊದಲ ದಿನಗಳಲ್ಲಿ ಹೆಚ್ಚು ಜನರು ಹೊಸೂರು ರಸ್ತೆ ಮೂಲಕ ಬೆಂಗಳೂರಿಗೆ ಬರಲು ಪ್ರಯತ್ನಿಸಿದ್ದು ಸತ್ಯ. ಆದರೆ, ಅವರನ್ನು ಅತ್ತಿಬೆಲೆ ಟೋಲ್ ಬಳಿ ತಡೆದು, ಬೆಂಗಳೂರು ಅಥವಾ ಕರ್ನಾಟಕದ ಯಾವುದಾದರೂ ಊರಿಗೆ ಹೋಗುವುದಾದರೆ, 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಗಾಗಬೇಕು. ನಂತರವಷ್ಟೇ ಹೊರಗೆ ಬಿಡಲಾಗುವುದು ಎಂದು ಹೇಳಲಾಗುತ್ತಿದೆ. ಇದಕ್ಕೆ ಒಪ್ಪದ ಜನರು ಮನೆಯಲ್ಲಿಯೇ ಕ್ವಾರಂಟೈನ್‍ಗೆ ಒಳಗಾಗುವುದಾಗಿ ಹಠಕ್ಕೆ ಬಿದ್ದಿದ್ದಾರೆ. ಅಂತಹವರನ್ನು ಹಿಂದಿರುಗಿ ಕಳಿಸಲಾಗುತ್ತಿದೆ. ಕೆಲವರು ಸಂಜೆಯ ವರೆಗೂ ಕಾದು, ಎಲ್ಲಿಂದ ಬಂದಿದ್ದರೋ ಅಲ್ಲಿಗೇ ವಾಪಸ್ ಹೋಗಿದ್ದಾರೆ.

ಕೆಲವರು ಏನು ಮಾಡಬೇಕೆಂದು ತೋಚನೆ ಸರ್ಕಾರ ಒದಗಿಸುವ ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ. ಆದರೆ, ಅಂತಹ ಜನರ ಸಂಖ್ಯೆ ತುಂಬಾ ವಿರಳ. ಅಂದರೆ, ಇದೂವರೆಗೂ ಕ್ವಾರಂಟೈನ್ ಒಪ್ಪಿ ಹೊಸೂರು ರಸ್ತೆಯಲ್ಲಿ ಕರ್ನಾಟಕಕ್ಕೆ ಬಂದಿರುವವರು ಕೇವಲ 25 ರಿಂದ 30 ಮಂದಿ ಮಾತ್ರ.

ಲಾಕ್‍ಡೌನ್ ಸಡಿಲವಾದ ಒಂದೆರಡು ದಿನ ಗಡಿಭಾಗಕ್ಕೆ ಬಂದು ಸಂಜೆವರೆಗೂ ಕಾದು ಕುಳಿತು ವಾಪಸ್ ಹೋಗುವವರ ಸಂಖ್ಯೆ ಅಧಿಕವಾಗಿಯೇ ಇತ್ತು. ಆದರೆ, ಕ್ವಾರಂಟೈನ್‍ಗೆ ಒಪ್ಪದ ಹೊರತು, ರಾಜ್ಯದೊಳಗೆ ಪ್ರವೇಶವಿಲ್ಲ ಎಂಬ ಸುದ್ದಿ ಪಸರಿಸಿದಂತೆ ಗಡಿಭಾಗಕ್ಕೆ ಬರುತ್ತಿರುವ ಜನರ ಸಂಖ್ಯೆ ಕಡಿಮೆಯಾಗಿದೆ.

ಇಂದು ಗಂಟೆಗೆ 10-20 ಜನರು ಗಡಿಭಾಗಕ್ಕೆ ಬಂದು ವಾಪಸ್ ಹೋಗುತ್ತಿದ್ದಾರೆ. “ನಾವು ಮನೆಯಿಂದ ಹೊರಗೆ ಬಾರದಂತೆ, ಮನೆಯಲ್ಲಿಯೇ ಕ್ವಾರಂಟೈನ್‍ಗೆ ಒಳಗಾಗುತ್ತೇವೆ, ಕೈಗೆ ಸೀಲ್ ಹಾಕಿಕೊಡಿ ಎಂದು ಹೇಳಿದರೂ ಬಿಡುತ್ತಿಲ್ಲ. ನಮಗೆ ಆರೋಗ್ಯ ಸಮಸ್ಯೆಗಳಿವೆ, ಬೇರೆಲ್ಲೂ ಕ್ವಾರಂಟೈನ್ ತೆಗೆದುಕೊಂಡು ಆಗೋಗ್ಯದಲ್ಲಿ ಏರುಪೇರಾದರೆ ಎಂಬ ಭಯವಿದೆ. ಬೆಳಗ್ಗೆ 08 ಗಂಟೆಗೆ ಬಂದು 2 ಗಂಟೆಯ ವರೆಗೂ ಕಾದಿದ್ದೇವೆ. ಆದರೂ, ಬಿಡುತ್ತಿಲ್ಲ ಅದಕ್ಕಾಗಿ ಹಿಂದಿರುಗಿ ಹೋಗುತ್ತಿದ್ದೇವೆ” ಎಂದು ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ 50 ವರ್ಷ ಆಸುಪಾಸಿನ ಮಹಿಳೆ ತಿಳಿಸಿದ್ದಾರೆ.

ಈ ರೀತಿ ಧೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕ್ವಾರಂಟೈನ್ ಸ್ಥಳಗಳಲ್ಲಿ ಉತ್ತಮ ಆರೋಗ್ಯ ಸೌಲಭ್ಯ ಒದಗಿಸುತ್ತೇವೆ, ಭಯ ಪಡುವ ಅಗತ್ಯವಿಲ್ಲ ಎಂದು ಆತ್ಮಸ್ಥೈರ್ಯವನ್ನು ತುಂಬುವಂತಹ ಕೆಲಸವನ್ನೂ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳೂ ಮಾಡುತ್ತಿಲ್ಲ. ಬದಲಾಗಿ, ಇಬ್ಬ 30 ವರ್ಷಯ ಯುವಕ ಅಧಿಕಾರಿಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ ಹೆಚ್ಚು ಮಾತನಾಡಿದರೆ, ಎತ್ತಿಕೊಂಡೋಗಿ ಕ್ವಾರಂಟೈನ್‍ಗೆ ಹಾಕ್ತೇವೆ, ಹೋಗು ಸೈಡ್‍ಗೆ ಎಂದು ಅಧಿಕಾರಿಗಳು ಗಧರಿದ್ದೂ ನಡೆಯಿತು.

ಯಾವ ಭರವಸೆಯನ್ನೂ ನೀಡದ ಕಾರಣಗಳಿಂದಾಗಿ ಜನರು ಸಾಂಸ್ಥಿಕ ಕ್ವಾರಂಟೈನ್‍ಗೆ ಹೆದರುತ್ತಿದ್ದಾರೆ. ಆದರೆ, ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಕೆಲವು ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿರುವುದಂತೂ ಇದೆ. ಆದರೆ, ಅವು ಜನರಿಗೆ ಕನ್ವೆ ಆಗುತ್ತಿಲ್ಲ.

ಎರಡು ರೀತಿಯ ಕ್ವಾರಂಟೈನ್ ಸೌಲಭ್ಯ!

ಸರ್ಕಾರವು ಹೊರ ರಾಜ್ಯಗಳಿಂದ ಬರುವವರಿಗೆ ಎರಡು ರೀತಿಯ ಕ್ವಾರಂಟೈನ್ ಸೌಲಭ್ಯಗಳನ್ನು ಒದಗಿಸುತ್ತಿದೆ. ಒಂದು ಪಾವತಿ ಕ್ವಾರಂಟೈನ್. ಮತ್ತೊಂದು ಉಚಿತ ಕ್ವಾರಂಟೈನ್.

