ಸಾಕಾಯ್ತು ಬೆಂಗಳೂರು ಸಹವಾಸ; ರಾಜಧಾನಿ ಗುಡ್ ಬೈ ಹೇಳಿ ತಮ್ಮೂರ ಹಾದಿ ಹಿಡಿದ ಜನರು!

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರದಿಂದ  ಒಂದು ವಾರಗಳ ಅವಧಿಗೆ ಮತ್ತೆ ಲಾಕ್‌ಡೌನ್‌ ಮಾಡುವುದಾಗಿ ಸರ್ಕಾರ ಘೋಷಿಸಿದ್ದು, ಹಿಂದಿನ ಲಾಕ್‌ಡೌನ್‌ ನಂತರ ಮರಳಿ ಬೆಂಗಳುರಿಗೆ ಬಂದಿದ್ದ ಜನ ಮತ್ತೆ  ಗುಡ್‌ ಬೈ ಹೇಳಿ ಊರ ಹಾದಿ ಹಿಡಿಯುವಂತಾಗಿದೆ.

ಜುಲೈ 05 ರಿಂದ ರಾಜ್ಯಾದ್ಯಂತ ಸಂಪೂರ್ಣ ಲಾಕ್‌ಡೌನ್‌ ಘೋಷಿಸಲಾಗಿತ್ತು. ನಂತರದಲ್ಲಿ ಶನಿವಾರ ಮತ್ತು ಭಾನುವಾರ ಲಾಕ್‌ಡೌನ್‌ ಮಾಡಲು ಚಿಂತನೆ ನಡೆಸಲಾಗಿತ್ತು. ಆದರೆ, ಇದೀಗ, ಒಂದು ವಾರಗಳ ಕಾಲ ಬೆಂಗಳೂರಿನಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲು ಸರ್ಕಾರ ನಿರ್ಧರಿಸಿದೆ.

ಇದರಿಂದಾಗಿ, ಕಳೆದ 20 ದಿನಗಳಿಂದ ಬೆಂಗಳುರಿಗೆ ಮರಳುತ್ತಿದ್ದ ಜನರು ಮತ್ತಷ್ಟು ಕಂಗಾಲಾಗಿದ್ದು, ಬೆಂಗಳೂರಿನ ಸಹವಾಸವೇ ಬೇಡವೆಂಬ ನಿರ್ಧಾರಕ್ಕೆ ಬಂದಿದ್ದಾರೆ. ಶನಿವಾರ ರಾತ್ರಿಯಿಂದ ಸೋಮವಾರ ಬೆಳಗಿನ ವರೆಗೂ ಲಾಕ್‌ಡೌನ್‌ ಮತ್ತು ಕರ್ಫ್ಯೂ ಇರುವುದರಿಂದಾಗಿ ಶನಿವಾರ ಬೆಳಗ್ಗೆಯಿಂದಲೇ ಜನರು ತಮ್ಮೂರುಗಳ ಹಾದಿ ಹಿಡಿದು ಹೊರಟಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ ಉದ್ಯೋಗವೂ ಇಲ್ಲದೆ, ಕುಟುಂಬ ನಿರ್ವಹಣಗೆ ಹಣವೂ ಇಲ್ಲದೆ ಪರದಾಡಿದ್ದ ಜನರು ನಡೆದೇ ತಮ್ಮೂರಿಗೆ ಹೊರಟಿದ್ದರು. ಲಾಕ್‌ಡೌನ್‌ ಸಡಿಲಗೊಂಡ ನಂತರ ಮತ್ತದೇ ಉದ್ಯೋಗವರಿಸಿ, ಕುಟುಂಬ ನಿರ್ವಹಣೆಗಾಗಿ ದುಡಿಯಲು ಬೆಂಗಳೂರಿಗೆ ಮರಳಿದ್ದರು. ಆದರೆ, ಈಗಷ್ಟೆ ಒಂದು ಸೆಟ್ಲ್‌ ಆಗೋಣ ಎನ್ನುವಷ್ಟರಲ್ಲಿ ಮತ್ತೆ ಲಾಕ್‌ಡೌನ್‌ ಘೋಷಿಸಿದ್ದು, ಇನ್ನು ಬೆಂಗಳೂರಿನ ಸಹವಾಸವೇ ಬೇಡ ಎಂಬಂತಾಗಿದೆ.

ಬೆಂಗಳೂರಿನ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದ ಜನರು, ಲಾಕ್‌ಡೌನ್‌ ಆದರೆ, ಬಾಡಿಗೆ ಕಟ್ಟುವುದು, ಕುಟುಂಬದ ಖರ್ಚು ಎಲ್ಲಿಂದ ಭರಿಸುವುದು ಎಂದು ಚಿಂತಿತರಾಗಿದ್ದು, ಶುಕ್ರವಾರ ಸಂಜೆ ಸರ್ಕಾರ ಲಾಕ್‌ಡೌನ್ ಮಾಡುವುದಾಗಿ ಘೋಷಿಸುತ್ತಿದ್ದಂತೆಯೇ ಶುಕ್ರವಾರ ರಾತ್ರಿಯಿಂದಲೇ ತಂತಮ್ಮ ಬಾಡಿಗೆ ಮನೆಗಳನ್ನು ಖಾಲಿ ಮಾಡಿಕೊಂಡು, ತಮ್ಮೆಲ್ಲಾ ಎಲ್ಲಾ ಸಾಮಗ್ರಿಗಳನ್ನು ಗಂಟು ಮೂಟೆ ಕಟ್ಟಿಕೊಂಡು ವಾಹನಗಳ ಸಮೇತ ಊರುಗಳಿಗೆಹೊರಟಿದ್ದಾರೆ.

ಲಾಕ್‌ಡೌನ್‌ ಆರಂಭದಿಂದ ಹಿಡಿದು ಮುಕ್ತಾಯವಾದ ನಂತರವೂ ಕೊರೊನಾ ನಿಯಂತ್ರಣಕ್ಕೆ ಬಾರದ ಕಾರಣ ಕೆಲಸಗಳು ಸಿಗುತಿಲ್ಲ, ವ್ಯಾಪಾರವಾಗುತಿಲ್ಲ, ಬಾಡಿಗೆ ಮನೆಗೆ ನೀಡಿದ್ದ ಅಡ್ವಾನ್ಸ್ ಹಣ ಬಾಡಿಗೆ ಹಣಕ್ಕೆ ವಜಾ ಮಾಡಲಾಗಿದೆ. ಈ ತಿಂಗಳ ಬಾಡಿಗೆ ನೀಡಿ ಇಲ್ಲವಾದ್ರೆ ಖಾಲಿ ಮಾಡಿ ಎಂದರು. ಹೊಟ್ಟೆಗೆ ಅನ್ನ ಹುಟ್ಟಿಸಿಕೊಳ್ಳೋದೇ ಕಷ್ಟವಾಗಿರುವ ಸನ್ನಿವೇಶದಲ್ಲಿ ಬಾಡಿಗೆ ಕಟ್ಟಲು ಹೇಗೆ ಸಾಧ್ಯ? ಹೀಗಾಗಿ ಊರಿಗೆ ಹೋಗುತಿದ್ದೇವೆ ಎಂದು ಜನರು ಅಳಲು ತೋಡಿಕೊಂಡರು.

ಬೆಂಗಳೂರಿನಲ್ಲಿ ವ್ಯಾಪಾರ ಅಥವಾ ಕೆಲಸ ಮಾಡೋಣ ಎಂದು ಬಂದೆವು. ಆದ್ರೆ, ಕೊರೊನಾದಿಂದಾಗಿ ಸಮಸ್ಯೆಯಾಗಿದೆ. ಸತ್ತ ಮೇಲೆ ಮನೆ ಸೇರುವ ಬದಲು ಮೊದಲೇ ಮನೆಗೆ ಹೋದರೆ ಸುರಕ್ಷತೆ ಇರುತ್ತದೆ. ಅಲ್ಲಿಯೇ ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತೇವೆ ಎನ್ನುತ್ತಾರೆ, ಕೆಲವರು.

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದ, ಸೋಂಕಿತರ ಸಂಪರ್ಕದಲ್ಲಿದ್ದವರ ವಿವರಗಳು ಸರಿಯಾಗಿ ಸಿಗುತಿಲ್ಲ. ಇಂತಹ ಸಂದರ್ಭದಲ್ಲಿ ಜನರು ಯಾವುದೇ ಪರೀಕ್ಷೆ ಇಲ್ಲದೆ ಹಳ್ಳಿಗಳಿಗೆ ಹೋಗುತ್ತಿರುವುದರಿಂದ ಸ್ಥಳೀಯ ಆಡಳಿತ ಹಾಗೂ ಗ್ರಾಮ ಪಂಚಾಯಿತಿಗಳು ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ.


ಇದನ್ನೂ ಓದಿ:  ಬೆಂಗಳೂರು ಮತ್ತೇ ಲಾಕ್‌ಡೌನ್: ಮಾಹಿತಿ ನೀಡಿದ ಮುಖ್ಯಮಂತ್ರಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights