ಕಾಣೆಯಾಗಿದ್ದ 76 ಮಕ್ಕಳನ್ನು ಹುಡುಕಿದ ಮಹಿಳಾ ಪೊಲೀಸ್: ಕಾನ್ಸ್ಟೇಬಲ್ಗೆ ಪ್ರಮೋಷನ್!
ಕಾಣೆಯಾಗಿದ್ದ 76 ಮಕ್ಕಳನ್ನು ದೆಹಲಿಯ ಸಮಯ್ಪುರ ಬಾಡ್ಲಿ ಪೊಲೀಸ್ ಠಾಣೆಯ ಮಹಿಳಾ ಹೆಡ್ ಕಾನ್ಸ್ಟೇಬರ್ ಒಬ್ಬರು ಪತ್ತೆಹಚ್ಚಿದ್ದಾರೆ. ಅವರ ಈ ಸಾಧನೆಗಾಗಿ ಔಟ್ ಆಫ್ ಟರ್ನ್ ಪ್ರಮೋಷನ್ ಅಡಿಯಲ್ಲಿ ವಿಶೇಷ ಬಡ್ತಿ ಪಡೆದಿದ್ದಾರೆ.
ದೆಹಲಿಯಲ್ಲಿ ಕಳೆದ ಎರಡೂವರೆ ತಿಂಗಳಲ್ಲಿ ನಾಪತ್ತೆಯಾಗಿದ್ದ 76 ಮಕ್ಕಳನ್ನು ಪತ್ತೆ ಹಚ್ಚಿ ಕರೆತಂದಿದ್ದಕ್ಕಾಗಿ ವಿಶೇಷ ಬಡ್ತಿ ನೀಡಲಾಗಿದೆ. ಈ ಮೂಲಕ ಔಟ್ ಆಫ್ ಟರ್ನ್ ಪ್ರಮೋಷನ್ ಅಡಿಯಲ್ಲಿ ಬಡ್ತಿ ಪಡೆದ ಮೊದಲ ಪೊಲೀಸ್ ಎಂಬ ಖ್ಯಾತಿಗೆ ಕಾನ್ಸ್ಟೇಬರ್ ಸೀಮಾ ಢಾಕಾ ಭಾಜನರಾಗಿದ್ದಾರೆ ಎಂದು ಪೊಲೀಸ್ ಆಯುಕ್ತ ಎಸ್. ಎನ್. ಶ್ರೀವಾಸ್ತವ ತಿಳಿಸಿದ್ದಾರೆ.
2018ರಲ್ಲಿ ಪಶ್ಚಿಮ ಬಂಗಾಳದಿಂದ ಏಳು ವರ್ಷದ ಬಾಲಕನೊಬ್ಬ ಮನೆಯಿಂದ ತಪ್ಪಿಸಿಕೊಂಡಿದ್ದ. ಆ ಬಾಲಕನನ್ನು ಅಕ್ಟೋಬರ್ 2020ರಲ್ಲಿ ಪಶ್ಚಿಮ ಬಂಗಾಳದಲ್ಲಿಯೇ ರಕ್ಷಿಸಿದ್ದಾಗಿ ಢಾಕಾ ಹೇಳಿದ್ದಾರೆ.
ಇದನ್ನೂ ಓದಿ: ಜೋ ಬೈಡನ್ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ವಿವೇಕ್ ಮೂರ್ತಿ ಮತ್ತು ಅರುಣ್ ಮಜುಂದಾರ್ಗೆ ಸ್ಥಾನ
2018ರಲ್ಲಿ ಏಳು ವರ್ಷದ ಪುತ್ರ ಕಾಣೆಯಾದ ಬಗ್ಗೆ ಮಹಿಳೆಯೊಬ್ಬರು ದೂರು ದಾಖಲಿಸಿದ್ದರು. ಆದರೆ, ಅವರ ಮನೆ ವಿಳಾಸ, ಮೊಬೈಲ್ ನಂಬರ್ ಬದಲಾಗಿ ಆಕೆಯನ್ನು ಸಂಪರ್ಕಿಸುವುದು ತುಂಬಾ ತ್ರಾಸದಾಯಕವಾಗಿತ್ತು. ಹೇಗೋ ಪಶ್ಚಿಮ ಬಂಗಾಳದಲ್ಲಿ ಆಕೆಯ ಮಗನನ್ನು ಪತ್ತೆ ಮಾಡಿ, ಎರಡು ನದಿಗಳನ್ನು ದಾಟಿ ಆಕೆಯ ಊರು ತಲುಪಿದ್ದಾಗಿ ಢಾಕಾ ತಿಳಿಸಿದ್ದಾರೆ.
2006 ಜುಲೈ 3 ರಂದು ದೆಹಲಿ ಪೊಲೀಸ್ ಸೇವೆಗೆ ಸೇರಿದ ಢಾಕಾ, 2012ರವರೆಗೂ ಅಗ್ನೇಯ ದೆಹಲಿಯಲ್ಲಿಯೇ ಸೇವೆಗೆ ನಿಯೋಜನೆಗೊಂಡಿದ್ದರು. 2014ರಲ್ಲಿ ಬಡ್ತಿ ಪಡೆದು ಹೆಡ್ ಕಾನ್ಸ್ ಟೇಬಲ್ ಆಗಿದ್ದಾರೆ.
ಇದನ್ನೂ ಓದಿ: ಬಿಹಾರದಲ್ಲಿ ಹೀನಾಯ ಸೋಲು: ಕಾಂಗ್ರೆಸ್ ಮುಖಂಡರು ರಾಜೀನಾಮೆ?
ಯಾವುದೇ ಕಾನ್ಸ್ ಟೇಬಲ್ ಅಥವಾ ಹೆಡ್ ಕಾನ್ಸ್ ಟೇಬಲ್ 12 ತಿಂಗಳೊಳಗೆ 14 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ 50 ಕ್ಕೂ ಹೆಚ್ಚು ಕಾಣೆಯಾದ ಮಕ್ಕಳನ್ನು ಪತ್ತೆ ಹಚ್ಚಿದರೆ ಅವರಿಗೆ ಈ ವಿಶೇಷ ಬಡ್ತಿ ನೀಡಲಾಗುತ್ತದೆ. ಇದೇ ಅವಧಿಯಲ್ಲಿ 15ಕ್ಕೂ ಹೆಚ್ಚು ಮಕ್ಕಳನ್ನು ಪತ್ತೆ ಹಚ್ಚಿದರೆ ಅಸಾಧಾರಾಣ ಕಾರ್ಯ ಪುರಸ್ಕಾರ ನೀಡಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಮೀಸಲಾತಿಯನ್ನು ಚರ್ಚೆಗೆ ತಂದ ಪಟಾಕಿ ವಿಚಾರ: ಕಂಗನಾ ವಿರುದ್ಧ ನೆಟ್ಟಿಗರ ಆಕ್ರೋಶ!

