24 ಗಂಟೆಯಲ್ಲಿ ದೇಶದ 2293 ಜನರಿಗೆ ಕೊರೊನಾ ಸೋಂಕು : 71 ಮಂದಿ ಬಲಿ!

ಮಹಾಮಾರಿ ಕೊರೊನಾ ದೇಶದಲ್ಲಿ ಕಡಿಮೆಯಾಗುವ ಲಕ್ಷಣಗಳೇ ಕಾಣಸಿಗುತ್ತಿಲ್ಲ. ದಿನೇ ದಿನೇ ದೇಶದಲ್ಲಿ ಸೋಂಕಿತರ ಸಂಖ್ಯೆ ಹಾಗೂ ಸಾವನ್ನಪ್ಪುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ 2,293 ಜನರಿಗೆ ಸೋಂಕು ದೃಢಪಟ್ಟಿದ್ದು,  ಇದು ಒಂದು ದಿನದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರ ವರದಿಯಾಗಿದೆ. ಜೊತೆಗೆ 71 ಮಂದಿ ಸಾವನ್ನಪ್ಪಿದ್ದಾರೆ.

ಹೌದು… ಇಂದು ಬೆಳಿಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 37,336ಕ್ಕೆ ಏರಿದೆ. ಈ ಪೈಕಿ 26,167 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, 9,950 ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೂ 1,218 ಡೆಡ್ಲಿ ಕೊರೊನಾಗೆ ಬಲಿಯಾಗಿದ್ದಾರೆ. ಕೊರೊನಾ ಸೋಂಕಿತರ ಹಾಗೂ ಮೃತ ಸಂಖ್ಯೆಯು ನಿನ್ನೆಗಿಂತಲೂ ಇಂದು ಹೆಚ್ಚಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಶುಕ್ರವಾರ ಸಂಜೆ ನೀಡಿದ್ದ ಮಾಹಿತಿ ಪ್ರಕಾರ, 24 ಗಂಟೆಗಳಲ್ಲಿ 1,993 ಮಂದಿ ಸೋಂಕಿಗೆ ತಗುಲಿದ್ದು, 73 ಮಂದಿ ಬಲಿಯಾಗಿದ್ದರು. ಆದರೆ  ಶುಕ್ರವಾರ ಬೆಳಗ್ಗೆಯಿಂದ  ಶನಿವಾರ ಬೆಳಗ್ಗೆವರೆಗೆ ಪತ್ತೆಯಾದ ಸೋಂಕಿತರ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ. ಈ ಹಿಂದೆ  24 ಗಂಟೆಯಲ್ಲಿ 2,293 ಅಥವಾ ಅದಕ್ಕಿಂತ ಹೆಚ್ಚು ಜನರಿಗೆ ಸೋಂಕು ಪತ್ತೆಯಾಗಿರಲಿಲ್ಲ.

ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 589ಕ್ಕೆ ಏರಿಕೆಯಾಗಿದೆ. ಶುಕ್ರವಾರ ಸಂಜೆಯ ಮಾಹಿತಿ ಪ್ರಕಾರ 216 ಮಂದಿ ಗುಣಮುಖರಾಗಿದ್ದು, 22 ಮಂದಿ ಮೃತಪಟ್ಟಿದ್ದಾರೆ. ಸೋಂಕಿತ ಪ್ರಕರಣಗಳ ಪಟ್ಟಿಯಲ್ಲಿ ರಾಜ್ಯ 12ನೇ ಸ್ಥಾನದಲ್ಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights