12 ಗಂಟೆ ಕೆಲಸದ ಆದೇಶವನ್ನು ಹಿಂಪಡೆದ ರಾಜ್ಯ ಸರ್ಕಾರಗಳು; ಕರ್ನಾಟಕ ಸರ್ಕಾರವೂ ಹಿಂಡೆದುಕೊಳ್ಳುವ ಸಾಧ್ಯತೆ?

ಉತ್ಪಾದನಾ ಕೈಗಾರಿಕೆಗಳು ಹಾಗೂ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಕೆಲಸದ ಸಮಯವನ್ನು 10 ಗಂಟೆಗಳ ಅವಧಿಗೆ ವಿಸ್ತರಿಸುವ ಆದೇಶವನ್ನು ಕರ್ನಾಟಕ ಸರ್ಕಾರ ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ. ಈಗಾಗಲೇ ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸರ್ಕಾರಗಳು 12 ಗಂಟೆಗಳ ಕೆಲಸದ ಅವಧಿಗೆ ವಿಸ್ತರಿಸಿದ್ದ ಆದೇಶಗಳನ್ನು ರದ್ದುಗೊಳಿಸಿದ್ದು, ಕರ್ನಾಟಕ ಸರ್ಕಾರವೂ ಆದೇಶವನ್ನು ಹಿಂಪಡೆಯಬಹುದು ಎನ್ನಲಾಗಿದೆ.

ಕೇಂದ್ರದ ನಿರ್ದೇಶನದ ಮೇರೆಗೆ ಬಿಎಸ್ ಯಡಿಯೂರಪ್ಪ ಸರ್ಕಾರ ಕಳೆದ ವಾರ ಕೆಲಸದ ಸಮಯವನ್ನು ದಿನಕ್ಕೆ 10 ಮತ್ತು ವಾರಕ್ಕೆ 60 ಗಂಟೆಗಳ ಅವಧಿಗೆ ಹೆಚ್ಚಿಸುತ್ತದೆ ಎಂದು ಹೇಳಿದ್ದರು. ಕಾರ್ಮಿಕ ಸಂಘಟನೆಗಳು ಈ ನಿರ್ಧಾರವನ್ನು ವಿರೋಧಿಸಿದ್ದು, ಇದು ಭಾರತವೂ ಸಹಿ ಹಾಕಿರುವ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದಿದ್ದವು.

“ರಾಜಸ್ಥಾನ ಮತ್ತು ಯುಪಿ ಸರ್ಕಾರಗಳು ಯಾವ ಆಧಾರದ ಮೇಲೆ ಆದೇಶವನ್ನು ಹಿಂತೆಗೆದುಕೊಂಡಿವೆ ಎಂದು ನಾವು ತಿಳಿದುಕೊಳ್ಳುತ್ತೇವೆ. ನಮಗೆ ಮನವರಿಕೆಯಾದರೆ ಮಾತ್ರ ನಾವು ಆದೇಶವನ್ನು ತೆಗೆದುಕೊಳ್ಳುತ್ತೇವೆ” ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.

ಉತ್ತರ ಪ್ರದೇಶ ಸರ್ಕಾರವು ದುಡಿಯುವ ಅವಧಿಯನ್ನು 08 ಗಂಟೆಯಿಂದ 12 ಗಂಟೆಗಳಿಗೆ ವಿಸ್ತರಿಸಿ ಆದೇಶ ಹೊರಡಿಸಿತ್ತು. ಆದರೆ, ಅಲಹಾಬಾದ್ ಹೈ ಕೋರ್ಟ್‌ ಸರ್ಕಾರದ ಆದೇಶವನ್ನು ಪ್ರಶ್ನಿಸಿ ನೋಟೀಸ್ ಜಾರಿಗೊಳಿಸಿದ ನಂತರ ತನ್ನ ಆದೇಶವನ್ನು ಸರ್ಕಾರ ಹಿಂಪಡೆದುಕೊಂಡಿದೆ.

ಕೊರೊನಾ ವೈರಸ್‌ ಕಾರಣಕ್ಕಾಗಿ ಲಾಕ್‌ಡೌನ್‌ ಮಾಡಲಾಗಿದ್ದ ಸಂದರ್ಭದಲ್ಲಿ ಉಂಟಾದ ಆರ್ಥಿಕ ಸಮಸ್ಯೆಯನ್ನು ಸುಧಾರಿಸುವುದಕ್ಕಾಗಿ ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸಿದ್ದ ಮಹಾರಾಷ್ಟ್ರ, ಗುಜುರಾತ್, ಗೋವಾ, ಮಧ್ಯಪ್ರದೇಶ, ಉತ್ತರಖಂಡ, ಅಸ್ಸಾಂ, ಪಂಜಾಬ್, ಹಿಯಾಣ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿಯೂ ಸರ್ಕಾರಗಳು ತಮ್ಮ ಆದೇಶವನ್ನು ತಡೆಹಿಡಿದಿದ್ದಾರೆ ಅಥವಾ ಆದೇಶವನ್ನು ಹಿಂತೆಗೆದುಕೊಂಡಿದ್ದಾರೆ.

“ಸರ್ಕಾರವು ಕಾರ್ಮಿಕ ಕಾನೂನುಗಳನ್ನು ಬದಲಾಯಿಸುವುದು ಸರಿಯಲ್ಲ. ಕೇಂದ್ರವು ಲಾಕ್‌ಡೌನ್‌ ಸಂದರ್ಭದಲ್ಲಿ ಉಂಟಾದ ಬಿಕ್ಕಟ್ಟನ್ನು ನಿಬಾಯಿಸಲು ಕಾರ್ಮಿಕರ ಮೇಲೆ ಹೊರೆ ಹೇರುತ್ತಿದೆ. ಅಲ್ಲದೆ, ಕೇವಲ 30% ರಷ್ಟು ಉದ್ಯೋಗಿಗಳಿಗೆ ಮಾತ್ರ ಕಾರ್ಯನಿರ್ವಹಿಸಲು ಅವಕಾಶವಿದೆ. ಇದು ಕಾರ್ಮಿಕರನ್ನು ಮತ್ತಷ್ಟು ಷೋಷಣೆಗೆ ದೂಡುತ್ತದೆ. ಸರ್ಕಾರವು ರಾಜಸ್ಥಾನ ಮತ್ತು ಉತ್ತರ ಪ್ರದೇಶವನ್ನು ಅನುಸರಿಸಿ ಆದೇಶವನ್ನು ಹಿಂಪಡೆಯಬೇಕು” ಎಂದು ಎಐಟಿಯುಸಿ ಕರ್ನಾಟಕ ಘಟಕದ ಅಧ್ಯಕ್ಷ ಎಸ್.ಎಸ್.ಪ್ರಕಾಶಮ್ ತಿಳಿಸಿದ್ದಾರೆ.

ಕಾರ್ಮಿಕರ ದುಡಿಯುವ ಅವಧಿಯನ್ನು 12 ಗಂಟೆಗೆ ವಿಸ್ತರಿಸಬೇಕೆಂಬ ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ 10 ಗಂಟೆಗಳಿಗೆ ವಿಸ್ತರಿಸಿತ್ತು. ಈಗ ಕಾರ್ಮಿಕ ಸಂಘಟನೆಗಳ ವಿರೋಧ ಹೆಚ್ಚುತ್ತಿರುವ ಹಾಗೂ ಇತರ ರಾಜ್ಯಗಳೂ ತಮ್ಮ ಆದೇಶವನ್ನು ಹಿಂಪಡೆದುಕೊಳ್ಳುತ್ತಿದ್ದು, ಕರ್ನಾಟಕ ಸರ್ಕಾರವೂ ಆದೇಶವನ್ನು ಹಿಂಪಡೆದುಕೊಳ್ಳಬಹುದು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights