ಭಾರತೀಯ ನಿವೃತ್ತ ಸೇನಾಧಿಕಾರಿ ಜಾದವ್‌ಗೆ ಮರಣದಂಡನೆ; ಅಪ್ರಾಮಾಣಿಕತೆ ಮೆರೆಯುತ್ತಿದೆಯಾ ಪಾಕಿಸ್ತಾನ!

ಪಾಕಿಸ್ತಾನವು ಬಂಧಿಸಿರುವ ಭಾರತದ ನಿವೃತ್ತ ನೌಕಾಪಡೆ ಅಧಿಕಾರಿ ಕುಲಭೂಷಣ್ ಅವರಿಗೆ ಕಳೆದ ವಾರ ಪಾಕ್‌ ಕೋರ್ಟ್‌ ಮರಣದಂಡನೆ ಶಿಕ್ಷೆ ವಿಧಿಸಿದೆ. ಸಜೆಯ ತೀರ್ಪು ಹೊರಬಂದ ನಂತರ ಈಗ ಪ್ರತಿಕ್ರಿಯಿಸಿರುವ ಭಾರತ ಸರ್ಕಾರ ಜಾದವ್‌ ಅವರಿಗೆ ರಾಜತಾಂತ್ರಿಕ ಸಂಪರ್ಕ ನೀಡುವಲ್ಲಿ ಪಾಕಿಸ್ತಾನವು ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಆದೇಶವನ್ನು ಉಲ್ಲಂಘಿಸಿದೆ. ಅಲ್ಲದೆ,  ಅಪ್ರಾಮಾಣಿಕತೆ ಇಂದ ನಡೆದುಕೊಂಡಿದೆ ಎಂದು ಹೇಳಿದೆ.

ಐಸಿಜೆ ವಿಧಿಪಡಿಸಿದ ನಿಯಮಗಳ ಪ್ರಕಾರ ರಾಜತಾಂತ್ರಿಕ ಸಂಪರ್ಕ ಮುಕ್ತವಾಗಿರಬೇಕು. ಆದರೆ, ಪಾಕಿಸ್ತಾನ ಇದನ್ನ ಒದಗಿಸುವಲ್ಲಿ ವಿಫಲವಾಗಿದೆ. ಪಾಕಿಸ್ತಾನದ ಈ ವರ್ತನೆ ವಿರುದ್ಧ ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್, ಅಥವಾ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಭಾರತ ಸರ್ಕಾರ ದೂರು ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಐಸಿಜೆ ಸೂಚನೆಯ ಪ್ರಕಾರ, ಕುಲಭೂಷಣ್ ಜಾದವ್ ಅವರನ್ನು ಸಂಪರ್ಕಿಸಲು ಭಾರತೀಯ ರಾಜತಾಂತ್ರಿಕ ಅಧಿಕಾರಿಗಳಿಗೆ ಅವಕಾಶ ಒದಗಿಸಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಇದರ ಬೆನ್ನಲ್ಲೇ, ಭಾರತವು ಪ್ರತಿಕ್ರಿಸಿದ್ದು, ತಮಗೆ ತಡೆರಹಿತವಾಗಿ, ಬೇಷರತ್ ಆಗಿ ಮತ್ತು ಮುಕ್ತವಾಗಿ ಕುಲಭೂಷಣ್ ಜಾಧವ್ ಅವರೊಂದಿಗೆ ಮಾತನಾಡಲು ಅವಕಾಶ ನೀಡಲಾಗಿಲ್ಲ ಎಂದು ಆಪಾದಿಸಿದೆ.

ಭಾರತ ಅಧಿಕಾರಿಗಳು ಕುಲಭೂಷಣ್ ಜಾಧವ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನಮ್ಮ ಸುತ್ತ ಬೆದರಿಸುವ ರೀತಿಯಲ್ಲಿ ಪಾಕ್ ಅಧಿಕಾರಿಗಳು ಕೂತಿದ್ದರು. ಅಲ್ಲದೆ, ಈ ಸಂವಾದವನ್ನು ರೆಕಾರ್ಡ್ ಮಾಡಲಾಗುತ್ತಿತ್ತು. ಇದರಿಂದ ಮುಕ್ತವಾಗಿ ಮಾತನಾಡುವ ವಾತಾವರಣ ಅಲ್ಲಿರಲಿಲ್ಲ ಎಂದು ಭಾರತದ ವಿದೇಶಾಂಗ ಇಲಾಖೆ ಹೇಳಿಕೆ ನೀಡಿದೆ.

ಕುಲಭೂಷಣ್ ಜಾಧವ್ ಅವರು ಒತ್ತಡಕ್ಕೊಳಗಾದಂತಿತ್ತು.  ಪಾಕ್ ಅಧಿಕಾರಿಗಳು ಪಕ್ಕದಲ್ಲೇ ಇದ್ದದ್ದು ಅವರನ್ನು ವಿಚಲಿತರನ್ನಾಗಿಸಿತ್ತು. ಕುಲಭೂಷಣ್ ಅವರೊಂದಿಗೆ ಕಾನೂನು ಹಕ್ಕುಗಳ ವಿಚಾರದಲ್ಲಿ ಮಾತನಾಡಲು ಸಾಧ್ಯವಾಗಲಿಲ್ಲ. ಅವರ ಪರವಾಗಿ ಕಾನೂನು ಹೋರಾಟ ಮಾಡಲು ಲಿಖಿತ ಒಪ್ಪಿಗೆ ಪಡೆಯಲೂ ಅವಕಾಶ ನಿರಾಕರಿಸಲಾಯಿತು. ಪಾಕಿಸ್ತಾನವು ಕಲ್ಪಿಸಲಾಗಿದ್ದ ರಾಜತಾಂತ್ರಿಕ ಸಂಪರ್ಕ ಅರ್ಥಹೀನ ಮತ್ತು ಅಪ್ರಾಮಾಣಿಕವಾಗಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಕುಲಭೂಷಣ್ ಜಾಧವ್ ಅವರು ಪಾಕಿಸ್ತಾನದಲ್ಲಿ ಗೂಢಚಾರಿಯಾಗಿ ಕೆಲಸ ಮಾಡುತ್ತಾ ಅನೇಕ ವಿದ್ವಂಸಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆಂದು ಆರೋಪಿಸಿ ಪಾಕಿಸ್ತಾನ ಅವರನ್ನು ಬಂಧಿಸಿತ್ತು. ಹಾಗಾಗಿ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯಾಗಿದ್ದ ಕುಲಭೂಷಣ್ ಜಾಧವ್ ತಮ್ಮ ವೈಯಕ್ತಿಕ ವ್ಯವಹಾರದ ನಿಮಿತ್ತ 2016ರಲ್ಲಿ ಇರಾನ್​ನಲ್ಲಿದ್ದಾಗ ಪಾಕಿಸ್ತಾನೀಯರು ಅಪಹರಣ ಮಾಡಿದರೆಂದು ಭಾರತ ಹೇಳಿದೆ. ಆದರೆ, ಜಾಧವ್ ಅವರನ್ನ 2016, ಮಾರ್ಚ್ 3 ರಂದು ಬಲೂಚಿಸ್ತಾನದಲ್ಲಿ ಬಂಧಿಸಿದೆವೆಂದು ಪಾಕಿಸ್ತಾನ ತಿಳಿಸಿತ್ತು. ಪಾಕಿಸ್ತಾನದ ಮಿಲಿಟರಿ ಕೋರ್ಟ್​ನಲ್ಲಿ ತ್ವರಿತ ವಿಚಾರಣೆಯಾಗಿ 2017 ಏಪ್ರಿಲ್ 10ರಂದು ಮರಣ ದಂಡನೆ ವಿಧಿಸಿತ್ತು.

ಭಾರತ ಇದಕ್ಕೆ ಆಕ್ಷೇಪಿಸಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಯಿತು. ಕುಲಭೂಷಣ್ ಅವರನ್ನ ಬಿಡುಗಡೆಗೊಳಿಸಬೇಕೆಂಬ ಭಾರತದ ಮನವಿಯನ್ನು ತಿರಸ್ಕರಿಸಿದ ಐಸಿಜೆ, ಜಾಧವ್​ಗೆ ರಾಜತಾಂತ್ರಿಕ ಸಂಪರ್ಕದ ಅವಕಾಶ ಕಲ್ಪಿಸಬೇಕು ಮತ್ತು ಮರಣದಂಡನೆ ಶಿಕ್ಷೆ ತೀರ್ಪು ಮರುಪರಿಶೀಲಿಸಬೇಕೆಂದು 2019ರಲ್ಲಿ ಪಾಕಿಸ್ತಾನಕ್ಕೆ ಸೂಚಿಸಿತ್ತು.

ಇದಾದ ನಂತರ ಮತ್ತೆ ಪರಿಶೀಲನೆ ನಡೆಸಿದ ಪಾಕ್‌ ಮಿಲಿಟರಿ ಕೋರ್ಟ್‌ ಮರಣದಂಡನೆ ಶಿಕ್ಷೆಯನ್ನೇ ಎತ್ತಿಹಿಡಿದಿದೆ. ಮರಣದಂಡನೆ ಶಿಕ್ಷೆ ತೀರ್ಪು ಮರುಪರಿಶೀಲನೆಗೆ ಅರ್ಜಿ ಸಲ್ಲಿಸಲು ಕುಲಭೂಷಣ್ ಜಾಧವ್​ಗೆ ನೀಡಲಾಗಿದ್ದ 60 ದಿನಗಳ ಕಾಲಾವಕಾಶ ನೀಡಲಾಗಿದ್ದು, ಇನ್ನು 3 ದಿನಗಳಲ್ಲಿ ಅವರಿಗೆ ನೀಡಲಾಗಿದ ಸಮಯ ಅಂತ್ಯಗೊಳ್ಳಲಿದೆ. ಜುಲೈ 20ರೊಳಗೆ ಅವರು ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕಾಗುತ್ತದೆ.

ಕುಲಭೂಷಣ್ ಜಾಧವ್ ಅವರು ತಮಗೆ ವಿಧಿಸಲಾಗಿರುವ ಮರಣದಂಡನೆ ಶಿಕ್ಷೆಯ ತೀರ್ಪಿಗೆ ಮರುಪರಿಶೀಲನೆ ಅರ್ಜಿ ಸಲ್ಲಿಸದಿರಲು ನಿರ್ಧರಿಸಿದ್ದಾರೆಂದು ಪಾಕಿಸ್ತಾನ ಹೇಳಿದೆ. ಅದಾಗಿ ಕೆಲ ದಿನಗಳಲ್ಲಿ ಜಾಧವ್​ಗೆ ರಾಜತಾಂತ್ರಿಕ ಪ್ರವೇಶ ಕಲ್ಪಿಸಿದೆ. ಜುಲೈ 20ಕ್ಕೆ ಜಾಧವ್ ಅವರ ಮೇಲ್ಮನವಿ ಅವಕಾಶ ಮುಕ್ತಾಯಗೊಳ್ಳುವ ಕಾರಣಕ್ಕೆ ಪಾಕಿಸ್ತಾನ ತ್ವರಿತಗತಿಯಲ್ಲಿ ಹೆಜ್ಜೆಗಳನ್ನಿಡುತ್ತಿದೆ. ಭಾರತ ಈಗ ಮತ್ತೊಮ್ಮೆ ಐಸಿಜೆ ಮೊರೆ ಹೋಗುವ ಸಾಧ್ಯತೆ ಇದೆ. ಕುಲಭೂಷಣ್ ಜಾಧವ್ ಜೊತೆ ಮುಕ್ತವಾಗಿ ಸಂವಾದ ಮಾಡಲು ಸಾಧ್ಯವಾಗುವಂತೆ ರಾಜತಾಂತ್ರಿಕ ಸಂಪರ್ಕದ ಅವಕಾಶ ಕೊಡಬೇಕೆಂದು ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ.


ಇದನ್ನೂ ಓದಿ: ಭಾರತ ಸೇನೆಯ ಮಾಜಿ ಅಧಿಕಾರಿಗೆ ಮರಣದಂಡನೆ: ಪರಿಶೀಲನಾ ಅರ್ಜಿ ಸಲ್ಲಿಕೆಗೆ ಜಾಧವ್ ನಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights