ಗ್ರಾಹಕರ ರಕ್ಷಣಾ ಕಾಯ್ದೆ-2019 ಜಾರಿಗೊಳಿಸಿದ ಕೇಂದ್ರ ಸರ್ಕಾರ: ಗ್ರಾಹಕರಿಗೇನು ಅನುಕೂಲ! ಡಿಟೈಲ್ಸ್‌

ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ವ್ಯವಹಾರಗಳು ಬದಲಾಗುತ್ತಿವೆ. ಟೆಲಿ ಮಾರ್ಕೆಟಿಂಗ್‌, ಇ-ಕಾಮರ್ಸ್‌ನಂತಹ ಆನ್‌ಲೈನ್‌ ವ್ಯವಹಾರಗಳು ಹೆಚ್ಚಾಗುತ್ತಿದ್ದು, ಇದಕ್ಕೆ ತಕ್ಕಂತೆ ಗಾಹಕರ ಹಕ್ಕುಗಳು ಕೂಡ ಅಪ್ಡೇಟ್‌ ಆಗುತ್ತಿವೆ. ಗ್ರಾಹಕರ ಹಿತದೃಷ್ಟಿಯಿಂದಾಗಿ ಭಾರತದ ಗ್ರಾಹಕರ ರಕ್ಷಣಾ ಕಾಯ್ದೆ 1986 ಕ್ಕೆ ಕೇಂದ್ರ ಸರ್ಕಾರವು ಹಲವಾರು ಬದಲಾವಣೆಗಳನ್ನು ತಂದಿದ್ದು, ಹೊಸದಾಗಿ ಗ್ರಾಹಕ ರಕ್ಷಣಾ ಕಾಯ್ದೆ 2019 ನ್ನು ತಂದಿದೆ.

ಗ್ರಾಹಕ ರಕ್ಷಣಾ ಪ್ರಾಧಿಕಾರಿವು ಹಲವಾರು ಅಂಶಗಳನ್ನು ಬದಲಾವಣೆಗೊಳಿಸಿರುವ ಈ ಕಾಯ್ದೆಯು, ರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕರ ಹಕ್ಕುಗಳನ್ನು ರಕ್ಷಿಸಲಿದೆ, ಇ-ವಾಣಿಜ್ಯ ನೇರ ಮಾರಾಟ ಹಾಗೂ ಟೆಲಿ ಮಾರ್ಕೆಟಿಂಗ್ ಇತ್ಯಾದಿ ಪ್ರಸಕ್ತ ವ್ಯವಹಾರಗಳನ್ನು ಕೇಂದ್ರೀಕರಿಸಿ ಬದಲಾವಣೆ ತರಲಾಗಿದೆ ಎಂದು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ವರ್ಷದ ಹಿಂದೆಯೇ ತಿಳಿಸಿದ್ದರು.

ಗ್ರಾಹಕರ ರಕ್ಷಣಾ ಕಾಯ್ದೆ ತಿದ್ದುಪಡಿಗೆ ರಾಷ್ಟ್ರಪತಿಗಳು 2019ರ ಆಗಸ್ಟ್‌ 09 ರಂದೇ ಸಹಿ ಹಾಕಿದ್ದರು. ಆದರೆ, ಕಾಯ್ದೆಯನ್ನು ಇನ್ನೂ ಜಾರಿಗೊಳಿಸಲಾಗಿರಲಿಲ್ಲ. ಹಾಗಾಗಿ ನೂತನ ಗ್ರಾಹಕ ರಕ್ಷಣಾ ಕಾಯ್ದೆ-2019ನ್ನು ಇಂದಿನಿಂದ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಕೇಂದ್ರ ಸರ್ಕಾರ ಹೇಳುತ್ತಿರುವಂತೆ ಹೊಸ ಗ್ರಾಹಕರ ರಕ್ಷಣಾ ಕಾಯ್ದೆ – 2019 ಯ ಅನುಕೂಲಗಳು ಹೀಗಿವೆ:

1. ಜಿಲ್ಲಾ ಗ್ರಾಹಕರ ವೇದಿಕೆಯನ್ನು ಜಿಲ್ಲಾ ಆಯೋಗ ಎಂದು ಮರುನಾಮಕರಣ ಮಾಡಲಾಗಿದೆ.

2. ಜಿಲ್ಲಾ ಆಯೋಗದ ತೀರ್ಪಿನ ವಿರುದ್ಧ ರಾಜ್ಯ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಬೇಕಾದಲ್ಲಿ ಜಿಲ್ಲಾ ಆಯೋಗ ಆದೇಶಿಸಿದ ಮೊತ್ತದ ಶೇ.50 ರಷ್ಟು ಮೊತ್ತವನ್ನು ಠೇವಣಿ ಇಡಬೇಕು. ಈ ಹಿಂದೆ ಈ ದೇವಣಿಯ ಗರಿಷ್ಠ ಮೊತ್ತ 25,000 ರೂಪಾಯಿ ಆಗಿತ್ತು.

3. ರಾಜ್ಯ ಆಯೋಗಕ್ಕೆ ಮೇಲ್ಮನವಿ ಸಲ್ಲಿಕೆ ಕಾಲಮಿತಿ ಅವಧಿ 30 ದಿನಗಳಿಂದ 45 ದಿನಗಳಿಗೆ ಏರಿಕೆ ಮಾಡಲಾಗಿದೆ.

4) ರಾಜ್ಯ ಆಯೋಗವು ಕನಿಷ್ಠ ಒಬ್ಬ ಅಧ್ಯಕ್ಷ ಮತ್ತು ನಾಲ್ಕು ಸದಸ್ಯರನ್ನು ಹೊಂದಿರಬೇಕು.5) ವಿತ್ತೀಯ ಅಧಿಕಾರ ವ್ಯಾಪ್ತಿ (pocuniory jurisdiction) ಜಿಲ್ಲಾ ಆಯೋಗಕ್ಕೆ ಒಂದು ಕೋಟೆಯವರೆಗೆ ಇರುತ್ತದೆ. ರಾಜ್ಯ ಆಯೋಗಕ್ಕೆ ಒಂದೇ ಕೋಟಿಯಿಂದ ಹತ್ತು ಕೋಟಿ ವರೆಗೆ ಇರುತ್ತದೆ. ಹತ್ತು ಕೋಟಿಗೂ ಅಧಿಕ ಮೊತ್ತದ ವಿವಾದಗಳು ರಾಷ್ಟ್ರೀಯ ಆಯೋಗದಿಂದ ಇತ್ಯರ್ಥ.

6) ದೂರುದಾರರಿಗೆ (Cornplainant) ತಾವು ವಾಸಿಸುವ ಸ್ಥಳದಲ್ಲಿ ಹಾಗೂ ಆಯೋಗದ ಸರಹದ್ದಿನ ವ್ಯಾಪ್ತಿಯಲ್ಲಿ ದೂರನ್ನು ಸಲ್ಲಿಸುವ ಅವಕಾಶವನ್ನು ಕಲ್ಪಿಸಲಾಗಿದೆ.

7 ನೂತನ ಕಾಯ್ದೆಯ ಕಲಂ 49(2) ಮತ್ತು 59(2) ಮೂಲಕ ರಾಜ್ಯ ಹಾಗೂ ರಾಷ್ಟ್ರೀಯ ಆಯೋಗಕ್ಕೆ ಯಾವುದೇ ಕರಾರಿನ ಷರತ್ತುಗಳನ್ನು ಗ್ರಾಹಕ ವಿರೋಧಿ ಎಂದು ಕಂಡುಬಂದಲ್ಲಿ ಅವುಗಳನ್ನು ಅಸಿಂಧು ಎಂದು ಘೋಷಿಸುವ ಅಧಿಕಾರ ಪ್ರಾಪ್ತವಾಗಿರುತ್ತದೆ.

8) ನೂತನ ಕಾಯ್ದೆ ಕಲಂ 51(3) ಪ್ರಕಾರ ರಾಷ್ಟ್ರೀಯ ಆಯೋಗಕ್ಕೆ ಎರಡನೆಯ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ

9) ಪುನರಾವಲೋಕನ ಅಧಿಕಾರವನ್ನು (power to review) ರಾಜ್ಯ ಆಯೋಗವು ಕಲಂ 47(1)ರ ಅಡಿ ಹಾಗೂ ರಾಷ್ಟ್ರೀಯ ಆಯೋಗವು 58 (1) (b)ಅಡಿಯಲ್ಲಿ ಬಳಸಿಕೊಳ್ಳಬಹುದು.

10) ಜಿಲ್ಲಾ ಆಯೋಗ, ರಾಜ್ಯ ಆಯೋಗ ಮತ್ತು ರಾಷ್ಟ್ರೀಯ ಆಯೋಗಗಳಿಗೆ ಪುನರಾವಲೋಕನ ಅಧಿಕಾರವು ಕಲಂ 40:50 ಮತ್ತು 60ರ ಅಡಿ ಅನುಕ್ರಮವಾಗಿ ಪ್ರಾಪ್ತವಾಗಿದೆ.

11) ಕೇಂದ್ರ ಪ್ರಾಧಿಕಾರದ ಆದೇಶದ ವಿರುದ್ಧ ಮೇಲ್ಮನವಿ ಗಳನ್ನು ರಾಷ್ಟ್ರೀಯ ಆಯೋಗವು ಕಲಂ 58 ರಡಿ ವಿಚಾರಣೆ ನಡೆಸಬಹುದಾಗಿದೆ.

12) ದೂರು ದಾಖಲಿಸಲು ಎರಡು ವರ್ಷಗಳ ಕಾಲಮಿತಿ, ವಿಳಂಬ ಮನ್ನಣೆ ಕೋರಿ ಕಲಂ 69 ರ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ.

13) ಕಲಂ 70 ರ ಅಡಿಯಲ್ಲಿ ಜಿಲ್ಲಾ ಆಯೋಗದ ಮೇಲಿನ ಆಡಳಿತಾತ್ಮಕ ನಿಯಂತ್ರಣ ರಾಜ್ಯ ಆಯೋಗಕ್ಕೆ ಇರುತ್ತದೆ ಹಾಗೂ ರಾಜ್ಯ ಆಯೋಗದ ಮೇಲಿನ ಆಡಳಿತಾತ್ಮಕ ನಿಯಂತ್ರಣ ರಾಷ್ಟ್ರೀಯ ಆಯೋಗಕ್ಕೆ ಇರುತ್ತದೆ.

14) ನೂತನ ಕಾಯ್ದೆ ಕಲಂ 71 ರಲ್ಲಿ ಆಯೋಗದ ಆದೇಶದ ಜಾರಿಯ (Execution) ಕುರಿತು ಉಲ್ಲೇಖಿಸಲಾಗಿದ್ದು ಸಿವಿಲ್ ಪ್ರೊಸೀಜರ್ ಕೋಡ್ 1908 ರ ಆದೇಶ XXI ರ ಅವಕಾಶಗಳು ತನ್ನ ಆದೇಶವನ್ನು ಜಾರಿಗೊಳಿಸಲು ಆಯೋಗಕ್ಕೆ ಅಧಿಕಾರ ಪ್ರಾಪ್ತವಾಗಿದೆ

15) ನೂತನ ಕಾಯ್ದೆಯಡಿ ಕಲಂ 74 ಹೊಸತಾಗಿ ಸೇರಿಸಲ್ಪಟ್ಟಿದೆ ಮಧ್ಯಸ್ಥಿಕೆ ಮೂಲಕ ವಿವಾದಗಳನ್ನು ಇತ್ಯರ್ಥಪಡಿಸುವ ಶಾಸನಾತ್ಮಕ ಅಧಿಕಾರ ಆಯೋಗಕ್ಕೆ ದೊರಕಿದೆ.

16)ಕಳಪೆ ಉತ್ಪನ್ನ ಗಳಿಂದ ಗ್ರಾಹಕರಿಗೆ ಹಾನಿ ಉಂಟಾದಲ್ಲಿ ಉತ್ಪನ್ನ ತಯಾರಕರ ಅಥವಾ ಉತ್ಪನ್ನಗಳ ಸೇವಾ ಪೂರೈಕೆದಾರರ ವಿರುದ್ಧ ಉತ್ಪನ್ನ ಹೊಣೆಗಾರಿಕೆ ಕ್ರಮ (product liability action) ಕೈಗೊಳ್ಳುವ ದೂರುದಾರರಿಗೆ ಅವಕಾಶ ಕಲ್ಪಿಸಲಾಗಿದೆ.

17) ನೂತನ ಕಾಯ್ದೆ ಅಧ್ಯಾಯ 3ರಲ್ಲಿ ಗ್ರಾಹಕರ ಹಕ್ಕುಗಳ ಉಲ್ಲಂಘನೆ ಅಥವಾ ಅಪ್ರಾಮಾಣಿಕ ವ್ಯವಹಾರ ಕ್ರಮಗಳು (Ur trade practice) ಅಥವಾ ತಪ್ಪು ಸಂದೇಶ ನೀಡುವ ಜಾಹೀರಾತುಗಳು ಮುಂತಾದ ವಿಷಯಗಳ ಮೇಲೆ ಕೇಂದ್ರ ಪ್ರಾಧಿಕಾರವು ನಿಯಂತ್ರಣ ಹೊಂದಿರುತ್ತದೆ.

18) ಕೇಂದ್ರ ಪ್ರಾಧಿಕಾರವು ನಿರ್ದೇಶಿಸಿದ ತನಿಖೆ: ವಿಚಾರಣೆ ಕೈಗೊಳ್ಳಲು ಮಹಾನಿರ್ದೇಶಕರ ನೇತೃತ್ವದ ತನಿಖಾ ಸಂಸ್ಥೆಯು ಅಧಿಕಾರವನ್ನು ಹೊಂದಿರುತ್ತದೆ.

19) ನೂತನ ಗ್ರಾಹಕ ರಕ್ಷಣಾ ಕಾಯ್ದೆ-2019 ಕ್ಕೆ ರಾಷ್ಟ್ರಪತಿಯವರು ದಿನಾಂಕ 9.8.2019 ರಂದು ಅಂಕಿತ ಹಾಕಿದ್ದು ನೂತನ ಕಾಯ್ದೆಯ ಕಲಂ (3) ರ ಪ್ರಕಾರ ಹಳೆಯ ಗ್ರಾಹಕ ರಕ್ಷಣಾ ಕಾಯ್ದೆ 1986 ನಿರರ್ಥಕವಾಗಿದೆ. ನೂತನ ಗ್ರಾಹಕ ರಕ್ಷಣಾ ಕಾಯಿದೆ- 2019 ದಿನಾಂಕ 20.7.2020 ರಿಂದ ಜಾರಿಗೆ ಬರಲಿದೆ.

20) ಆಯೋಗದ ಸದಸ್ಯರ ನೇಮಕಾತಿ: ಸೇವಾ ಸ್ಥಿತಿಗತಿಗಳ ಕುರಿತು ನಿಯಮಗಳನ್ನು ಶೀಘ್ರದಲ್ಲಿ ರಚಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.


ಇದನ್ನೂ ಓದಿ:  ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಹಲ್ಲೆಗೊಳಗಾದವನ ಮೇಲೆಯೇ ಎಫ್‌ಐಆರ್‌ ದಾಖಲಿಸಿದ ಪೊಲೀಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights