ಮಧ್ಯಪ್ರದೇಶ ಸರ್ಕಾರ ಲಾಕ್‌ಡೌನ್‌ ಸಮಯಲ್ಲಿ ಪಶು ಆಹಾರದಂತಹ ಧಾನ್ಯಗಳನ್ನು ಬಡವರಿಗೆ ವಿತರಿಸಿದೆ: ಕೇಂದ್ರ ಸರ್ಕಾರ  

ಬಿಜೆಪಿ ನೇತೃತ್ವದ ಮಧ್ಯಪ್ರದೇಶ ಸರ್ಕಾರವು ಮನುಷ್ಯರು ತಿನ್ನಲು ಯೋಗ್ಯವಲ್ಲದ, ಪ್ರಾಣಿಗಳಷ್ಟೇ ತಿನ್ನಬಹುದಾದಂತಹ ಕಳಪೆ ಗುಣಮಟ್ಟದ ಆಹಾರ ಧಾನ್ಯಗಳನ್ನು ಲಾಕ್‌ಡೌನ್‌ ಸಮಯದಲ್ಲಿ ಜನರಿಗೆ ವಿತರಣೆ ಮಾಡಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ ಸಚಿವಾಲಯ ಹಾಗೂ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ (ಸಂಗ್ರಹ ಮತ್ತು ಸಂಶೋಧನಾ ವಿಭಾಗ) ಆರೋಪಿಸಿದೆ.

ಗ್ರಾಹಕ ವ್ಯವಹಾರಗಳ ಸಚಿವಾಲಯವು ಮಧ್ಯಪ್ರದೇಶದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ಸಂರಕ್ಷಣಾ ವಿಭಾಗದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಬುಡಕಟ್ಟು  ಸಮುದಾಯದ ಜನರೇ ಹೆಚ್ಚಿರುವ ಬಾಲಘಾಟ್ ಮತ್ತು ಮಂಡ್ಲಾ ಜಿಲ್ಲೆಗಳಲ್ಲಿನ ಜನರಿಗೆ  ‘ಮಾನವ ಬಳಕೆಗೆ ಯೋಗ್ಯವಲ್ಲದ’ ಮತ್ತು ‘ಮೇಕೆ, ಕುದುರೆ, ಕುರಿ ಮತ್ತು ದನಕರುಗಳಿಗೆ ಸೂಕ್ತವಾಗಿರುವ’ ಧಾನ್ಯಗಳನ್ನು ಲಾಕ್‌ಡೌನ್‌ ಸಮಯದಲ್ಲಿ ವಿತರಿಸಲಾಗಿದೆ ಎಂದು ಬರೆದಿದ್ದಾರೆ.

2020ರ ಜುಲೈ 30 ರಿಂದ 2020ರ ಆಗಸ್ಟ್ 2ರವರೆಗೆ ಎರಡೂ ಜಿಲ್ಲೆಗಳಲ್ಲಿ ನಾಲ್ಕು ಡಿಪೋಗಳು ಮತ್ತು ಒಂದು ಪಡಿತರ ಅಂಗಡಿಯಿಂದ ಸಂಗ್ರಹಿಸಿದ 32 ಮಾದರಿಗಳನ್ನು ಪರಿಶೀಲಿಸಿದ್ದು, ಅವುಗಳ ಆಧಾರದ ಮೇಲೆ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದ್ದಾರೆ. ಆರು ಪುಟಗಳ ವರದಿಯಲ್ಲಿ, ಸ್ವೇತಾ ವೇರ್‌ಹೌಸ್-ನೀರ್‌ಗಾಂವ್, ಸಿಡಬ್ಲ್ಯೂಸಿ-ಗರ್ರಾ ಮತ್ತು ಎಂಪಿಡಬ್ಲ್ಯೂಎಲ್‌ಸಿ ಬೈಹಾರ್‌ನಿಂದ 21 ಧಾನ್ಯಗಳ ಮಾದರಿಗಳು ಮತ್ತು ನ್ಯಾಯ ಬೆಲೆ ಪಡಿತರ ಅಂಗಡಿ-ಪ್ರೇಮ್‌ನಗರದ ಒಂದು ಮಾದರಿಯನ್ನು ಬಾಲಘಾಟ್ ಜಿಲ್ಲೆಯಿಂದ ತೆಗೆದುಕೊಳ್ಳಲಾಗಿದೆ. ಉಳಿದ 10 ಮಾದರಿಗಳನ್ನು ಮಾಂಡ್ಲಾ ಜಿಲ್ಲೆಯ ಕಟಂಗಿಯ ಸಂಗಮ್ ವೇರ್‌ಹೌಸ್‌ನಿಂದ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.

