ಕೊರೊನಾ ಸಾವು-ನೋವುಗಳಲ್ಲಿ ಚೀನಾವೇ ಮೊದಲು : ಡ್ರ್ಯಾಗನ್ ಗೆ ಟ್ರಂಪ್ ಎಚ್ಚರಿಕೆ!
ಕೊರೊನಾ ತವರಾದ ಚೀನಾ ವಿರುದ್ಧ ದೇಶದ ದೊಡ್ಡಣ್ಣ ಮತ್ತೊಮ್ಮೆ ಸಿಡಿದ್ದೆದ್ದಿದ್ದಾರೆ. ಚೀನಾದಲ್ಲಿ ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆಯ ಕುರಿತು ಅನುಮಾನ ವ್ಯಕ್ತಪಡಿಸಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ಸುಳ್ಳು ಮಾಹಿತಿ ನೀಡುತ್ತಲಿದೆ ಎಂದು ಆರೋಪಿಸಿದ್ದಾರೆ.
ಹೌದು… ಚೀನಾ ನೀಡಿದ ಕೊರೊನಾದಿಂದಾಗಿ ಸಾವಿಗೀಡಾದವರ ಬಗೆಗಿನ ಅಧಿಕೃತ ಮಾಹಿತಿ ಅನುಮಾನಾಸ್ಪದವಾಗಿದೆ ಎಂದು ಹೇಳಲಾಗುತ್ತಿದೆ. ಆರಂಭದಲ್ಲೇ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡ ಕೊರೊನಾಕ್ಕೆ ಈವರೆಗೆ 1,300 ಸಾವುಗಳು ಸಂಭವಿಸಿವೆ. ಚೀನಾದಲ್ಲಿ ಒಟ್ಟಾರೆ 4,600 ಸಾವು ಮಾತ್ರ ಸಂಭವಿಸಿದೆ ಎಂದು ಚೀನಾದ ಕ್ಸೀ ಚಿನ್‌ಪಿಂಗ್ ಸರ್ಕಾರ ಮಾಹಿತಿ ನೀಡಿದ ಎರಡು ದಿನಕ್ಕೆ ಅಮೆರಿಕ ಇಂತಹ ಅನುಮಾನವೊಂದನ್ನು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಪ್ರಸ್ತಾಪಿಸಿದ್ದಾರೆ.
ಈ ಬಗ್ಗೆ ಶ ನಿವಾರ ಅಮೆರಿಕದ ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಟ್ರಂಪ್, “ಕೊರೋನಾ ಸಾವಿನ ಸಂಖ್ಯೆಯಲ್ಲಿ ಅಮೆರಿಕ ನಂಬರ್1 ಅಲ್ಲ. ಚೀನಾ ದೇಶವೇ ನಂಬರ್1. ಸಾವಿನ ಸಂಖ್ಯೆಯಲ್ಲಿ ಅವರು ನಮಗಿಂತ ಮುಂದಿದ್ದಾರೆ. ಯಾಕೆಂದ್ರೆ ಇಂಗ್ಲೆಂಡ್, ಫ್ರಾನ್ಸ್, ಬೆಲ್ಜಿಯಂ, ಇಟಲಿ ಮತ್ತು ಸ್ಪೇನ್ ಹೆಚ್ಚು ಅಭಿವೃದ್ಧಿ ಹೊಂದಿದ ಆರೋಗ್ಯ ವ್ಯವಸ್ಥೆಗಳನ್ನು ಹೊಂದಿರುವ ದೇಶ. ಆದರೆ, ಇಂತಹ ದೇಶಗಳೇ ಹೆಚ್ಚಿನ ಸಾವಿನ ಪ್ರಮಾಣವನ್ನು ಹೊಂದಿರುವಾಗ ಚೀನಾದಲ್ಲಿ ಇನ್ನೂ ಅಧಿಕ ಪ್ರಮಾಣದ ಸಾವು-ನೋವುಗಳು ಸಂಭವಿಸಿರಬೇಕು. ಚೀನಾ ಅಧಿಕೃತ ಸಾವಿನ ಸಂಖ್ಯೆಗಳಿಗಿಂತ ನಿಜವಾದ ಸಂಖ್ಯೆ ಹೆಚ್ಚು. ಅಲ್ಲಿನ ಸರ್ಕಾರ ಅವಾಸ್ತವಿಕ ಅಂಕಿಅಂಶ ನೀಡಿದೆ” ಎಂದು ಟ್ರಂಪ್ ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಚೀನಾ ದೇಶಕ್ಕೆ ಎಚ್ಚರಿಕೆ ನೀಡಿರುವ ಟ್ರಂಪ್, “ಕೊರೋನಾ ಸಾಂಕ್ರಾಮಿಕ ರೋಗವನ್ನು ಉದ್ದೇಶಪೂರ್ವಕವಾಗಿ ಹರಡಿದ್ದೇ ಆಗಿದ್ದರೆ ಇದರ ಪರಿಣಾಮಗಳನ್ನು ಚೀನಾ ಖಂಡಿತ ಎದುರಿಸಲೇಬೇಕಾಗುತ್ತದೆ” ಎಂದು ತಿಳಿಸಿದ್ದಾರೆ.

