ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡಲು ಮುಂದಾದ ಕಿಚ್ಚ ಸುದೀಪ್‌!

ದೇಶಾದ್ಯಂತ ಲಾಕ್‌ಡೌನ್ ಹೇರಲಾದ ಸಂದರ್ಭದಲ್ಲಿ ಬಹುಸಂಖ್ಯಾ ಜನರಿಗೆ ಉಂಟಾದ ಸಮಸ್ಯೆಗಳಿಗೆ ರಾಜ್ಯದಲ್ಲಿ ನೆರವು ನೀಡಲು ನಟ ಸುದೀಪ್‌ ಅವರು  ‘ಕಿಚ್ಚ’ ಸುದೀಪ್‌ ಚಾರಿಟೇಬಲ್ ಟ್ರಸ್ಟ್ ಮೂಲಕ ಸಹಾಯಾಸ್ತ ಚಾಚಿದ್ದರು. ತಮ್ಮ ಟ್ರಸ್ಟ್‌ನ ಕೆಲಸವನ್ನು ಮುಂದುವರೆಸಿದ್ದು, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಮೂರು ಹಾಗೂ ಹಿರಿಯೂರು ತಾಲ್ಲೂಕಿನ ಒಂದು ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಮಾಡಲು ಮುಂದಾಗಿದ್ದಾರೆ.

ಈ ಕುರಿತು ಚಳ್ಳಕೆರೆ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್‌. ಸುರೇಶ್ ಮಾಹಿತಿ ನೀಡಿದ್ದು, ‘ಚಳ್ಳಕೆರೆ ತಾಲ್ಲೂಕಿನ ಮೂರು ಶಾಲೆಗಳನ್ನು ‘ಕಿಚ್ಚ’ ಸುದೀಪ್‌ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದತ್ತು ಪಡೆದು, ಅವುಗಳನ್ನು ವಿವಿಧ ರೀತಿಯಲ್ಲಿ ಅಭಿವೃದ್ಧಿಪಡಿಸುವುದಕ್ಕೆ ಮುಂದೆ ಬಂದಿದ್ದಾರೆ. ಈ ಗಡಿಭಾಗದ ತಾಲ್ಲೂಕಿನ, ಅದರಲ್ಲೂ ಬರಪೀಡಿತ ಪ್ರದೇಶದ ಈ ಶಾಲೆಗಳನ್ನು ದತ್ತು ಪಡೆದು, ಅವುಗಳ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗಿರುವುದು, ನಮ್ಮ ಇಲಾಖೆ ಜೊತೆಗೆ ಕೈಜೋಡಿಸಿರುವುದು ಬಹಳ ಸಂತೊಷದ ವಿಚಾರವಾಗಿದೆ’ ಎಂದು ಹೇಳಿದ್ದಾರೆ.

‘ನಮ್ಮ ಗ್ರಾಮೀಣ ಭಾಗದ ಮಕ್ಕಳು ಅಧುನಿಕ ಗುಣಮಟ್ಟದ ಶಿಕ್ಷಣವನ್ನು ಪಡೆಯಬೇಕು, ಅವರಿಗೆ ಗುಣಾತ್ಮಕ ಶಿಕ್ಷಣ ಸಿಗಬೇಕು, ಈ ಶಾಲೆಗಳನ್ನು ಅಭಿವೃದ್ಧಿ ಪಥದತ್ತ ಒಯ್ಯಬೇಕು ಎಂಬ ಉದ್ದೇಶದಿಂದ ಸುದೀಪ್‌ ಅವರ ಈ ಚಾರಿಟೇಬಲ್‌ ಟ್ರಸ್ಟ್ ಕೆಲಸ ಮಾಡುತ್ತಿದೆ. ಆ ಹಿನ್ನೆಲೆಯಲ್ಲಿ ಸುದೀಪ್‌ ಅವರಿಗೂ ಮತ್ತು ಈ ಟ್ರಸ್ಟ್‌ನ ಎಲ್ಲ ಸದಸ್ಯರಿಗೂ ಧನ್ಯವಾದಗಳು’ ಎಂದು ಸುರೇಶ್‌ ಹೇಳಿದ್ದಾರೆ.

ಈ ಶಾಲೆಗಳಿಗೆ ಬೇಕಾದ ಅಗತ್ಯ ಸೌಕರ್ಯಗಳನ್ನು ನೀಡುವುದಕ್ಕೆ ಟ್ರಸ್ಟ್ ಮುಂದಾಗಿದೆ. ಕಟ್ಟಡ ದುರಸ್ತಿ, ಶೌಚಾಲಯ ವ್ಯವಸ್ಥೆ, ಶಾಲೆಗಳಿಗೆ ಕಂಪ್ಯೂಟರ್ ನೀಡುವುದು ಸೇರಿದಂತೆ ಅನೇಕ ಯೋಜನೆಗಳನ್ನು ಟ್ರಸ್ಟ್ ಹಮ್ಮಿಕೊಂಡಿದೆ. ಅಂದಹಾಗೆ, ಯೋಜನೆಯನ್ನು ಮಾರ್ಚ್‌ನಲ್ಲೇ ಜಾರಿ ಮಾಡಬೇಕು ಎಂದು ಟ್ರಸ್ಟ್ ಅಂದುಕೊಂಡಿತ್ತು. ಆದರೆ, ಕೊರೊನಾ ಲಾಕ್‌ಡೌನ್‌ನಿಂದಾಗಿ ತಡವಾಗಿತ್ತು. ಸುದೀಪ್ ಅವರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights