ಕೊರೊನಾಗೆ ಭಾರತದ ಕೊವಾಕ್ಸಿನ್ ಲಸಿಕೆ; ಮಾನವ ಪ್ರಯೋಗಕ್ಕೆ ಅಸ್ತು ಎಂದ ಸರ್ಕಾರ!

ವ್ಯಾಪವಾಗಿ ಹರಡುತ್ತಿರುವ ಕೊರೊನಾ ವೈರಸ್‌ಗೆ ಲಸಿಕೆ ಸಂಶೋಧಿಸಲು ವೈದ್ಯಕೀಯ ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ. ಈ ನಡುವೆ ಕೊರೊನಾ ಸೋಂಕಿನ ತಡೆಗೆ ದೇಶದ ಮೊದಲ ಲಸಿಕೆ ‘ಕೊವಾಕ್ಸಿನ್ ಅನ್ನು  ಹೈದರಾಬಾದ್ ಮೂಲದ ಲಸಿಕೆ ತಯಾರಿಕ ಕಂಪನಿ ಭಾರತ್ ಬಯೋಟೆಕ್ ಕಂಪನಿ ಸಂಶೋಧಿಸಿದೆ. ಈ ಲಸಿಕೆಯ  ಮೊದಲ ಹಾಗೂ ಎರಡನೇ ಹಂತದ ಮಾನವ ಪ್ರಯೋಗ ಕಾರ್ಯಕ್ಕೆ  ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ( ಡಿಸಿಜಿಐ) ಅನುಮೋದನೆ ನೀಡಿದೆ.

ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಲಸಿಕೆಗೆ ಕೊವಾಕ್ಸಿನ್ ಎಂದು ಹೆಸರಿಸಲಾಗಿದೆ ಮತ್ತು ಇದು ನಿಷ್ಕ್ರಿಯ ಲಸಿಕೆ. ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ  ಸಾರ್ಸ್-ಕೋವ್-2 ನ ಒತ್ತಡವನ್ನು ಪ್ರತ್ಯೇಕಿಸಿ ವರ್ಗಾವಣೆ ಮಾಡಿದ ನಂತರ ಇದನ್ನು ಅಭಿವೃದ್ಧಿಪಡಿಸಿ ಕಂಪನಿಗೆ ವರ್ಗಾಯಿಸಿದೆ.

ಪೂರ್ವಭಾವಿ ಅಧ್ಯಯನ (ಪ್ರೀ ಕ್ಲಿನಿಕಲ್ ಸ್ಟಡೀಸ್) ಸುರಕ್ಷತೆ ಮತ್ತು ರೋಗ ನಿರೋಧಕ ಶಕ್ತಿ ಪ್ರತಿಕ್ರಿಯೆಯ ಫಲಿತಾಂಶಗಳನ್ನು ಕಂಪನಿ ಸಲ್ಲಿಸಿದ ನಂತರ ಮಾನವ ಕ್ಲಿನಿಕಲ್ ಪ್ರಯೋಗಕ್ಕೆ ಡಿಸಿಜಿಐನಿಂದ ಅನುಮತಿ ಸಿಕ್ಕಿದೆ. ಜುಲೈ ತಿಂಗಳಲ್ಲಿ ದೇಶಾದ್ಯಂತ ಈ ಲಸಿಕೆಯ ಮಾನವ ಪ್ರಯೋಗ ಆರಂಭವಾಗಲಿದೆ.

ಕೊರೊನಾ ವೈರಸ್‌ ವಿರುದ್ಧದ ಮೊದಲ ಸ್ವದೇಶಿ ಲಸಿಕೆ ಕೊವಾಕ್ಸಿನ್ ನನ್ನು ಹೆಮ್ಮೆಯಿಂದ ಘೋಷಿಸುತ್ತಿದ್ದೇವೆ. ಐಸಿಎಂಆರ್ ಮತ್ತು ಎನ್ ಐವಿ ಸಹಭಾಗಿತ್ವದಲ್ಲಿ ಈ ಔಷಧವನ್ನು ಕಂಡುಹಿಡಿಯಲಾಗಿದೆ ಎಂದು ಭಾರತ್ ಬಯೋಟೆಕ್ ಕಂಪನಿ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣಾ ಹೇಳಿದ್ದಾರೆ.

ಪ್ರಗತಿಯಲ್ಲಿರುವ ಸಂಶೋಧನೆ ಮತ್ತು ಪರಿಣಿತರ ಮುನ್ಸೂಚನೆಯಂತೆ ಹೆಚ್ 1ಎನ್1 ಸಾಂಕ್ರಾಮಿಕ ರೋಗಕ್ಕೂ ಯಶಸ್ವಿಯಾಗಿ ಲಸಿಕೆಯೊಂದನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗುವುದಾಗಿ ಭಾರತ್ ಬಯೋಟೆಕ್ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಸುಚಿತ್ರಾ ತಿಳಿಸಿದ್ದಾರೆ.

ಈ ಕಂಪನಿ ಇಲ್ಲಿಯವರೆಗೂ ಪೋಲಿಯೋ, ರೇಬಿಸ್, ರೊಟಾ ವೈರಸ್, ಚಿಕಾನ್ ಗುನ್ಯಾ,ಜಪಾನೀಸ್ ಎನ್ಸೆಫಾಲಿಟಿಸ್ ಮತ್ತು ಜಿಂಕಾ ವಿರುದ್ಧದ ಕಾಯಿಲೆಗಳಿಗೆ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.


ಇದನ್ನೂ ಓದಿ: ಕೊರೊನಾ ಲಸಿಕೆ ಸಂಶೋಧಿಸಿದ ಅಸ್ಟ್ರಾಜೆನೆಕಾ; ಪ್ರಯೋಗ ಯಶಸ್ವಿಯಾದರೆ ಕೊರೊನಾಗೆ ಮದ್ದು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights