Look down : ರೈತರ ಸಂಕಷ್ಟ ಹೇಳತೀರದು, ಸರಕಾರದ ಕಳಪೆ ನಿರ್ವಹಣೆ ವಿರುದ್ಧ ಸಿದ್ದು ಕಿಡಿ..

ಕೊರೋನಾ ಸೋಂಕಿನ ವಿರುದ್ಧದ ಲಾಕ್‌ಡೌನ್‌ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಎಡವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕಲಬುರಗಿಯ ರೈತನೊಬ್ಬ ತಾನು ಬೆಳೆದ ಕಲ್ಲಂಗಡಿ ಮಾರಾಟಮಾಡಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವುದು ಆಘಾತಕಾರಿ ಬೆಳವಣಿಗೆ. ಪರಿಸ್ಥಿತಿ ಕೈಮೀರುವ ಮೊದಲು ರೈತರ ಕಷ್ಟ ನಿವಾರಣೆಗೆ ಮುಂದಾಗಬೇಕು.

ಒಂದೆಡೆ ರೈತರು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೆ ಕಷ್ಟದಲ್ಲಿದ್ದಾರೆ. ಇನ್ನೊಂದೆಡೆ ಬಳಕೆದಾರರು ತರಕಾರಿಹಣ್ಣುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಈ ಸಮಸ್ಯೆಯನ್ನು ನಿವಾರಿಸಲು ಹಾಪ್‌ಕಾಮ್ ರೈತರಿಂದ ಖರೀದಿಸಿ ಬಳಕೆದಾರರಿಗೆ ಮಾರಾಟ ಮಾಡಲು ವ್ಯವಸ್ಥೆ ಮಾಡಬೇಕು ಎಂದು ಸಿದ್ದರಾಮಯ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

 

ಅಗತ್ಯ ಪ್ರಮಾಣದಲ್ಲಿ ಪೂರೈಕೆ ಆಗುತ್ತಿಲ್ಲ ಎಂಬುದನ್ನೇ ನೆಪ ಮಾಡಿ ವ್ಯಾಪಾರಿಗಳು ತರಕಾರಿ-ಹಣ್ಣು ಮತ್ತು ಆಹಾರ ಸಾಮಗ್ರಿಗಳ ಬೆಲೆಯನ್ನು ಹೆಚ್ಚಿಸಿ ಬಳಕೆದಾರರ ಸುಲಿಗೆ ನಡೆಸುತ್ತಿರುವ ದೂರು ಕೇಳಿಬರುತ್ತಿದೆ.

ಬೆಂಬಲ ಬೆಲೆಗೆ ಖರೀದಿಸುವ ತೊಗರಿಯನ್ನು 20 ಕ್ವಿಂಟಲ್‌ಗೆ ಹೆಚ್ಚಿಸಲು ಮಾಡಿರುವ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ಬೆಂಬಲ ಬೆಲೆಗೆ ತೊಗರಿ ಖರೀದಿಸಿ ಪಡಿತರ ಅಂಗಡಿಗಳಲ್ಲಿ ವಿತರಿಸುವ ವ್ಯವಸ್ಥೆ ಮಾಡಬೇಕು ಎಂದು ಅವರು ಸರಕಾರಕ್ಕೆ ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಅಕ್ಕಿ ಗಿರಣಿಗಳನ್ನು ಮುಚ್ಚಿರುವ ಕಾರಣ ಪೂರೈಕೆ ಇಲ್ಲದೆ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಏರತೊಡಗಿದೆ. ಇದರಿಂದಾಗಿ ಅಕ್ರಮ ದಾಸ್ತಾನಿನ ಆರೋಪ ಕೇಳಿಬರುತ್ತಿದೆ. ರಾಜ್ಯಸರ್ಕಾರ ಮಧ್ಯಪ್ರವೇಶಿಸಿ ಅಕ್ಕಿ ಗಿರಣಿಗಳನ್ನು ತೆರೆಸಿ ಅಕ್ಕಿ ಪೂರೈಕೆಯನ್ನು ಸುಗಮಗೊಳಿಸಬೇಕು ಎಂದೂ ಸಿದ್ದು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights