Lock down : ಹಸು-ಕರುಗಳಿಗೆ ಮೇವಿಲ್ಲ, ಪ್ರಾಣಿಗಳ ಕೇಳೋರಿಲ್ಲ, ನೀಗದ ಹಸುಗಳ ಗೋಳು..
ಕೊರೋನಾ ಮಾರಿಗೆ ತಡೆಯಾಗಿ ಜಾರಿಯಲ್ಲಿರುವ ಲಾಕ್‌ಡೌನ್ ಕೇವಲ ಮನುಷ್ಯರನ್ನಷ್ಟೇ ಅಲ್ಲ ಪ್ರಾಣಿ ಪಕ್ಷಿಗಳನ್ನು ಹೈರಾಣಾಗಿಸಿದೆ. ಲಾಕ್‌ಡೌನ್ ಕಾರಣ ಆಹಾರವಿಲ್ಲದೇ ಪ್ರಾಣಿಗ ಪಕ್ಷಿಗಳು ಸೊರಗುತ್ತಿವೆ. ಮೇಲಾಗಿ ಬಿಸಿಲ ಬೇಗೆ ಅವುಗಳ ಬದುಕನ್ನು ದುರ್ಭರಗೊಳಿಸಿದೆ.

ಗೋಮಾಳಗಳಲ್ಲಿರುವ ಹಸುಗಳಿಗೆ ಒಂದು ಹೊತ್ತಿನ ಮೇವಿಗೂ ತತ್ವಾರ ಉಂಟಾಗಿದೆ. ಇದೇ ಪರಿಸ್ಥಿತಿ ಬೀಡಾದಿ ಪ್ರಾಣಿ ಸಂಕುಲಕ್ಕೂ ಬಂದೊದಗಿದೆ. ಲಾಕ್‌ಡೌನಿನಿಂದಾಗಿ ಹುಲ್ಲು, ಮೇವು, ಹಿಂಡಿ, ಬೂಸಾ ಹೀಗೆ ಎಲ್ಲದರ ದರಗಳು ದುಪ್ಪಟ್ಟಾಗಿರುವುದರಿಂದ ಹಸುಗಳನ್ನು ಸಾಕುವುದೇ ದುಸ್ತರ ಎಂಬಂತಹ ಸ್ಥಿತಿ ಬಂದೊದಗಿದೆ.

ಸರಕಾರ ಏನೇ ಹೇಳಿದರೂ ಮೇವು ಸಾಗಾಟ, ಖರೀದಿಗೆ ನಿರ್ಬಂಧಗಳು ಸಂಪೂರ್ಣ ತೆರವಾಗಿಲ್ಲ. ಹೀಗಾಗಿ ಮೇವು ಖರೀದಿಸುವುದೇ ಕಷ್ಟದ ವಿಷಯವಾಗಿದೆ.ಬೆಂಗಳೂರಿನಲ್ಲಿರುವ ಗೋಮಾಳವೊಂದರಲ್ಲಿ ಸುಮಾರು 200ಕ್ಕೂ ಹೆಚ್ಚು ಹಸುಗಳು ಒಪ್ಪೊತ್ತಿನ ಮೇವುಂಡು ಮೂಕ ವೇದನೆ ಅನುಭವಿಸುತ್ತಿವೆ ಎಂದು ವಿಶೇಷ ವರದಿ ಪ್ರಕಟಿಸಿದೆ.

ಈ ಮಧ್ಯೆ ಉಣ್ಣಲು ಕಾಳಿಲ್ಲದೇ ಮಹಾರಾಷ್ಟ್ರದಲ್ಲಿ ಕುದುರೆಗಳು ಪ್ರಾಣ ಬಿಡುವ ಸ್ಥಿತಿ ತಲೆದೋರಿದೆ. ಕೊರೋನಾ ಸೋಂಕಿನ ತಾಂಡವ ಅತಿ ಹೆಚ್ಚಿರುವ ಮಹಾರಾಷ್ಟ್ರದಲ್ಲಿ ಮೂಕ ಪ್ರಾಣಿಗಳ ಗೋಳು ಹೇಳತೀರದಾಗಿದೆ. ಈಗ ಬಂದಿರುವ ವರದಿಗಳ ಪ್ರಕಾರ ಹಸಿವಿನಿಂದಾಗಿ ಮಹಾರಾಷ್ಟ್ರದಲ್ಲಿ ಐದು ಕುದುರೆಗಳು ಪ್ರಾಣ ಬಿಟ್ಟಿವೆ. ರಾಜ್ಯದ ಹಲವೆಡೆ ಪ್ರಾಣಿಗಳು ಸಾವಿನತ್ತ ಮುಖ ಮಾಡಿವೆ ಎನ್ನಲಾಗಿದೆ.

