ರಾಜ್ಯಗಳ ಆರ್ಥಿಕತೆಗೆ ಮೋದಿ ಸರ್ಕಾರ ‘ಕೊಳ್ಳಿ’ ಇಟ್ಟಿದೆ: ಹೆಚ್‌ಡಿಕೆ

ಸರಿಯಾಗಿ ಜಿಎಸ್‌ಟಿ ತೆರಿಗೆ ಸಂಗ್ರವಾಗಿಲ್ಲ ಎಲ್ಲಾ ದೇವರ ಆಟ ಎಂದು ಹೇಳಿರುವ ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್, ರಾಜ್ಯಗಳಿಗೆ ಜಿಎಸ್‌ಟಿ ಪಾಲು ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದು, ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಕೇರಳ ಸೇರಿದಂತೆ ಬಿಜೆಪಿಯೇತರ ರಾಜ್ಯ ಸರ್ಕಾರಗಳು ಜಿಎಸ್‌ಟಿ ಪಾಲಿಗಾಗಿ ಪಟ್ಟುಹಿಡಿದಿದ್ದು, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದು, ಕರ್ನಾಟಕದ ಮಾಜಿ ಸಿಎಂ ಕುಮಾರಸ್ವಾಮಿ, ಕೇಂದ್ರ ವಿರುದ್ಧ ಟ್ವೀಟ್‌ ಮಾಡಿದ್ದು, ರಾಜ್ಯಗಳ ಆರ್ಥಿಕತೆಗೆ ಕೇಂದ್ರ ಸರ್ಕಾರ ‘ಕೊಳ್ಳಿ’ ಇಟ್ಟಿದೆ ಎಂದು ಆರೋಪಿಸಿದ್ದಾರೆ.

ಸರಕು ಮತ್ತು ಸೇವಾ ತೆರಿಗೆ (ಜಿ ಎಸ್ ಟಿ) ನಷ್ಟ ತುಂಬಿಕೊಡುವ ಬದ್ಧತೆಯಿಂದ ಹಿಂದೆ ಸರಿದಿರುವ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳ ಮೇಲೆ ಗದಾಪ್ರಹಾರ ಮಾಡುವ ಮೂಲಕ ಹೊಣೆಗೇಡಿತನ ಪ್ರದರ್ಶಿಸಿರುವುದು ತೀವ್ರ ಖಂಡನೀಯ ಎಂದು ಟ್ವೀಟ್‌ ಮಾಡಿದ್ದಾರೆ.

ಕರೋನಾ ಸಂಕಷ್ಟ ‘ದೇವರ ಅಸಮಾನ್ಯ ಆಟ’ ಎನ್ನುವ ಮೂಲಕ ಒಕ್ಕೂಟ ವ್ಯವಸ್ಥೆಯ ರಾಜ್ಯಗಳ ಬಹುದೊಡ್ಡ ನಂಬಿಕೆಗೆ ಕೊಡಲಿಪೆಟ್ಟು ಕೊಟ್ಟಿದೆ. ಸುಲಭದ ಬಡ್ಡಿದರದಲ್ಲಿ ಸಾಲ ತೆಗೆದುಕೊಳ್ಳಿ. ಪಡೆದ ಸಾಲವನ್ನು ರಾಜ್ಯಗಳೇ ತೀರಿಸಿ ಎನ್ನುವ ಆಯ್ಕೆ ಮುಂದಿಟ್ಟು ರಾಜ್ಯಗಳ ಆರ್ಥಿಕತೆಗೆ ಕೇಂದ್ರ ಸರ್ಕಾರ ‘ಕೊಳ್ಳಿ’ ಇಟ್ಟಿದೆ ಎಂದಿದ್ದಾರೆ.

ಯಾವುದೇ ಪ್ರಲೋಭನೆ ಒಡ್ಡುವ ಮೂಲಕ ರಾಜ್ಯಗಳ ಆರ್ಥಿಕತೆಯ ವ್ಯವಸ್ಥೆ ಮೇಲೆ ನಿಯಂತ್ರಣ ಸಾಧಿಸುವ ಕಾನೂನು, ತಿದ್ದುಪಡಿ ಮಸೂದೆಗಳು ಭವಿಷ್ಯದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಶಿಥಿಲಗೊಳಿಸುವ ಅಪಾಯ ಇಲ್ಲದಿಲ್ಲ ಎಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ್ದರು. ಇಂತಹದೊಂದು ಅಪಾಯ ಈಗ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಈಗ ಸಂಗ್ರಹವಾಗಿರುವ ತೆರಿಗೆಯಲ್ಲಿ ರಾಜ್ಯ ಸರ್ಕಾರಗಳಿಗೆ ಪರಿಹಾರ ನೀಡಲು 97 ಸಾವಿರ ಕೋಟಿ ರೂ ಹಾಗೂ ಆದಾಯ ಕೊರತೆ ಎದುರಾಗಲಿರುವ 2.35 ಲಕ್ಷ ಕೋಟಿ ರೂಪಾಯಿಗಳನ್ನು ರಾಜ್ಯಗಳು ಸಾಲ ಪಡೆಯುವ ಆಯ್ಕೆಗಳನ್ನು ಮುಂದಿಟ್ಟಿದೆ ಎಂದಿದ್ದಾರೆ.

“ಕೊಟ್ಟವ ಕೋಡಂಗಿ; ಇಸ್ಕೊಂಡವ ಈರಭದ್ರ” ಎಂಬಂತೆ ರಾಜ್ಯ ಸರ್ಕಾರಗಳು ಕಣ್ಣುಬಾಯಿ ಬಿಡುತ್ತಿವೆ. ಈಗ ಕೊರೊನಾ ನೆಪ ಮುಂದಿಟ್ಟು ಅನ್ಯಾಯ ಮಾಡಿಬಿಟ್ಟರೆ ರಾಜ್ಯಸರ್ಕಾರಗಳು ಏನು ಮಾಡಬೇಕು? ಕೋವಿಡ್ 19 ಮತ್ತು ನೆರೆಯಿಂದ ಬಳಲಿರುವ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿವೆ ಎಂದು ವ್ಯಂಗ್ಯವಾಡಿದ್ದಾರೆ.

ತಾಳ ತಪ್ಪಿದ ಕೇಂದ್ರಸರ್ಕಾರದ ದಿಕ್ಕೆಟ್ಟ ಅರ್ಥವ್ಯವಸ್ಥೆ ಮತ್ತು ಮುನ್ನೋಟದ ಅಂದಾಜು ಗ್ರಹಿಸದ ವೈಫಲ್ಯದ ಫಲವಾಗಿ ರಾಜ್ಯ ಸರ್ಕಾರಗಳು ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡ ಪರಿಸ್ಥಿತಿಗೆ ಸಿಲುಕಿ ನಲುಗುತ್ತಿವೆ. ರಾಜ್ಯಗಳಿಗೆ ಸಾಲ ಕೊಡಿಸುವ ಬದಲು ಕೇಂದ್ರವೇ RBIನಿಂದ ಸಾಲ ಪಡೆದು ರಾಜ್ಯಗಳಿಗೆ ನಷ್ಟ ಪರಿಹಾರ ತುಂಬಿ ಕೊಡಲಿ ಎಂದು ಆಗ್ರಹಿಸಿದ್ದಾರೆ.


ಇದನ್ನೂ ಓದಿ:  2018ರಿಂದ ಸುಪ್ರೀಂಕೋರ್ಟ್‌ ವಿರುದ್ಧವೇ 122 ದೂರು ದಾಖಲು; RTI ನಿಂದ ಬಹಿರಂಗ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights