ದೇವರ ಆಟ – ರೊಕ್ಕ ಇಲ್ಲಂದ್ರ ಇಲ್ಲೋಪ, ಏನ್ ಮಾಡ್ಕೋತಿರಿ?

ಸ್ತ್ರೀಶಕ್ತಿ ಗುಂಪಿನಂಗ ನಮ್ಮರೊಳ್ಗ ಒಂದು ಪುರುಷಶಕ್ತಿ ಸಂಘ ಇತ್ತು, ಮತ್ ಏತಿ ಕೂಡ. ಪುರುಷಶಕ್ತಿ ಅಂದ್ರ ಮತ್ತ ನೀವು ಡೇಲಿ ಪೇಪರ್ ಮೂಲ್ಯಾಗ ಬರೋ ಗುಳಿಗಿ ಅಂತ ಅನಕೋಬೇಡ್ರಿ.

ಅದರ‍್ಲಿ, ಇಲ್ಲಿ ಸೀರಿಯಸ್ ವಿಷ್ಯ ಒಂದೈತಿ. ರೊಕ್ಕದ್ರಿ ಮಾರಾಯ. ಮೊದ್ಲ ಕೊರೋನಾ ಟೈಮು ಬೇರೆ, ಹಚ್ಚಿ ಹಿಡ್ದ ಮಳಿ ಹೊಡ್ದ ಮ್ಯಾಲ ಬೆಳೆದಿದ್ದೂ ಕೊಳ್ತ ಹೋದ ಹೊತ್ತಿನಾಗ ರೊಕ್ಕ ಅಂದ್ರ ಬಂಗಾರ ಆಗೇತಿ.

ಹಾಂ, ಪುರುಷಶಕ್ತಿ ಸಂಘದವ್ರು 30 ಮಂದಿ ಅದಾರ. ಇವ್ರ ಮ್ಯಾಲ 31ನೆಯವಾ ಒಬ್ಬಾವ ಲೀಡರು ಅದಾನ. ಗುಡಿ-ಗಿಡಿಗೆ ಹೊಕ್ಕಾನ, ತಾಸಗಟ್ಟಲೇ ಪೂಜಾ ಮಾಡ್ತಾನ, ಊರಿಗೆ ಕೇಳಂಗ ಗಂಟಿ ಹೊಡಿತಾನ. ಚೊಲೊ ಮನುಷ್ಯ ಅಂತ್ಹೇಳಿ ಸಂಘಕ್ಕ ಇವನ್ನ ಅಧ್ಯಕ್ಷನ್ನ ಮಾಡಿದ್ರು.

ಆಟೀಟು ರೊಕ್ಕ ಇದ್ದವ್ರು ಸಂಘದಾಗ, ಅಂದ್ರ ಅಧ್ಯಕ್ಷನ ಕೈಯಾಗ ಕೊಡೋದು. ಇಂವಾ ಅವರಿವ್ರಿಗೆ ಅದನ್ನ ಸಾಲ ಕೊಟ್, ಬಡ್ಡಿ ತಗೊಂಡ್ ಜಾಸ್ತಿ ಮಾಡ್ತಾ ಇದ್ದ.

ಈ 30 ಮಂದಿ ಅವನ್ನ ಹಾಡಿ ಹೊಗಳಿ ಅಟ್ಟಕ್ಕೇರಿಸಿದ್ರು. ಆದ್ರ ಕೆಲವು ಮಂದಿ, ‘ಬಾಳಾ ಚೋರಂದ್ರ ಚೋರ್ ಅದನಾವ. ಸಣ್ಣಾವ ಇದ್ದಾಗ ಅವಂಗ ಚೋರೇಂದ್ರ ಅಂತಿದ್ರು ಅಂತಾ ಹೇಳ್ತಾನ ಬಂದಾರ.

ಅದು ಆತು, ಈಗ ಸಂಘದ ಮೆಂಬರಿಗೆ ಅಡಚಣಿ ಶುರುವಾತು. ಹೆಂಗೂ ಬಡ್ಡಿ ಸೇರಿಸಿ ಜಾಸ್ತಿ ರೊಕ್ಕ ಬರತೈತಿ ಅಂತ ಚೋರೇಂದ್ರನ ಕಡೆ ಹೋದ್ರು. ಅರ್ಧ ಮಂದಿ ಚೋರೇಂದ್ರನ ಶಿಷ್ಯಾರೂ ಇದ್ರು ಅದರೊಳ್ಗ. ಅವರೂ ಹೋದ್ರು ಅನ್ನಿ.

ಗಂಟಿ ಹೊಡಿತಾ ಪೂಜಾದಾಗ ಮಗ್ನ ಆಗಿದ್ದ. ಪೂಜಾ ಮುಗಿಸಿದೋನ ಬಂದವ್ರನ್ನ ಮಾತಾಡ್ಸಾದು ಬಿಟ್ಟು, ದರ‍್ಯಾಗ ಓಡಾಡೋ ಕೋಳಿ ರ‍್ದು ಜೋಳದ ಕಾಳು ಹಾಕಾಕ ಶುರು ಮಾಡ್ದ. ಮೊಮ್ಮಕ್ಕಳು ಫೋಟೊ ತಗ್ದು ಊರಿಗೆಲ್ಲ, ನಾಡಿಗೆಲ್ಲ ಕಳಿಸಿದ್ವು.

ಸಂಘದ ಮಂದ್ಯಾಗ ಅವ್ನ ಶಿಷ್ಯಾರನ್ನ ಬಿಟ್ಟು ಉಳಿದೋರು ಅಲ್ಲಿಗೆ ಹೋಗಿ, ಅಧ್ಯಕ್ಷರ, ಇವತ್ ಮೀಟಿಂಗು ಮಾಡಾಣ. ಎಲ್ಲಾರಿಗೂ ಅಡಚಣಿ ಐತಿ. ನೀವ್ ಓಡಾಡಿದ್ದು. ಲೆಕ್ಕ ಬರೆದಿದ್ದಕ್ಕ 500 ರೂ ಮುರಕೊಂಡು ನಮ್ ರೊಕ್ಕ ಕೊಡ್ರಿ ಅಂದ್ರು.

ಆಕಾಶದತ್ತ ಕೈ ತೋರಿಸಿದ ಚೋರೇಂದ್ರ, ಆ ದೇವ್ರು ಆಡಿಸಾಕ ಹತ್ಯಾನೋ ಮಾರಾಯ. ಒಂದ್ ಪೈಸಾ ರೊಕ್ಕಿಲ್ಲರೋಪ. ಅಂವಾ ಸೆರೆ ಅಂಗಡಿ ಮಲ್ಲೆಪ್ಪ 2 ಸಾವಿರ ತಗೊಂಡ್ ಊರು ಬಿಟ್ಟ. ಅಂವಾ ಬಂಗಾರ ಮರ‍್ತಿದ್ದನಲ್ಲ ನಿರಂಜನಪ್ಪ, ಅವ್ನೂ 3 ಸಾವಿರ ಎತ್ತಿಕೊಂಡ್ ಹೋಗ್ಯಾನ. ಎಲ್ಲಾರೂ ಕೈ ಕೊಟ್ರೋ ಮಾರಾಯ ಅಂದ.

ಸAಘದ ಮಂದಿ ಗಾಬರಿ ಬಿದ್ದರು.’ ಒಂಟುಂಟ್ಲೇ ಹಿಂಗ್ ಹೇಳಿದರೆಂಗೋ ಅಧ್ಯಕ್ಷ? ಮಲ್ಲೆಪ್ಪ, ನಿರಂಜನಪ್ಪ ನಿನ್ ದೋಸ್ತರ ಅದಾರ. ಅದೆಲ್ಲ ನಾಟಕ ಬ್ಯಾಡ, ಮೊದ್ಲ ರೊಕ್ಕ ಎಣಿಸು’ ಅಂದ್ರು.

ನಾ ದೇವ್ರ ಭಕ್ತ ಅದೀನಿ. ಮೋಸ ಮಾಡ್ತೀನನು? ಎಲ್ಲ ಅವನಾಟ. ಈಗೇನೂ ಮಾಡಾಕ್ ಆಗಂಗಿಲ್ಲ ಅಂದುಬಿಟ್ಟ ಚೋರೇಂದ್ರ.
‘ನಾಟ್ಕ ಬ್ಯಾಡ, ಮೊದ್ಲ ರೊಕ್ಕ ತೆಗಿಯೋ’ ಎಂದು ಬಾಯಿ ಮಾಡಿದ್ರು.

ಕೈ ಎತ್ತಿದ ಚೋರೇಂದ್ರ, ‘ಇಲ್ಲ ನೋಡ್ರೋ, ಏನ್ ಕಿತ್ಕೊತೀರಿ? ಏನ್ ಹರಕೋತಿರಿ?’ ಎಂದು ಸೀದಾ ದೇವ್ರ ಕೋಲಿಗೆ ಹೋಗಿ ರಾಮಜಪ ಶುರು ಮಾಡಿಬಿಟ್ಟ.

ಮುಂದೇನಾಗುತ್ತೋ ಗೊತ್ತಿಲ್ಲ. ಆದ್ರ ಸಂಘದ ಮಂದಿ ಒಳ್ಳೆಯವ್ರು ಅದಾರ. ಅವರಂತಾರ, ‘ಹರಕೊಣಾಕ, ಕಿತ್ಕೊಳ್ಳಾಕ ನಾವ್ ದುಷ್ಟರಲ್ಲಪ…’


ಇದನ್ನೂ ಓದಿ2018ರಿಂದ ಸುಪ್ರೀಂಕೋರ್ಟ್‌ ವಿರುದ್ಧವೇ 122 ದೂರು ದಾಖಲು; RTI ನಿಂದ ಬಹಿರಂಗ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights