ಮೋದಿಯ ವೈಫಲ್ಯವನ್ನು ಮುಚ್ಚಿಹಾಕಲು ರಾಜ್ಯದ ಹಿತವನ್ನು ಬಲಿಗೊಡುತ್ತಿದ್ದಾರೆ ಬಿಎಸ್‌ವೈ: ಸಿದ್ದರಾಮಯ್ಯ

ಪ್ರಧಾನಿ ನರೇಂದ್ರ ಮೋದಿಯವರ ವೈಫಲ್ಯವನ್ನು ಮುಚ್ಚಿಹಾಕಲು ಸಿಎಂ ಯಡಿಯೂರಪ್ಪ ಅವರು ರಾಜ್ಯದ ಹಿತವನ್ನು ಬಲಿಗೊಡುತ್ತಿದ್ದಾರೆ. ರಾಜ್ಯ ಮತ್ತು‌ ಕೇಂದ್ರ ಸರ್ಕಾರ ಜನತೆಗೆ ಬಗೆದಿರುವ ದ್ರೋಹವನ್ನು‌ ಕಾಂಗ್ರೆಸ್ ಪಕ್ಷ ವಿಧಾನಮಂಡಲದ‌ ಅಧಿವೇಶನದಲ್ಲಿ ಬಿಚ್ಚಿಡಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಸರಣಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ವಿಶ್ವಾಸದ್ರೋಹಕ್ಕೆ ತಲೆಬಾಗಿರುವ ಕರ್ನಾಟಕದ ಸಿಎಂ ಯಡಿಯೂರಪ್ಪ ಅವರು, ಜಿಎಸ್ ಟಿ ಪರಿಹಾರವನ್ನು ತುಂಬಿಕೊಳ್ಳಲು ಆರ್ ಬಿ ಐನಿಂದ ಸಾಲ ಪಡೆಯಲು ತೀರ್ಮಾನಿಸುವ ಮೂಲಕ ರಾಜ್ಯದ ಜನತೆಯನ್ನು ಸಾಲದ ಶೂಲಕ್ಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸಾಲ ಮಾಡಿಯಾದರೂ ಕೊರೊನಾ ನಿಯಂತ್ರಿಸುತ್ತೇನೆ, ಪ್ರವಾಹ ಪೀಡಿತರಿಗೆ ಪರಿಹಾರ ನೀಡುತ್ತೇನೆ, ಸರ್ಕಾರಿ ನೌಕರರ ಸಂಬಳ ಕೊಡುತ್ತೇನೆ… ಎಂದುಯಡಿಯೂರಪ್ಪನವರು ಪ್ರತಿಯೊಂದಕ್ಕೂ ಸಾಲದ ಮಂತ್ರ ಪಠಿಸುತ್ತಾ ಬಂದಿದ್ದಾರೆ. ಇವರೇನು ರಾಜ್ಯ ಸರ್ಕಾರವನ್ನು ದಿವಾಳಿ ಮಾಡಲು ತೀರ್ಮಾನಿಸಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ. 

ರಾಜ್ಯದ ಬಿಜೆಪಿ ಸರ್ಕಾರ 2020-21ರ ಅಂತ್ಯಕ್ಕೆ ರೂ.3,68,692 ಕೋಟಿ ಸಾಲದ ಅಂದಾಜನ್ನು ಬಜೆಟ್‌ನಲ್ಲಿ ಮಾಡಿದ್ದರು. ಈಗ ಕೊರೊನಾದಿಂದ ತೆರಿಗೆ ಸಂಗ್ರಹ ಕುಸಿದಿದೆ, ವಿತ್ತೀಯ ಕೊರತೆ ಹೆಚ್ಚಲಿದೆ, ಇವೆಲ್ಲದ್ದಕ್ಕೂ ಸಾಲ ಮಾಡಲು ಹೊರಟರೆ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಸಾಲದ ಮಿತಿ ಶೇ.25 ಅನ್ನು ಮೀರಲಾರದೇ? ಎಂದು ಕಿಡಿಕಾರಿದ್ದಾರೆ.

ಹೊಸ ಸಾಲದ ಹೊರೆ ರೂ.11,324 ಕೋಟಿಗಷ್ಟೇ ಸೀಮಿತವೇ? ಇದು ಒಟ್ಟು ಜಿಎಸ್ ಟಿ ಪರಿಹಾರ 97,000 ಕೋಟಿಯಲ್ಲಿ ರಾಜ್ಯದ ಪಾಲು ಅಷ್ಟೆ. ಇದರ ಜೊತೆ ಕೊರೊನಾದಿಂದಾಗಿ ಜಿಎಸ್ ಟಿ ಒಟ್ಟು ನಷ್ಟ ರೂ.2,35,000 ಕೋಟಿ ಎಂದು ಅಂದಾಜು ಮಾಡಲಾಗಿದೆ. ಇದನ್ನು ಕೇಂದ್ರ ತುಂಬಿಕೊಡಲಿದೆಯೇ? ರಾಜ್ಯವೇ ಸಾಲ‌ಮಾಡಬೇಕೇ? ಎಂದು ಹೇಳಿದ್ದಾರೆ.


ಇದನ್ನೂ ಓದಿ: ಒಳಮೀಸಲಾತಿಯ ತತ್ವವಿಲ್ಲದೇ ಮೀಸಲಾತಿಗೆ ಸತ್ವವಿರದು: ಅಧ್ಯಯನ ಬರಹ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights