ಬಾರ್‌ಗಳು ಓಪನ್, ಗ್ರಂಥಾಲಯಗಳು ಬಂದ್: ಸರ್ಕಾರ ವಿರುದ್ಧ ಓದುಗರ ಆಕ್ರೋಶ
ಒಂದು ದೇಶದ ಬುನಾಧಿ ಶಿಕ್ಷಣ. ಆದರೆ, ಕೊರೊನಾ ಕಾರಣದಿಂದಾಗಿ ತರಗತಿಗಳಿಗೆ ಬೀಗ ಹಾಕಲಾಗಿದೆ. ಅಲ್ಲದೆ, ಆನ್‌ಲೈನ್ ಕ್ಲಾಸ್‌ಗಳನ್ನು ನಡೆಸಲಾಗುತ್ತಿದೆ. ಜೊತೆಗೆ, ಕೆಪಿಎಸ್‌ಸಿ ಸೇರಿದಂತೆ ಇತರೆ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆದರೆ, ಲಾಕ್‌ಡೌನ್ ಆಗಿ ಐದು ತಿಂಗಳು ಕಳೆದಿದ್ದು, ಈಗ ಅನ್‌ಲಾಕ್ ಪ್ರಕ್ರಿಯೆ ಶುರುವಾಗಿದೆ. ಆದರೂ, ಸಾರ್ವಜನಿಕ ಗ್ರಂಥಾಲಯಗಳ ಮುಚ್ಚಿದ ಬಾಗಿಲು ಇಂದಿಗೂ ತೆರೆದಿಲ್ಲ. ಆದರೆ, ಅನ್‌ಲಾಕ್ ಪ್ರಕ್ರಿಯೆಗೂ ಮುನ್ನವೇ ಬಾರ್‌ಗಳನ್ನು ತೆರೆದ ಸರ್ಕಾರ ಗ್ರಂಥಾಲಯಗಳನ್ನು ತೆರೆಯದೇ ಇರುವುದು ಓದುಗರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ 6844 ಗ್ರಂಥಾಲಯಗಳಿದ್ದು, ಅವುಗಳಲ್ಲಿ ಶಾಖಾ ಗ್ರಂಥಾಲಯಗಳು- 519, ಸೇವಾ ಕೇಂದ್ರಗಳು- 145, ಸಮುದಾಯ ಮಕ್ಕಳ ಗ್ರಾಂಥಾಲಯ 32, ಗ್ರಾಪಂ ಗ್ರಂಥಾಲಯಗಳು-5766, ಅಲೆಮಾರಿ ಗ್ರಂಥಾಲಯಗಳು- 127, ಕೊಳಚೆ ಪ್ರದೇಶ ಗ್ರಂಥಾಲಯ-100, ವಾಚನಾಲಯಗಳು 83, ಸಂಚಾರಿ ಗ್ರಂಥಾಲಯಗಳು-15, ನಗರ ಕೇಂದ್ರ ಗ್ರಂಥಾಲಯ-26, ಜಿಲ್ಲಾ ಗ್ರಂಥಾಲಯ 30 ಹಾಗೂ 01 ಕೇಂದ್ರ ಗ್ರಾಂಥಾಲಯವಿದ್ದು, ರಾಜ್ಯದಲ್ಲಿ ಒಟ್ಟು 20,58,313 ಓದುಗರು ಸದಸ್ಯತ್ವ ಪಡೆದಿದ್ದಾರೆ. ವಿವಿಧ ಭಾಷೆಗಳ ಹಾಗೂ ವೈವಿಧ್ಯಮಯ ವಿಷಯಗಳನ್ನೊಳಗೊಂಡ ಒಟ್ಟು 4 ಕೋಟಿ 70 ಲಕ್ಷಕ್ಕೂ ಅಧಿಕ ಪುಸ್ತಗಳು ಇವೆ.
ಆದರೆ, ಲಾಕ್‌ಡೌನ್ ಸಂದರ್ಭದಲ್ಲಿ ಮುಚ್ಚಲ್ಪಟ್ಟಿದ್ದ ಗ್ರಂಥಾಲಯಗಳನ್ನು ಇದೂವರೆಗೂ ತೆರೆದಿಲ್ಲ. ಅನ್‌ಲಾಕ್-1ರ ಮಾರ್ಗಸೂಚಿ ಪ್ರಕಾರ ಕೆಲವು ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿತು. ಆ ಸಂದರ್ಭದಲ್ಲಿ ಗ್ರಂಥಾಲಯಗಳನ್ನು ತೆರೆಯಲು ಅವಕಾಶ ಸಿಗಬಹುದು ಎಂದು ಓದುಗರು ನಿರೀಕ್ಷೆ ಇಟ್ಟಿದ್ದರು. ಆದರೆ, ಅನ್‌ಲಾಕ್-4 ಆರಂಭವಾಗಿದ್ದರೂ ಸಹ ಇನ್ನೂ ಗ್ರಂಥಾಲಯಗಳು ತೆರೆಯದೇ ಇರುವುದು ಓದುಗರ ನಿರೀಕ್ಷೆ ಹುಸಿಗೊಳಿಸಿದೆ.
ವಿದ್ಯಾರ್ಥಿಗಳಿಗೆ ಹಾಗೂ ಓದುಗರಿಗೆ ಜ್ಞಾನ ನೀಡುವ ಭಂಡಾರವಾಗಿರುವ ಗ್ರಂಥಾಲಯಗಳು ಮುಚ್ಚಿರುವುದರಿಂದ ಅನೇಕ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಸುರಕ್ಷತಾ ಕ್ರಮಗಳೊಂದಿಗೆ ಸರಕಾರ ಕೂಡಲೇ ಗ್ರಂಥಾಲಯ ಆರಂಭಿಸಬೇಕು ಎಂದು ಓದುಗರು ಒತ್ತಾಯಿಸಿದ್ದಾರೆ.
ಬಾರ್ ಆ್ಯಂಡ್ ರೆಸ್ಟೋರೆಂಟ್ ಓಪನ್ ಮಾಡಲು ಅವಕಾಶ ನೀಡಿರುವ ಸರಕಾರ ಗ್ರಂಥಾಲಯ ತೆರೆಯಲು ಇನ್ನೂ ಅವಕಾಶ ನೀಡಿಲ್ಲ. ಸರಕಾರಕ್ಕೆ ವಿದ್ಯಾರ್ಥಿಗಳ ಭವಿಷ್ಯಕ್ಕಿಂತ ಹಣ ಮಾಡಿಕೊಳ್ಳುವುದೇ ಮುಖ್ಯವಾಗಿದೆ ಎಂದು ಸರ್ಕಾರದ ವಿರುದ್ಧ ಓದುಗರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬಸ್‌ನಲ್ಲಿ ಹೋಗಲು ನಿರಾಕರಿಸಿದ ಏಕೈಕ ಮಹಿಳಾ ಪ್ರಯಾಣಿಕರಿಗಾಗಿ 535 ಕಿ.ಮೀ ಕ್ರಮಿಸಿದ ರಾಜಧಾನಿ ಎಕ್ಸ್‌ಪ್ರೆಸ್ ರೈಲು