ಮಾದರಿಗಳನ್ನು ನವದೆಹಲಿಯ ಎನ್‌ಎಬಿಎಲ್ ಮಾನ್ಯತೆ ಪಡೆದ ಕೇಂದ್ರ ಧಾನ್ಯ ವಿಶ್ಲೇಷಣೆ ಪ್ರಯೋಗಾಲಯದಲ್ಲಿ (ಸಿಜಿಎಎಲ್) ಕೃಷಿ ಭವನದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ.  “ಧಾನ್ಯಗಳು ಮಾನವ ಬಳಕೆಯಿಂದ ನಿರಾಕರಿಸಬಹುದಾದ ಮಿತಿಗಳನ್ನು ಮೀರಿದ್ದು, ಅತ್ಯಂತ ಕಳಪಡ ಗುಣಮಟ್ಟದ್ದಾಗಿದೆ ಎಂದು ತಿಳಿದುಬಂದಿದ್ದು, ಈ ಧಾನ್ಯಗಳನ್ನು ಕೋಳಿ, ಮೇಕೆ, ಕುದುರೆ, ಕುರಿ ಮತ್ತು ದನಗಳಂತಹ ಪ್ರಾಣಿಗಳ ಆಹಾರಕ್ಕೆ ಮಾತ್ರ ಸೂಕ್ತವಾಗಿದೆ” ಎಂದು ಪತ್ರದಲ್ಲಿ ಹೇಳಲಾಗಿದೆ.

ವಿಶೇಷವೆಂದರೆ, ಗೋದಾಮಿನಿಂದ ಸಂಗ್ರಹಿಸಿದ ಮಾದರಿಗಳನ್ನು, ಗೋದಾಮಿನ ದಾಖಲೆಯ ಪ್ರಕಾರ ಈ ವರ್ಷ ಮೇ-ಜುಲೈನಲ್ಲಿ ಖರೀದಿಸಲಾಗಿದೆ. ಆದರೆ, ಕೇಂದ್ರ ಸಚಿವಾಲಯದ ವರದಿಯ ಪ್ರಕಾರ, ಇದು ಮೂರು ವರ್ಷಗಳಿಗಿಂತ ಹಳೆಯದಾಗಿದೆ ಎಂದು ಹೇಳಲಾಗಿದೆ.

pds mp

ಕಳಪೆ ಆಹಾರ ಸರಬರಾಜು ಮಾಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಹಾಗೂ ಈ ಧಾನ್ಯಗಳನ್ನು ಸರಬರಾಜು ಮಾಡಿರುವ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಮಾದರಿಗಳನ್ನು ಪದಡೆ ಗೋದಾಮುಗಳಲ್ಲಿರುವ ಸ್ಟಾಕ್‌ಗಳನ್ನು ವಶಪಡಿಸಿಕೊಂಡು, ವಿಚಾರಣಾ ವರದಿಯನ್ನು ಆದಷ್ಟು ಬೇಗ ಕೇಂದ್ರ ಕಳುಹಿಸಬೇಕು  ಎಂದು ಕೇಂದ್ರ ಸಚಿವಾಲಯವು ಇಲಾಖೆಗೆ ಸೂಚಿಸಲಾಗಿದೆ.

ರಾಜ್ಯದ ಜನಸಂಖ್ಯೆಯ ಸುಮಾರು 75% ರಷ್ಟು ಜನರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಸಿಗುತ್ತದೆ. 2011 ರ ಜನಗಣತಿಯ ಪ್ರಕಾರ, ರಾಜ್ಯವು 1.17 ಕೋಟಿ ಪಡಿತರ ಚೀಟಿಗಳನ್ನು ಹೊಂದಿದೆ ಮತ್ತು ಸುಮಾರು 5.6 ಕೋಟಿ ಜನರಿಗೆ 25,490 ಪಡಿತರ ಅಂಗಡಿಗಳಿಂದ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತದೆ.


ಇದನ್ನೂ ಓದಿ: GST ಪರಿಹಾರಕ್ಕೆ RBIನಿಂದ ಸಾಲ ಪಡೆಯಲು ಬಿಎಸ್‌ವೈ ನಿರ್ಧಾರ: ಸರ್ಕಾರದ ವಿರುದ್ಧ ಆಕ್ರೋಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights