ಕೊರೊನಾ ಕಿಟ್ ಹಗರಣ: ಕಾಂಗ್ರೆಸ್‌ – ಬಿಜೆಪಿ ನಡುವೆ ಜಟಾಪಟಿ

ಕೊರೊನಾ ಸಂಬಂಧಿತ ವೈದ್ಯಕೀಯ ಸಾಮಗ್ರಿ ಖರೀದಿ ಹಗರಣದ ಆರೋಪದಲ್ಲಿ ಸಿಲುಕಿರುವ ರಾಜ್ಯ ಸರ್ಕಾರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ “ನಗರದಲ್ಲಿ ಕೊರೊನಾ ಸೋಂಕು ಸಮಸ್ಯೆ ಇರುವಾಗಲೇ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ನಿರ್ದೇಶಕ ಡಾ ಮಂಜುನಾಥ್ ಅವರನ್ನು ಸರಕಾರ ಏಕಾಏಕಿ ರಜೆಗೆ ಕಳುಹಿಸಿದ್ದು ಯಾಕೆ?” ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಖಂಡ್ರೆ, “ಕೋವಿಡ್ ಸಮಸ್ಯೆ ಇರುವಾಗಲೇ ನಿರ್ದೇಶಕರನ್ನ ರಜೆಗೆ ಕಳುಹಿಸಿದ್ದು ಯಾಕೆ? ಏಕಾಏಕಿ ನಿರ್ದೇಶಕರನ್ನ ಬದಲಾಯಿಸೋದು ಯಾಕೆ? ಇದರ ಹಿಂದೆ ಯಾರ ಹಿತಾಸಕ್ತಿ ಇದೆ ಸ್ವಾಮಿ? ರಾಜ್ಯದ ಜನ ಪ್ರಶ್ನೆ ಕೇಳ್ತಿದ್ದಾರೆ ಉತ್ತರಿಸಿ” ಎಂದು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.

ಕೋವಿಡ್ ಸಾಮಗ್ರಿ ಖರೀದಿಯಲ್ಲಿ ಅಕ್ರಮ ಎಸೆಗಿದ ಭ್ರಷ್ಟ ಬಿಜೆಪಿ ಸರ್ಕಾರ ಈಗ ಆಸ್ಪತ್ರೆ ವೈದ್ಯರನ್ನ ಧಿಡೀರ್ ರಜೆ ಮೇಲೆ ಕಳಿಸಿದೆ. ರಾಜ್ಯದ ಪ್ರಮುಖ ಕೋವಿಡ್ ಆಸ್ಪತ್ರೆಯಾದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ನಿರ್ದೇಶಕ ಡಾ ಮಂಜುನಾಥ್‌ರನ್ನು ಆರು ವಾರಗಳ ಕಾಲ ಧಿಡೀರ್ ರಜೆ ಮೇಲೆ ಕಳುಹಿಸಲಾಗಿದೆ. ಆಸ್ಪತ್ರೆಗೆ ಸಂಬಂಧವೇ ಇಲ್ಲದವರನ್ನ ನಿರ್ದೇಶಕರನ್ನಾಗಿಸೋ ಪ್ರಯತ್ನ ನಡೆದಿದೆ. ಸ್ವತಃ ಬೌರಿಂಗ್ ಆಸ್ಪತ್ರೆ ವೈದ್ಯರೇ ಸಚಿವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುಧಾಕರ್ ಅವರೇ ನಿಮ್ಮ ಮೂಗಿನ ಕೆಳಗೆ ಎಲ್ಲಾ ನಡಿತಾ ಇದ್ರೂ ಏಕೆ ಸುಮ್ಮನಿದ್ದಿರಿ ಎಂದಿದ್ದಾರೆ.

ಇದಕ್ಕೆ ಪ್ರತಿಟ್ವೀಟ್ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ರಜೆಯ ಮೇಲಿರುವ ವೈದ್ಯರು ರಜೆಕೋರಿ ಬರೆದಿರುವ ಪತ್ರವನ್ನು ಹಂಚಿಕೊಳ್ಳುವ ಮೂಲಕ, ಡಾ.ಮಂಜುನಾಥ್ ಅವರನ್ನು ತಾತ್ಕಾಲಿಕವಾಗಿ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಡೀನ್ ಹಾಗು ನಿರ್ದೇಶಕರ ಹುದ್ದೆಗೆ ಪ್ರಭಾರದಲ್ಲಿರಿಸಲಾಗಿತ್ತು. ಪ್ರಸ್ತುತ ಅವರು ಸ್ವಂತ ಕೋರಿಕೆ ಮೇರೆಗೆ ರಜೆಯಲ್ಲಿ ತೆರಳಿದ್ದು, ಕೋವಿಡ್ ಪರಿಸ್ಥಿತಿಯಲ್ಲಿ ಸಮರ್ಥ ನಿರ್ವಹಣೆಗಾಗಿ ಪ್ರಾಧ್ಯಾಪಕರಿಗೆ ಪ್ರಭಾರ ವಹಿಸಲಾಗಿದೆ. ವಿರೋಧ ಪಕ್ಷದ ಕಾರ್ಯಾಧ್ಯಕ್ಷರಾಗಿ ಹೀಗೆ ವಾಸ್ತವಾಂಶ ಅರಿಯದೇ ಬೇಜವಾಬ್ದಾರಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದ್ದಾರೆ.

https://twitter.com/mla_sudhakar/status/1281175458768273409?ref_src=twsrc%5Etfw%7Ctwcamp%5Etweetembed%7Ctwterm%5E1281175458768273409%7Ctwgr%5E&ref_url=https%3A%2F%2Fnaanugauri.com%2Fwhy-doctors-transfer-to-bowring-hospital-between-the-corona-problem-ishwar-khandre%2F

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights