ಕಾರ್ಮಿಕ ಇಲಾಖೆಯ ಆಹಾರ ಕಿಟ್ಗಳ ಅಕ್ರಮ ಶೇಖರಣೆ; ಗೋಡೌನ್ಗಳ ಮೇಲೆ ಕಾಂಗ್ರೆಸ್ ದಾಳಿ
ಕಾರ್ಮಿಕ ಇಲಾಖೆಯ ಆಹಾರ ಕಿಟ್ಗಳನ್ನ ಅಕ್ರಮವಾಗಿ ಮರು ಪ್ಯಾಕಿಂಗ್ ಮಾಡಿ ಸಾಗಾಟ ಮಾಡುತ್ತಿದ್ದ ಗೋಡೌನ್ ಮೇಲೆ ಕಾಂಗ್ರೆಸ್ ನಾಯಕರು ನಿನ್ನೆ ರಾತ್ರಿ ದಾಳಿ ಮಾಡಿದ್ದಾರೆ.
ಬೆಂಗಳೂರಿನ ರಾಮ ಮೂರ್ತಿನಗರದ ಮುನೇಶ್ವರ ನಗರದಲ್ಲಿರುವ ಲೋಟೋಸ್ ಕಲ್ಯಾಣ ಮಂಟಪದಲ್ಲಿ ದಾಸ್ತಾನುಗಳನ್ನು ಶೇಖರಿಸಿಡಲಾಗಿತ್ತು. ಆಹಾರ ಕಿಟ್ ಗಳ ಮೇಲಿದ್ದ ಸ್ಟಿಕರ್ಗಳನ್ನ ತೆಗೆದು ಅಕ್ರಮವಾಗಿ ಬೇಕಾದವರಿಗೆ ಹಂಚಲಾಗ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್ ಲಾಕ್ಡೌನ್ ಆದ ಸಂದರ್ಭದಿಂದಲೂ ಮಾಡುತ್ತಾ ಬಂದಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಶಾಸಕ ರಾಮಲಿಂಗಾರೆಡ್ಡಿ, ಮಾಜಿ ಸಂಸದ ಉಗ್ರಪ್ಪ ಮತ್ತು ಎಂಎಲ್ಸಿ ನಾರಾಯಣಸ್ವಾಮಿ ಅವರು ಗೋಡೌನ್ನಲ್ಲಿದ್ದ ಕಿಟ್ಗಳನ್ನ ಪರಿಶೀಲಿಸಿದ್ದಾರೆ. ಕಾರ್ಮಿಕರಿಗೆ ಸಿಗಬೇಕಿದ್ದ ಕಿಟ್ಗಳು ಬಿಜೆಪಿ ಕಾರ್ಯಕರ್ತರ ಮನೆ ಸೇರುತ್ತಿವೆ ಅಂತ ಆಕ್ರೋಶ ವ್ಯಕ್ತಪಡಿಸಿ, ಸ್ಥಳದಲ್ಲಿಯೇ ಧರಣಿ ನಡೆಸಿದ್ದಾರೆ.
ಈ ನಡುವೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸ್ಥಳಕ್ಕೆ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು. ಸ್ಥಳೀಯ ಶಾಸಕ ಹಾಗೂ ಸಚಿವ ಬೈರತಿ ಬಸವರಾಜ್ ಕಾರ್ಮಿಕ ಇಲಾಖೆಯ ಆಹಾರ ಕಿಟ್ಗಳನ್ನು ತಮ್ಮ ಕಾರ್ಯಕರ್ತರಿಗೆ ಅಂಚುತ್ತಿದ್ದಾರೆ, ಈ ಬಗ್ಗೆ ತನಿಖೆಯಾಗಬೇಕೆಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.
ಕಾರ್ಮಿಕ ಇಲಾಖೆಯ ಕಿಟ್ಗಳನ್ನ ಸರ್ಕಾರಿ ಗೋಡೌನ್ ಬಿಟ್ಟು, ಖಾಸಗಿ ಚೌಲ್ಟ್ರಿಯಲ್ಲಿ ಶೇಖರಣೆ ಮಾಡಿದ್ದ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ. ಆಹಾರ ಕಿಟ್ಗಳನ್ನ ಸಾಗಾಟ ಮಾಡ್ತಿದ್ದ ಚಾಲಕ ಮತ್ತು ಕೆಲವರು ಸ್ಥಳದಿಂದ ಪರಾರಿ ಆಗಿದ್ದು, ಈ ಬಗ್ಗೆ ಕಾಂಗ್ರೆಸ್ ನಿಯೋಗ ಕೆ ಆರ್ ಪುರಂ ಠಾಣೆಗೆ ದೂರು ನೀಡಿದೆ. ಕಾರ್ಮಿಕ ಇಲಾಖೆ ಅಧಿಕಾರಿಗಳನ್ನ ಕರೆಸಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ.

