ವಿಶ್ವನಾಥ್‌, ಎಂಟಿಬಿ ನಾಗರಾಜ್‌, ಶಂಕರ್‌ಗೆ ಸಚಿವ ಸ್ಥಾನ ನೀಡದಂತೆ ಹೈಕೋರ್ಟ್‌ನಲ್ಲಿ ಅರ್ಜಿ; ಹಳ್ಳಿಹಕ್ಕಿಗಿಲ್ವಾ ಸಚಿವ ಸ್ಥಾನ?

ಮೈತ್ರಿ ಸರ್ಕಾರ ಉರುಳಿಸಿ, ಉಪ ಚುನಾವಣೆಯಲ್ಲಿ ಸೋತು, ವಿಧಾನ ಪರಿಷತ್‌ ಸದಸ್ಯರಾಗಿರುವ  ಹೆಚ್‌‌. ವಿಶ್ವನಾಥ್‌, ಎಂ.ಟಿ.ಬಿ. ನಾಗರಾಜ್‌ ಹಾಗೂ ಆರ್‌. ಶಂಕರ್‌ ಅವರಿಗೆ ಸಚಿವ ಸ್ಥಾನ ನೀಡದಂತೆ ಆದೇಶಿಸಲು ಕೋರಿ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಬೆಂಗಳೂರಿನ ವಕೀಲ ಎ.ಎಸ್‌. ಹರೀಶ್‌ ಎಂಬುವವರು ಈ ಮೂವರು ಪರಿಷತ್ ಸದಸ್ಯರಿಗೂ ಸಚಿವ ಸ್ಥಾನ ನೀಡದಂತೆ ತಡೆಯಲು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ನೇತೃತ್ವದ ವಿಭಾಗೀಯ ಪೀಠ, ಯಾವುದೇ ಮಧ್ಯಂತರ ಆದೇಶ ನೀಡಲು ನಿರಾಕರಿಸಿದೆ. ಆದರೆ, ಪ್ರತಿವಾದಿಗಳಾದ ಸರಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯಪಾಲರ ಸಚಿವಾಲಯ, ಮುಖ್ಯಮಂತ್ರಿ, ಕಾನೂನು ಇಲಾಖೆ ಹಾಗೂ ಮೂವರು ವಿಧಾನ ಪರಿಷತ್‌ ಸದಸ್ಯರಿಗೆ ನೋಟಿಸ್‌ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ‘‘ಆರ್‌. ಶಂಕರ್‌, ಎಂ.ಟಿ.ಬಿ. ನಾಗರಾಜ್‌ ಹಾಗೂ ಎಚ್‌. ವಿಶ್ವನಾಥ್‌ ಇತ್ತೀಚೆಗೆ ಬಿಜೆಪಿಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದಾರೆ. ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಪ್ರಕಾರ ಈ ಮೂವರೂ ಸಚಿವ ಹುದ್ದೆ ಪಡೆದುಕೊಳ್ಳಬೇಕಾದರೆ ಚುನಾವಣೆಯಲ್ಲಿ ಸ್ಪರ್ಧಿಸಿ ಜನರಿಂದ ಮರು ಆಯ್ಕೆಯಾಗಬೇಕು. ಆದರೆ, ವಿಧಾನ ಪರಿಷತ್ತಿಗೆ ನಾಮಕರಣ ಮಾಡಿರುವುದನ್ನು ಮರು ಆಯ್ಕೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಈ ಮೂವರು ಸಂಪುಟಕ್ಕೆ ಸೇರಿದರೆ ಅದು ಸುಪ್ರೀಂ ಕೋರ್ಟ್‌ ತೀರ್ಪಿನ ಉಲ್ಲಂಘನೆಯಾಗಲಿದೆ,’’ ಎಂದು ವಾದಿದ್ದಾರೆ.

ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, ‘‘ಈ ಮೂವರಿಗೂ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ಯಾವ ಆಧಾರದ ಮೇಲೆ ಹೇಳುತ್ತೀರಿ’’ ಎಂದು ಪ್ರಶ್ನಿಸಿದ್ದು,  ‘‘ಒಂದು ವೇಳೆ ಸಚಿವ ಸ್ಥಾನ ನೀಡಬೇಕಾದ ಸಂದರ್ಭ ಬಂದರೆ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳು ಸುಪ್ರೀಂ ಕೋರ್ಟ್‌ ತೀರ್ಪಿನ ಅನುಸಾರ ಕಾನೂನಾತ್ಮಕ ಅಂಶಗಳನ್ನು ಪರಿಗಣಿಸಿಯೇ ನಿರ್ಧಾರ ಕೈಗೊಳ್ಳುತ್ತಾರೆಂಬ ವಿಶ್ವಾಸ ನ್ಯಾಯಾಲಯಕ್ಕಿದೆ. ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿರುದ್ಧವಾಗಿ ನೇಮಕಗೊಂಡರೆ, ಆಗ ಅದನ್ನು ಪ್ರಶ್ನಿಸಬಹುದು. ಈ ಹಂತದಲ್ಲಿಯೇ ಅರ್ಜಿ ಸಂಬಂಧ ಯಾವುದೇ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ,” ಎಂದು ಹೇಳಿದೆ.

ಅಲ್ಲದೆ, ಮುಂದಿನ ವಿಚಾರಣೆಯನ್ನು ಸೆ.23ಕ್ಕೆ ಮುಂದೂಡಿದೆ.


Read Also: ಮೈತ್ರಿ ಸರ್ಕಾರ ಪತನಕ್ಕೆ ಡ್ರಗ್ಸ್‌ ಮಾಫಿಯಾದ ಹಣ ಬಳಕೆಯಾಗಿದೆ: ಹೆಚ್‌ಡಿಕೆ ಹೊಸ ಬಾಂಬ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights