ವಿಜಯೇಂದ್ರಗೆ ಅಧಿಕಾರ ಹಸ್ತಾಂತರಿಸಲು ಬಿಎಸ್‌ವೈ ಯತ್ನ; ಸಿಎಂ ಸ್ಥಾನದಿಂದ ಕೆಳಗಿಳಿಸಿ ಎಂದು ಮೋದಿಗೆ BJP ಶಾಸಕರ ಪತ್ರ!

ಸಿಎಂ ಯಡಿಯೂರಪ್ಪನವರು ತಮ್ಮ ಪುತ್ರ ಬಿವೈ ವಿಜಯೇಂದ್ರಗೆ ಬಿಜೆಪಿ ನಾಯಕತ್ವದ ಅಧಿಕಾರ ಹಸ್ತಾಂತರಿಸಲು ಯತ್ನಿಸುತ್ತಿದ್ದಾರೆ. ಅವರ ಪ್ರಯತ್ನವನ್ನು ತಡೆಯಲಿದ್ದರೆ ಪಕ್ಷ ಮುಂದಿನ ಚುನಾವಣೆಯಲ್ಲಿ ನೆಲಕಚ್ಚಲಿದೆ. ಅವರಿಗೆ 2023 ರವರೆಗೆ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡಿದರೆ, ಸಾಮೂಹಿಕ ನಾಯಕತ್ವಕ್ಕೆ ತಿಲಾಂಜಲಿ ನೀಡಿ, ವಂಶಪಾರಂಪರ್ಯದ ಆಡಳಿತಕ್ಕೆ ಅನುವು ಮಾಡಿಕೊಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಬಿಜೆಪಿಯ ಲಿಂಗಾಯತ ಶಾಸಕರ ಗುಂಪು ಪತ್ರಬರೆದಿದೆ ಎಂದು ಕೇಸರಿ ಪಡೆಯ ಮೂಲಗಳು ತಿಳಿಸಿವೆ.

ಪ್ರಧಾನಿಗೆ ಬರೆದಿರುವ ಸುದೀರ್ಘ ಪತ್ರದಲ್ಲಿ ‘ರಾಜ್ಯಕ್ಕೆ ಹೊಸ ದೃಷ್ಟಿಕೋನ ಮತ್ತು ಚೈತನ್ಯ ತುಂಬಬಲ್ಲ ನಾಯಕತ್ವದ ಅಗತ್ಯವಿದೆ. ‘ಲಿಂಗಾಯತ-ವೀರಶೈವ ಸಮುದಾಯದ ಒಲವು ಪಕ್ಷದ ಮೇಲಿದ್ದರೂ ಯಡಿಯೂರಪ್ಪ ಆ ಸಮುದಾಯದ ‘ಪ್ರಶ್ನಾತೀತ’ ನಾಯಕ ಅಲ್ಲ. ಲಿಂಗಾಯತ ಮತ ಬ್ಯಾಂಕಿನ ವಾರಸುದಾರರೂ ಅಲ್ಲ’ ಎಂದು ಪತ್ರದಲ್ಲಿ ಪ್ರತಿಪಾದಿಸಲಾಗಿದೆ ಎಂದು ಬರೆಯಲಾಗಿದೆ ಎಂದು ತಿಳಿದು ಬಂದಿದೆ.

ಯಡಿಯೂರಪ್ಪ ‘ಅಧಿಕಾರದ ದಂಡ’ವನ್ನು ತಮ್ಮ ಪುತ್ರ ವಿಜಯೇಂದ್ರಗೆ ಹಸ್ತಾಂತರಿಸಲು ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಅವರಿಗೆ 2023 ರವರೆಗೆ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡಿದರೆ, ಸಾಮೂಹಿಕ ನಾಯಕತ್ವಕ್ಕೆ ತಿಲಾಂಜಲಿ ನೀಡಿ, ವಂಶಪಾರಂಪರ್ಯದ ಆಡಳಿತಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ. ಇದರ ಪರಿಣಾಮ ಊಹಿಸುವುದೂ ಕಷ್ಟ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಧು ಬಂಗಾರಪ್ಪ ‘ಕೈ’ ಹಿಡಿಯುವುದು ಬಹುತೇಕ ಖಚಿತ : ಡಿಕೆಶಿ ಜೊತೆಗಿಂದು ಚರ್ಚೆ!

ಎಚ್‌.ಎನ್‌. ಅನಂತಕುಮಾರ್‌ ಅಂದಿನ ಲೋಕಶಕ್ತಿ ನಾಯಕ ರಾಮಕೃಷ್ಣ ಹೆಗಡೆ ಜತೆ ಚುನಾವಣಾ ಒಪ್ಪಂದ ಮಾಡಿಕೊಂಡರು. ಆಗ ಹೆಗಡೆ ಅವರ ಜತೆಗಿದ್ದ ಲಿಂಗಾಯತ ಸಮುದಾಯ ಬಿಜೆಪಿಯತ್ತ ವಾಲಿತು. ಇದರ ಪರಿಣಾಮ 1998 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅದ್ಭುತ ಸಾಧನೆ ಮಾಡಿತು. ಬಿಜೆಪಿ 13, ಲೋಕಶಕ್ತಿ ಮತ್ತು ಸಂಯುಕ್ತ ಜನತಾದಳ ತಲಾ 3 ಸ್ಥಾನಗಳನ್ನು ಗೆದ್ದುಕೊಂಡವು. 1999 ರ ವಿಧಾನಸಭಾ ಚುನಾವಣೆಯ ವೇಳೆ ಯಡಿಯೂರಪ್ಪ ಪಕ್ಷದ ಅಧ್ಯಕ್ಷರಾಗಿದ್ದರೂ ಗೆಲ್ಲಲು ಸಾಧ್ಯವಾಗಿದ್ದು 44 ಸ್ಥಾನಗಳನ್ನು ಮಾತ್ರ. 1994 ರ ಚುನಾವಣೆಗಿಂತ 4 ಸ್ಥಾನ ಹೆಚ್ಚು ಗೆಲ್ಲಲು ಸಾಧ್ಯವಾಗಿತ್ತು ಎಂದು ಪತ್ರ ಹೇಳಿದೆ.

2012 ರಲ್ಲಿ ಪಕ್ಷವನ್ನು ಒಡೆದು ಯಡಿಯೂರಪ್ಪ ಕೆಜೆಪಿ ಕಟ್ಟಿದರು. ಆಗ ಅವರು ಕೇವಲ 6 ಸ್ಥಾನ (ಶೇಕಡ 9.7 ರಷ್ಟು ಮತ) ಗೆಲ್ಲಲು ಸಾಧ್ಯವಾಯಿತು. ಯಡಿಯೂರಪ್ಪ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರಾಗಿದ್ದರೆ ಇನ್ನು ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕಿತ್ತು. ಇದರ ಅರ್ಥ ಇವರ ಪ್ರಭಾವ ಮಧ್ಯ ಕರ್ನಾಟಕದ 3-4 ಜಿಲ್ಲೆಗಳಲ್ಲಿ ಮಾತ್ರ. 2013 ರ ಚುನಾವಣೆಯಲ್ಲಿ ಬಿಜೆಪಿ ಶೇ 20 ರಷ್ಟು ಮತವನ್ನು ಪಡೆದಿತ್ತು. ಒಟ್ಟಿನಲ್ಲಿ ಯಡಿಯೂರಪ್ಪ ‘ಲಿಂಗಾಯತ ಮತ ಬ್ಯಾಂಕಿನ ಸಂರಕ್ಷಕ ಎಂಬುದು ಮಿಥ್ಯೆ’ ಎಂದಿದ್ದಾರೆ. ಪಂಚಮಸಾಲಿ ಸಮುದಾಯವನ್ನು 2ಎ ಗೆ ಸೇರಿಸಬೇಕು ಎಂಬ ಹೋರಾಟ ಕೇವಲ ಮೀಸಲಾತಿ ಹೋರಾಟ ಆಗಿರದೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧದ ಹೋರಾಟದ ವೇದಿಕೆಯಾಗಿ ರೂಪುಗೊಂಡಿದೆ ಎಂದು ಮೂಲಗಳು ಹೇಳಿವೆ.

ಈ ಹೋರಾಟದ ಮುಂಚೂಣಿಯಲ್ಲಿರುವವರು ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಇಳಿಸುವುದಾಗಿಯೂ, ಪಂಚಮಸಾಲಿ ಸಮುದಾಯದಲ್ಲಿ ಮುಖ್ಯಮಂತ್ರಿಗೆ ಅರ್ಹರಾಗುವ ಸಾಕಷ್ಟು ಶಾಸಕರು ಇದ್ದಾರೆ ಎಂದು ನೇರವಾಗಿಯೂ ಹೇಳಿದ್ದಾರೆ.

ಪಾದಯಾತ್ರೆಯ ಹಲವು ವೇದಿಕೆಗಳಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಹರಿಹಾಯ್ದಿದ್ದಾರೆ. ಪ್ರಧಾನಿಗೆ ಬರೆದರೆನ್ನಲಾದ ಪತ್ರಕ್ಕೂ ಈ ಹೋರಾಟಕ್ಕೂ ಸಂಬಂಧವನ್ನು ಕಲ್ಪಿಸುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಹಬ್ಬಿವೆ.

ಇದನ್ನೂ ಓದಿ: TMC ಭ್ರಷ್ಟಾಚಾರ ಮಾಡಿದೆ ಎಂದು BJP ಸಾಬೀತುಪಡಿಸದಿದ್ದರೆ ಮೋದಿ ಸರ್ಕಾರ ರಾಜೀನಾಮೆ ನೀಡಬೇಕು: ಮಮತಾ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights