ಈ ಊರಿನ ಮಕ್ಕಳಲ್ಲಿನ ಅಪೌಷ್ಟಿಕತೆಗೆ ಕಾರಣ ಬಡತನವಲ್ಲ ನಶೆ ಏರಿಸುವ ಸರಾಯಿ….!
ಈ ಜಿಲ್ಲೆಯಲ್ಲಿ ಕಾಡುತ್ತಿರುವುದು ಅಪೌಷ್ಠಿಕತೆ, ಇಲ್ಲಿಯ ಅಪೌಷ್ಠಿಕತೆಗೆ ಬಡತನ ಕಾರಣವಾಗಿದೆ ಎಂಬುವದು ಎಲ್ಲರಿಗೂ ತಿಳಿದ ವಿಷಯ ಆದರೆ ಅಪೌಷ್ಠಿಕತೆಗೆ ನಶೆ ಏರಿಸುವ ಸಿಎಚ್ ಪೌಡರ ಎಂಬ ಸರಾಯಿಯೂ ಕಾರಣ, ಈ ರೀತಿಯ ಸಂಶೋಧನೆಯೊಂದು ಈಗ ಬಹಿರಂಗವಾಗಿದ್ದು, ಸಿಎಚ್ ಪೌಡರ್ ಬಳಕೆಯನ್ನು ನಿಲ್ಲಿಸಲು ಪೊಲೀಸರು ಯತ್ನಿಸಬೇಕಾಗಿದೆ, ಈ ಕುರಿತ ಮಾಹಿತಿ ಇಲ್ಲಿದೆ.
ರಾಜ್ಯದಲ್ಲಿ ಅತೀ ಹೆಚ್ಚು ಅಪೌಷ್ಠಿಕತೆ ಇರೋದು ರಾಯಚೂರು ಜಿಲ್ಲೆ, ಎಡದೊರೆ ನಾಡಾಗಿರುವ ರಾಯಚೂರು ಜಿಲ್ಲೆಯಲ್ಲಿ ಶೇ 28.40 ರಷ್ಟು ಮಕ್ಕಳಲ್ಲಿ ಅಪೌಷ್ಠಿಕತೆ ಕಾಡುತ್ತಿದೆ, ರಾಯಚೂರು ಜಿಲ್ಲೆಯಲ್ಲಿ 2187351 ಜನಸಂಖ್ಯೆ ಹೊಂದಿದ್ದು ಅದರಲ್ಲಿ 1 ರಿಂದ 6 ವಯಸ್ಸಿನ ಮಕ್ಕಳ ಸಂಖ್ಯೆ 216748 ಮಕ್ಕಳಿದ್ದಾರೆ, ಅವರಲ್ಲಿ 188260 ಮಕ್ಕಳನ್ನು ಪರೀಕ್ಷಿಸಿದಾಗ 53133 ಮಕ್ಕಳಲ್ಲಿ ಅಪೌಷ್ಠಿಕ ಮಕ್ಕಳ ಇದ್ದು ಶೇ 28.40 ರಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ, ಅಪೌಷ್ಠಿಕತೆ ಮುಖ್ಯ ಕಾರಣ ಇಲ್ಲಿ ಬಡತನ ಎಂಬುವುದು ಒಂದು ಕಾರಣವಾಗಿದ್ದರೆ, ಇನ್ನೊಂದು ಅಘಾತಕಾರಿ ಅಂಶವನ್ನು ರಾಯಚೂರು ವೈದ್ಯಕೀಯ ಸಂಶೋಧನಾ ಸಂಸ್ಥೆ( ರಿಮ್ಸ್)ನ ಮನೋವೈದ್ಯರಾದ ಡಾ ರಮೇಶಬಾಬುರವರು ಅಧ್ಯಯನದ ಪ್ರಕಾರಣ ಈ ಭಾಗದಲ್ಲಿ ನಶೆ ಏರಿಸುವ ಸಿಎಚ್ ( ಕ್ಲೋರೋ ಹೈಡ್ರೆಡ್) ಎಂಬ ವಸ್ತು ಸಹ ಇಲ್ಲಿ ಮಕ್ಕಳಲ್ಲಿ ಅಪೌಷ್ಠಿಕತೆಗೆ ಕಾರಣ ಎನ್ನಲಾಗುತ್ತಿದೆ, ಅದರಲ್ಲಿಯೂ ಪರಿಶಿಷ್ಟ ಜಾತಿಯವರಲ್ಲಿ ಅಪೌಷ್ಠಿಕತೆ ಅಧಿಕವಾಗಿದ್ದು, ಇದಕ್ಕೆ ಕಾರಣ ಪುರುಷರು ಹಾಗು ಕೆಲವು ಮಹಿಳೆಯರು ಕಡಿಮೆ ದರದಲ್ಲಿ ಸಿಗುವ ಸಿಎಚ್ ಪೌಡರ್ ಸರಾಯಿ ಕುಡಿಯುತ್ತಿರುವದೇ ಕಾರಣ ಎಂದು ಹೇಳಲಾಗುತ್ತಿದೆ, ಈ ಬಗ್ಗೆ ಅಧ್ಯಯನ ನಡೆಸಿ ಪಕ್ಕದ ತೆಲಂಗಾಣ ರಾಜ್ಯದಿಂದ ಬರುತ್ತಿರುವ ಸಿಎಚ್ ಪೌಡರ್ ಬಳಕೆ ನಿಲ್ಲಿಸಬೇಕೆಂದು ಈಗಾಗಲೇ ಪೊಲೀಸರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಡಾ ರಮೇಶ ಬಾಬು ತಿಳಿಸಿದ್ದಾರೆ,
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಸಿ ಬಿ ವೇದಮೂರ್ತಿ ಈ ಹಿಂದೆ ಡಿ ಕಿಶೋರಬಾಬುರವರಿದ್ದಾಗ ಮನೋವೈದ್ಯರಿಂದ ಒಂದು ಪತ್ರ ಬಂದಿದೆ, ರಾಯಚೂರು ನಗರ ಸೇರಿದಂತೆ ವಿವಿಧಡೆ ಬಳಕೆಯಾಗುತ್ತಿರುವ ನಿಷೇದಿತ ಸಿಎಚ್ ಪೌಡರ ಸಾಗಾಣಿಕೆ, ಪೌಡರಿನಿಂದ ಸರಾಯಿ ತಯಾರಿಕೆ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತಿದೆ, ಇದೇ ವರ್ಷ ಒಟ್ಟು 156 ಪ್ರಕರಣಗಳನ್ನು ಪತ್ತೆ ಮಾಡಿ ಅದರಲ್ಲಿ 1500 ಕೆಜಿ ಸಿಎಚ್ ಪೌಡರ ವಶ ಪಡಿಸಿಕೊಳ್ಳಲಾಗಿದ್ದು ಒಟ್ಟು 77220 ಲೀಟರ್ ಸಿಎಚ್ ಪೌಡರ ಸರಾಯಿ ವಶ ಪಡಿಸಿಕೊಳ್ಳಲಾಗಿದೆ ಎಂದು ಸಿಎಚ್ ಪೌಡರ ಬಳಕೆಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ದಾಳಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ನಿಷೇದಿತವಾಗಿರುವ ಸಿಎಚ್ ಪೌಡರ, ಪಕ್ಕದ ತೆಲಂಗಾಣ ಹಾಗು ಆಂಧ್ರದಲ್ಲಿ ಕೃಷಿ ಬಳಕೆಗಾಗಿ ಬಳಸುತ್ತಿದ್ದಾರೆ, ಆದರೆ ಕೆಲವರು ಇದೇ ಪೌಡರನ್ನು ಸರಾಯಿಯಾಗಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ, ಜನರು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಿಎಚ್ ಪೌಡರ ಸಂಪೂರ್ಣ ನಿಷೇಧಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.

