APMC ಸುಗ್ರೀವಾಜ್ಞೆ: ನಾಳೆ ಹಮಾಲಿ ಕಾರ್ಮಿಕರಿಂದ ಮುಷ್ಕರ!

ಕೊರೊನಾ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೀಡಾಗಿರುವ ತಮಗೆ ಆರ್ಥಿಕ ನೆರವು ನೀಡುವಂತೆ ಒತ್ತಾಯಿಸಿ ಯಶವಂತಪುರ ಎಪಿಎಂಸಿ ಹಮಾಲಿ ಕಾರ್ಮಿಕರು ಮೇ 30ರಂದು ಮುಷ್ಕರ ಹಮ್ಮಿಕೊಂಡಿದ್ದಾರೆ.

ಎಪಿಎಂಸಿ ಮಂಡಿ ಹಮಾಲಿ ಕಾರ್ಮಿಕರ ಸಂಘ, ಎಪಿಎಂಸಿ ಲೋಡಿಂಗ್‌ ಅನ್‌ಲೋಡಿಂಗ್‌ ಜನರಲ್‌ ವರ್ಕರ್ಸ್ ಯೂನಿಯನ್‌, ರೆಗ್ಯುಲೇಟೆಡ್‌ ಮಾರ್ಕೆಟ್‌ ವರ್ಕರ್ಸ್ ಯೂನಿಯನ್‌ ಹಾಗೂ ಎಪಿಎಂಸಿ ಯಾರ್ಡ್‌ ಮಹಿಳಾ ಕಾರ್ಮಿಕರ ಸಂಘದಿಂದ ಮುಷ್ಕರ ಹಮ್ಮಿಕೊಳ್ಳಲಾಗಿದೆ.

ಹಮಾಲಿ ಕಾರ್ಮಿಕರಿಗೆ 10 ಸಾವಿರ ರೂ. ಆರ್ಥಿಕ ನೆರವು ನೀಡಬೇಕು, ಮೂರು ತಿಂಗಳಿಗಾಗುವಷ್ಟು ಉಚಿತ ರೇಷನ್‌ ಕಿಟ್‌ ಹಾಗೂ ಹಮಾಲಿ ಕಾರ್ಮಿಕರನ್ನು ಕೊರೊನಾ  ವಾರಿಯರ್ಸ್‌ ಎಂದು ಪರಿಗಣಿಸಿ ವಿಮೆ ಜಾರಿ ಮಾಡುವುದರ ಜತೆಗೆ ಮಾಸ್ಕ್‌ ಮತ್ತು ಸ್ಯಾನಿಟೈಸರ್‌ ವಿತರಿಸಬೇಕು. ಮಾರುಕಟ್ಟೆಗೆ ಅಂತಾರಾಜ್ಯಗಳಿಂದ ಬರುವವರನ್ನು ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೊಳಪಡಿಸಬೇಕು ಎಂಬ ನಾನಾ ಹಕ್ಕೊತ್ತಾಯಗಳನ್ನು ಕಾರ್ಮಿಕರು ಸರ್ಕಾರದ ಮುಂದಿಟ್ಟು ಮುಷ್ಕರ ನಡೆಸಲಿದ್ದಾರೆ.

ಅಲ್ಲದೆ, ಹಮಾಲಿ ಕಾರ್ಮಿಕರನ್ನು ನಿರುದ್ಯೋಗಿಗಳನ್ನಾಗಿ ಮಾಡಲಿರುವ ಎಪಿಎಂಸಿ ಸುಗ್ರೀವಾಜ್ಞೆ ವಾಪಸು ಪಡೆಯಬೇಕು ಎಂದು ಒತ್ತಾಯಿಸಿ ಪ್ರತಿಭಟಿಸಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.