ನೀಟ್ ಪರೀಕ್ಷೆ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ; ಪರೀಕ್ಷೆಗೆ ಅಡ್ಡಿಯಿಲ್ಲ: ಸುಪ್ರೀಂ ಕೋರ್ಟ್
ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಅನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಇಂದು (ಬುಧವಾರ) ಅರ್ಜಿಯ ವಿಚಾರಣೆ ನಡೆಸಿದ ನಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠವು, ಕೊರೊನಾ ಸೋಂಕಿನ ನಡುವೆಯೂ ನೀಟ್ ಪರೀಕ್ಷೆಯನ್ನು ನಡೆಸಲು ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಹಾಗಾಗಿ ಪರೀಕ್ಷೆಗಳನ್ನು ಮುಂದೂವಂತೆ ಆದೇಶಿಸಲು ಆಗುವುದಿಲ್ಲ ಎಂದು ಹೇಳಿದೆ.
ಹಾಗಾಗಿ, ಸೆಪ್ಟೆಂಬರ್ 13 ರಂದು ನಿಗದಿಯಾಗಿರುವ ನೀಟ್ ಪರೀಕ್ಷೆಯು ಯಾವುದೇ ಬದಲಾವಣೆಗಳಿಲ್ಲದೆ ನಡೆಯಲಿದೆ.
ಈ ಮುಂಚೆ, ಆಗಸ್ಟ್ 15 ರಂದು ಸುಪ್ರೀಂ ನೀಡಿದ ತೀರ್ಪಿನಲ್ಲಿ, ನೀಟ್ ಹಾಗೂ ಜೆಇಇ ಪರೀಕ್ಷೆಗಳನ್ನು ನಡೆಸಲು ಅಡ್ಡಿಯಿಲ್ಲ. ಪರೀಕ್ಷೆಗಳನ್ನು ನಡೆಸಬಹುದು ಎಂದು ಹೇಳಿತ್ತು.
ಸುಪ್ರೀಂ ಕೋರ್ಟ್ ಆದೇಶವನ್ನು ಪರಾಮರ್ಶಿಸುವಂತೆ ಕೋರಿ ಆರು ರಾಜ್ಯಗಳ ಸಚಿವರು ಸಲ್ಲಿಸಿದ್ದ ಅರ್ಜಿಗಳನ್ನು ಸೆ. 4ರಂದು ವಜಾಗೊಳಿಸಲಾಗಿತ್ತು.
ಮತ್ತೊಂದು ಅರ್ಜಿ ಬಾಕಿ ಉಳಿದಿದ್ದು, ಅ ಅರ್ಜಿಯ ವಿಚಾರಣೆಯನ್ನು ಇಂದು ನಡೆಸಿರುವ ಸುಪ್ರೀಂ ಕೋರ್ಟ್, ಪರೀಕ್ಷೆ ನಡೆಸಲು ಅಧಿಕಾರಿಗಳು ಈಗಾಗಲೇ ಎಲ್ಲ ಸಿದ್ಧತೆ ನಡೆಸಿದ್ದಾರೆ. ಎಲ್ಲಾ ಸಿದ್ದತೆಗಳು ಮುಗಿದಿವೆ. ಪರಾಮರ್ಶೆಯನ್ನೂ ವಜಾಗೊಳಿಸಲಾಗಿದೆ. ಈಗಾಗಲೇ ಜೆಇಇ ಪರೀಕ್ಷೆ ಮುಗಿದುಹೋಗಿದೆ. ನೀಟ್ ಪರೀಕ್ಷೆ ಮಾತ್ರವೇ ಬಾಕಿ ಇದೆ. ಅದನ್ನು ನಡೆಸಲು ಯಾವ ರೀತಿಯಲ್ಲೂ ಮಧ್ಯ ಪ್ರವೇಶಿಸುವುದಿಲ್ಲ ಎಂದು ಹೇಳಿದೆ.
ಸೆ. 1 ರಿಂದ ಸೆ. 6ರವರೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್ಟಿಎ) ಜೆಇಇ ಮುಖ್ಯ ಪರೀಕ್ಷೆಗಳನ್ನು ನಡೆಸಿತ್ತು. ಈ ಪರೀಕ್ಷೆಯಲ್ಲಿ ಮೂಲ ಸೌಕರ್ಯಗಳ ಕೊರತೆ, ಸಂಚಾರದ ಅವ್ಯವಸ್ಥೆಯಿಂದಾಗಿ ಸುಮಾರು ಶೇ.50 ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯದೆ ಹೊರಗುಳಿದ್ದಾರೆ.
ಇದನ್ನೂ ಓದಿ: JEE ಪರೀಕ್ಷೆಗೆ ಸುಮಾರು ಶೇ.50 ರಷ್ಟು ವಿದ್ಯಾರ್ಥಿಗಳು ಗೈರು: ಮೋದಿ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