ಪಾವತಿ ಕ್ವಾರಂಟೈನ್‍ಗಾಗಿ ಅತ್ತಿಬೆಲೆ ಸುತ್ತಮುತ್ತ ಇರುವ ಹೋಟೆಲ್‍ಗಳನ್ನು ಕ್ವಾರಂಟೈನ್‍ಗಾಗಿ ಬಿಡಿಸಿಕೊಳ್ಳಲಾಗಿದೆ. ಹೋಟೆಲ್‍ಗಳಲ್ಲಿ ಕ್ವಾರಂಟೈನ್‍ಗೆ ಒಳಗಾಗಲು ಬಯಸುವವರಿಗೆ ಹೋಟೆಲ್‍ನಲ್ಲಿ ವ್ಯವಸ್ಥೆ ಮಾಡಲಾಗುವುದು. ಹೋಟೆಲ್ ಬಾಡಿಗೆಯ ಹಣವನ್ನು ಕ್ವಾರಂಟೈನ್‍ಗೆ ಒಳಗಾಗುವವರು ಭರಿಸಬೇಕು. ಈ ಹೋಟೆಲ್‍ಗಳಲ್ಲಿ ದಿನಕ್ಕೆ ಕನಿಷ್ಠ 600 ರೂ.ಗಳಿಂದ 4,000ರೂ. ವರೆಗಿನ ವಿವಿಧ ರೀತಿಯ ಹೋಟೆಲ್‍ಗಳು ಲಭ್ಯವಿದೆ. 14 ದಿನಗಳ ಕ್ವಾರಂಟೈನ್‍ಗೆ ಕನಿಷ್ಟ 8,400 ರೂಗಳನ್ನು ಜನರು ಭರಿಸಬೇಕಾಗುತ್ತದೆ.

ಉಚಿತ ಕ್ವರಂಟೈನ್‍ಗಾಗಿ ಸುತ್ತಮುತ್ತಲಿನ ಸಮುದಾಯ ಭವನ, ಕಲ್ಯಾಣ ಮಂಟಪ, ಶಾಲಾ-ಕಾಲೇಜುಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಸ್ಥಳಗಳಲ್ಲಿ ಕ್ವಾರಂಟೈನ್‍ಗೆ ಒಳಗಾಗುವವರಿಗೆ ದಿನದ ಮೂರು ಹೊತ್ತಿನ ಆಹಾರ ವ್ಯವಸ್ಥೆ, ಕುಡಿಯುವ ನೀರು, ಸ್ನಾನ ಹಾಗೂ ಧೀರ್ಘಕಾಲಿಕ ರೋಗಗಳಿಂದ ಬಳಲುವವರಿಗೆ ಅಗತ್ಯ ಔಷಧಿ ವ್ಯವಸ್ಥೆಯನ್ನು ಮಾಡಲಾಗಿದೆ.

ರಾಜ್ಯಕ್ಕೆ ಬರಲು ಬಯಸುವವರು ಈ ಎರಡು ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಕ್ವಾರಂಟೈನ್‍ಗೆ ಒಳಗಾಗಲೇ ಬೇಕು. ಇಲ್ಲವಾದಲ್ಲಿ, ಪ್ರವೇಶವಿಲ್ಲ. ಆದರೆ ಅಧಿಕಾರಿಗಳ ಸ್ಪಂಧನೆಯ ಕೊರತೆಯಿಂದ ಕ್ವಾರಂಟೈನ್ ನಿರಾಕರಿಸುವವರು ಒಂದೆಡೆಯಾದರೆ, ಎಲ್ಲಿಯೋ ಕ್ವಾರಂಟೈನ್‍ಗೆ ಒಳಗಾಗುವ ಬದಲು ಮತ್ತೊಂದಷ್ಟು ದಿನ ಇದ್ದಸ್ಥಳಗಳಲ್ಲಿಯೇ ಇದ್ದು, ಲಾಕ್‍ಡೌನ್ ಮತ್ತಷ್ಟು ಸಡಿಲವಾದ ನಂತರವೇ ಬರುತ್ತೇವೆಂದು ಮರಳುತ್ತಿರುವವರ ಸಂಖ್ಯೆಯೂ ಇದೆ.

ಉಚಿತ ಕ್ವಾರಂಟೈನ್ ವ್ಯವಸ್ಥೆ ಹೇಗಿದೆ?

ಉಚಿತ ಕ್ವಾರಂಟೈನ್‍ಗಾಗಿ ಶಾಲಾ ಕೊಠಡಿಗಳು, ಸಮುದಾಯ ಭವನಗಳನ್ನು ಪಡೆದುಕೊಳ್ಳಲಾಗಿದ್ದು, ಇವುಗಳಲ್ಲಿ ಪ್ರತ್ಯೇಕವಾಗಿ ಒಂದು ಕೊಠಡಿಗೆ ಒಬ್ಬರನ್ನು ಕೂಡಲು ಸಾಧ್ಯವಿಲ್ಲ. ಪರಿಚಯವಿಲ್ಲದ, ವಿಸ್ತಾರವಾದ ಕೊಠಡಿಗಳಲ್ಲಿ ಒಬ್ಬರೇ ಇರುವುದೂ ಕಷ್ಟವೇ. ಹಾಗಾಗಿ ಒಂದೇ ಶಾಲಾ ಕೊಠಡಿಗೆ ಮೂರು-ನಾಲ್ಕು ಜನರನ್ನು ಕೂಡಬೇಕಾಗಬಹುದು. ಇನ್ನು ಸಮುದಾಯ ಭವನಗಳಲ್ಲಿ ಕೊಠಡಿಗಳ ಸಂಖ್ಯೆ ತುಂಬಾ ಕಡಿಮೆ ಇರುತ್ತದೆ ಅಲ್ಲಿಯೂ ಇಂತದ್ದೇ ಸಮಸ್ಯೆ. ಭವನದ ವಿಸ್ತಾರ ಜಾಗದಲ್ಲಿ ಒಂದಷ್ಟು ಅಳತೆಗೆ ಒಂದೊಂದು ಬೆಡ್‍ಗಳನ್ನು ಹಾಕಿ ವ್ಯವಸ್ಥೆ ಮಾಡಲಾಗುವುದು. ಅದು ಕ್ವಾರಂಟೈನ್ ಅನ್ನಿಸಿಕೊಳ್ಳುವುದಿಲ್ಲ. ಬದಲಾಗಿ, ಸಾಮಾಜಿಕ ಅಂತರದೊಂದಿಗಿನ ವಾಸವಷ್ಟೇ ಆಗಿರುತ್ತದೆ. ಅಲ್ಲಿ ಕ್ವಾರಂಟೈನ್ ತೆಗೆದುಕೊಂಡವರಲ್ಲಿ ಯಾರೊಬ್ಬರಿಗಾದರೂ ಕೊರೊನಾ ಸೋಂಕು ಧೃಢಪಟ್ಟರೆ, ಉಳಿದರೂ ಭೀತಿಗೆ ಒಳಗಾಗಬೇಕಾಗುತ್ತದೆ. ಅಲ್ಲದೆ, ಮತ್ತೆ ಕ್ವಾರಂಟೈನ್ ಕಟ್ಟಿಟ್ಟ ಬುತ್ತಿ. ಹಾಗಾಗಿ ಉಚಿತ ಕ್ವಾರಂಟೈನ್ ಕೂಡ ಮತ್ತಷ್ಟು ವ್ಯವಸ್ಥಿತವಾಗಿ ಮಾಡಬೇಕು. ಸಧ್ಯಕ್ಕಿರುವ ಉಚಿತ ವ್ಯವಸ್ಥೆಯ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಾಕುವ ಅಗತ್ಯವೂ ಇದೆ.

ಮಾಹಿತಿ ನೀಡಲು ನಿರಾಕರಿಸಿ ತಹಶೀಲ್ದಾರ್!

ಹೊರ ರಾಜ್ಯಗಳಿಂದ ಬರುವ ಜನರನ್ನು ಕ್ವಾರಂಟೈನ್ ಗೆ ಒಳಪಡಿಸಲು ಮಾಡುಲಾಗಿರುವ ವ್ಯವಸ್ಥೆಯ ಬಗ್ಗೆ, ಅದರಲ್ಲೂ ಮುಖ್ಯವಾಗಿ ಉಚಿತ ಕ್ವಾರಂಟೈನ್ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅಲ್ಲೇ ಇದ್ದ ಆನೇಕಲ್ ತಹಶೀಲ್ದಾರ್ ಕೃಷ್ಣ ಮೂರ್ತಿಯವರನ್ನು ಮಾತನಾಡಿಸಲು ಪ್ರಯತ್ನಿಸಲಾಯಿತು. ಆದರೆ, ಮಾಹಿತಿ ನೀಡಲು ನಿರಾಕರಸಿದ ಕೃಷ್ಣಮೂರ್ತಿಯವರು ತಮ್ಮ ವಾಹನ ಬಾಗಿಲು ಹಾಕಿಕೊಂಡು ಕುಳಿತರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights