ಪ್ರಧಾನಿ ಮೋದಿ ಮನ್‌ ಕಿ ಬಾತ್‌: ರೈತರ ಕರೆಯಂತೆ ತಟ್ಟೆ ಬಡಿದು ವಿರೋಧ ವ್ಯಕ್ತಪಡಿಸಿದ ಜನರು!

ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ದ ಹೋರಾಟ ನಡೆಸುತ್ತಿರುವ ರೈತರು ಭಾನುವಾರ ಪ್ರಧಾನಿ ಮೋದಿಯವರ ಮನ್‌ ಕಿ ಬಾತ್‌ ಭಾಷಣದ ಸಮಯದಲ್ಲಿ ತಟ್ಟೆ ಭಾರಸಲು ಕರೆಕೊಟ್ಟಿದ್ದರು. ರೈತರ ಕರೆಗೆ ಒಗೊಟ್ಟು ರಾಜ್ಯಾದ್ಯಂತ ತಟ್ಟೆ ಬಡಿದು ಪ್ರತಿಭಟನೆ ನಡೆಸಲಾಗಿದೆ.  ಮೋದಿಯವರು ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ತಟ್ಟೆ ಬಡಿಯುವಂತೆ ಕರೆ ನೀಡಿದ್ದನ್ನು ಅನುಸರಿಸಿದ ರೈತರು ಇಂದು ಮೋದಿಯವರ ಭಾಷಣದ ವೇಳೆಯೇ ತಟ್ಟೆ ಬಡಿಯುವ ಮೂಲಕ ತಿರುಗೇಟು ನೀಡಿದ್ದಾರೆ.

ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ, ಜನ ವಿರೋಧಿ ನೀತಿಗಳನ್ನು ಖಂಡಿಸಿ ರೈತ, ದಲಿತ, ವಿದ್ಯಾರ್ಥಿ-ಯುವಜನ, ಮತ್ತು ಜನಪರ ಸಂಘಟನೆಗಳ ನೇತೃತ್ವದಲ್ಲಿ ತುಮಕೂರಿನಲ್ಲಿ ತಟ್ಟೆ ಬಡಿಯುವ ಚಳವಳಿ ನಡೆಸಲಾಯಿತು. ಟೌನ್ ಹಾಲ್ ವೃತ್ತದಲ್ಲಿ ಸೇರಿದ ನೂರಾರು ಕಾರ್ಯಕರ್ತರು ಬಿ.ಹೆಚ್. ರಸ್ತೆಯ ರಿಲೆಯನ್ಸ್ ಟ್ರೆಂಡ್ಸ್ ವರೆಗೆ ಮೆರವಣಿಗೆ ನಡೆಸಿ ತಟ್ಟೆ ಬಡಿಯುವ ಚಳುವಳಿ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ರಾಜ್ಯ ರೈತ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ “ನರೇಂದ್ರ ಮೋದಿ ಪ್ರಧಾನಿ ಹುದ್ದೆಯ ಘನತೆ, ಗೌರವಕ್ಕೆ ಚ್ಯುತಿ ತರುವಂತಹ ಕೆಲಸ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳ ವಿರುದ್ಧ ನಡೆಯುತ್ತಿದ್ದು, ದೇಶದ ಕಾನೂನುಗಳನ್ನು ಧಿಕ್ಕರಿಸುತ್ತಿರುವ ಪ್ರಧಾನಿಗೆ ನಾಚಿಕೆ ಆಗಬೇಕು” ಎಂದು ವಾಗ್ದಾಳಿ ನಡೆಸಿದರು.

ಇಡೀ ದೇಶದ ಆರ್ಥಿಕತೆ ಕೆಲವೇ ಕುಟುಂಬಗಳ ಕೈಯಲ್ಲಿದೆ. ಹೀಗಾಗಿ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಬದಲು ಅಲ್ಪಸ್ವಲ್ಪ ಲಾಭ ಬರುತ್ತಿರುವ ಕೃಷಿ ಕ್ಷೇತ್ರದಲ್ಲಿ ಬಂಡವಾಳ ತೊಡಗಿಸಲು ಕಾರ್ಪೋರೇಟ್ ಕುಳಗಳಿಗೆ ಅವಕಾಶ ನೀಡಲಾಗುತ್ತಿದೆ. ಇದೇ ಕಾರಣಕ್ಕೆ ಕರಾಳ ಕೃಷಿ ಕಾಯ್ದೆ ಗಳನ್ನು ಜಾರಿಗೊಳಿಸಲಾಗಿದೆ. ಇದರಿಂದ ಸಣ್ಣ ಮತ್ತು ಮಧ್ಯಮ ರೈತರ ಕೈಯಲ್ಲಿದ್ದ ಭೂಮಿ ಇಲ್ಲವಾಗಲಿದೆ. ಇದೇ ಪರಿಸ್ಥಿತಿ ಮುಂದುವರಿದರೆ ರೈತರು ಬೀದಿಗೆ ಬೀಳುವ ದಿನಗಳು ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ: 2021ರ ಚುನಾವಣೆಗಳಲ್ಲಿ BJP ಹೀನಾಯವಾಗಿ ಸೋಲುತ್ತದೆ: ಕಾರಣವೇನು ಗೊತ್ತೇ?

ದೇಶದ ಬಡತನ ಹೆಚ್ಚುತ್ತಿದೆ. ನಿರುದ್ಯೋಗ ಸಮಸ್ಯೆ ಏರುಗತಿಯಲ್ಲಿ ಸಾಗಿದೆ. ಉದ್ಯೋಗ ಸಿಗುತ್ತಿಲ್ಲ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ನಲ್ಲಿ ಹೇಳುವ ಬದಲು ಖಾಲಿ ಮಾತುಗಳನ್ನು ಆಡುತ್ತಿದ್ದಾರೆ. ಅಂಬಾನಿ ಅದಾನಿ ಆದಾಯ ಹೆಚ್ಚಾದಂತೆ ರೈತರ ಆದಾಯ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಬಹುಸಂಖ್ಯಾತರ ಓಟು ಪಡೆದು ಗೆದ್ದು ಬಂದ ಪ್ರಧಾನಿ ನರೇಂದ್ರ ಮೋದಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸುವುದು ಬಿಟ್ಟು, ರೈತವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಸ್ವಾಮಿನಾಥನ್ ವರದಿ ಜಾರಿ ಮತ್ತು 2 ಕೋಟಿ ಉದ್ಯೋಗದ ಭರವಸೆ ನೀಡಿಯೂ ಕೂಡ ಅದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಟೀಕಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿ “ಪ್ರಧಾನಿ ನರೇಂದ್ರ ಮೋದಿ ರೈತರು, ದಲಿತರು, ಕಾರ್ಮಿಕರು, ಮಹಿಳೆಯರ ಸಮಸ್ಯೆಗಳ ಬಗ್ಗೆ ಕಿವಿಗೊಡುತ್ತಿಲ್ಲ. ಹಿಂದಿನ ಪ್ರಧಾನಿಗಳು ರೈತರು ಸೇರಿದಂತೆ ಯಾರೇ ಪ್ರತಿಭಟನೆ ನಡೆಸಿದರೂ ಕೂಡಲೇ ಆ ಸಂಘಟನೆಗಳ ನಾಯಕರನ್ನು ಕರೆಸಿ ಮಾತುಕತೆ ನಡೆಸುವ ಪದ್ದತಿ ಇತ್ತು. ಈ ಪ್ರಧಾನಿ ಮೋದಿ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆ ಬಗ್ಗೆ ಗಮನ ಕೊಡುತ್ತಿಲ್ಲ. ಕೃಷಿ ಕ್ಷೇತ್ರವನ್ನು ಉಳಿಸಬೇಕಾದ ಪ್ರಧಾನಿ ಕಾರ್ಪೋರೇಟ್ ಕಂಪನಿಗಳಿಗೆ ನೀಡುವುದಕ್ಕೆ ಮುಂದಾಗಿದ್ದಾರೆ. ದೇಶದಲ್ಲಿ ಏಕವ್ಯಕ್ತಿ ಆಡಳಿತ ನಡೆಯುತ್ತಿದೆ. ಬಿಜೆಪಿ ಸಂಸದರು, ಸಚಿವರು ರೈತರು ಮತ್ತು ಚಳವಳಿ ಕುರಿತು ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಸರಿಯಲ್ಲ ಎಂದರು.

ತಟ್ಟೆ ಬಡಿಯುವ ಮೆರವಣಿಗೆಯಲ್ಲಿ ರೈತ ಮುಖಂಡ ಕೆ.ಎಸ್.ಧನಂಜಯರಾಧ್ಯ, ರೈತ ಕೃಷಿ ಕಾರ್ಮಿಕ ಸಂಘಟನೆಯ ಎಸ್.ಎನ್.ಸ್ವಾಮಿ, ಅಜ್ಜಪ್ಪ, ಅಖಿಲ ಭಾರತ ಕಿಸಾನ್ ಸಭಾದ ಕಂಬೇಗೌಡ, ಡಾ. ಬಸವರಾಜು, ಡಾ. ಆರುಂಧತಿ, ಆರ್.ಕೆ.ಎಸ್.ನ ನವೀನ್, ರಮೇಶ್, ಲೋಕೇಶ್, ಮಹಿಳಾ ಸಂಘಟನೆಯ ಎಂ.ಡಿ.ಕಲ್ಯಾಣಿ, ಎಐಟಿಯುಟಿಯುಸಿಯ ಮಂಜುಳ, ಎಐಡಿಎಸ್ಒನ ಆಶ್ವಿನಿ, ರೈತ ಮುಖಂಡ ರವೀಶ್ ಅಜ್ಜಪ್ಪ ಇದ್ದರು.

ಬೆಂಗಳೂರಿನಲ್ಲಿ ಕೃಷಿ ಕಾಯ್ದೆಗಳ ವಿರುದ್ಧದ ನಿರಂತರ ಹೋರಾಟ ಮುಂದುವರೆದಿದೆ. ಇಂದು ಮೌರ್ಯ ಸರ್ಕಲ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ನೂರಾರು ಸಿಖ್ ಯುವಕರು ಮೆರವಣಿಗೆಯಲ್ಲಿ ಬಂದು ಭಾಗವಹಿಸಿದರು. ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿಯವರು ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ಇದನ್ನೂ ಓದಿ: ಪತ್ರಕರ್ತ ಅಶ್ವತ್ಥ್ ಆತ್ಮಹತ್ಯೆಗೆ ಯತ್ನ? ವೃತ್ತಿ ತೊರೆಯಲು ಸಚಿವ ಸುಧಾಕರ್ ಕಾರಣ ಎಂದು ಆರೋಪ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights