ಹೋರಾಟಗಾರ ಕೆಎಲ್‌ ಅಶೋಕ್‌ ಅವರೊಂದಿಗೆ ಪೊಲೀಸರ ದುರ್ವರ್ತನೆ: ಎಸ್‌ಐ ಅಮಾನತಿಗೆ ರಾಜ್ಯಾದ್ಯಂತ ಒತ್ತಾಯ

ಸಾಮಾಜಿಕ ಕಾರ್ಯಕರ್ತ ಹಾಗೂ ಹೋರಾಟಗಾರ ಕೆ. ಎಲ್. ಅಶೋಕ್ ಮತ್ತು ಅವರ ಕುಟುಂಬ ಸದಸ್ಯರನ್ನು ಟ್ರಾಫಿಕ್ ನಿಯಮ ಉಲ್ಲಂಘನೆಯ ನೆಪದಲ್ಲಿ ಕೊಪ್ಪ ಪೊಲೀಸರು ಅವಮಾನಿಸಿರುವುದು ರಾಜ್ಯದಾದ್ಯಂತ ವಿರೋಧ ವ್ಯಕ್ತವಾಗಿದ್ದು ಘಟನೆಯನ್ನು ಹಲವಾರು ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.

ತಮ್ಮ ಕರ್ತವ್ಯ ದಲ್ಲಿ ಲೋಪವೆಸಗಿ ಅಶೋಕ್ ಮತ್ತು ಕಾರಿನಲ್ಲಿದ್ದ ಅವರ ಕುಟುಂಬ ಸದಸ್ಯರ ಘನತೆಗೆ ಚ್ಯುತಿ ತಂದಿರುವ ಹಾಗೂ ಆ ಮೂಲಕ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತಂದಿರುವ ಪೇದೆ ಹಾಗೂ ಎಸ್ ಐ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತು ಮಾಡಬೇಕು ಹಾಗೂ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಹಲವಾರು ಸಂಘಟನೆಗಳು ಆಗ್ರಹಿಸಿದೆ.

“ಇಂತಹ ಕ್ಷುಲ್ಲಕ ಕುತಂತ್ರಗಳಿಂದ ಭಿನ್ನಮತಗಳನ್ನು ಮಟ್ಟಹಾಕಬಹುದು ಎಂದು ಈ ಪೊಲೀಸರು ಭಾವಿಸಿದ್ದಲ್ಲಿ ಅವರು ಖಾಕಿ ಧರಿಸಲು ಅಯೋಗ್ಯರು ಎಂದೇ ಅರ್ಥ. ಇಂತಹ ಜನಕ್ಕೆ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದೆ ಎಂಬುದು ಶೀಘ್ರದಲ್ಲೇ ಅರಿವಾಗುವಂತೆ ಮಾಡುವುದು ಜಿಲ್ಲಾ ಎಸ್ ಪಿ ಯವರ ನೈತಿಕ ಜವಾಬ್ದಾರಿಯೂ ಆಗಿದೆ” ಎಂದು ಸಮತಾ ಸೈನಿಕ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಲೋಲಾಕ್ಷ ಹೇಳಿದ್ದಾರೆ.

ವಿಜಯಪುರದಲ್ಲಿ ಜನಶಕ್ತಿ, ಮಹಿಳಾ ಮುನ್ನಡೆ, ಕೋಮು ಸೌಹಾರ್ದ ವೇದಿಕೆ, ನಾವೂ ಭಾರತೀಯರು ವೇದಿಕೆ ಜಂಟಿಯಾಗಿ ವಿಜಯಪುರ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಕಿರುಕುಳ ನೀಡಿದ ಪೊಲೀಸರ ವಿರುದ್ದ ಕ್ರಮಕೈಗೊಳ್ಳವಂತೆ ಕೇಳಿಕೊಳ್ಳಲಾಯಿತು.

ಹೋರಾಟಗಾರ ಮತ್ತು ಕಾರಿನಲ್ಲಿದ್ದ ಅವರ ಕುಟುಂಬದ ಸದಸ್ಯರ ಘನತೆಗೆ ಚ್ಯುತಿ ತಂದಿರುವ ಪೇದೆ ಹಾಗೂ ಎಸ್ಐ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತು ಮಾಡಬೇಕೆಂದು ಚಿಕ್ಕಮಗಳೂರಿನಲ್ಲಿ ಕೂಡಾ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.

ಪೀಪಲ್ ಲಾಯರ್ಸ್ ಗಿಲ್ಡ್ ಬೆಂಗಳೂರು ಘಟನೆಯನ್ನು ಖಂಡಿಸಿದ್ದು, ಇದರ ರಾಜ್ಯ ಸಂಚಾಲಕ ಕೆ.ಕೆ.ವಕೀಲ “ಇಂತಹ ಘಟನೆ ಸಮಾಜದಲ್ಲಿ ಜನಸಾಮಾನ್ಯರು ಪೊಲೀಸರ ಮೇಲೆ ಇಟ್ಟಿರುವ ನಂಬಿಕೆಯನ್ನು ಕಳೆದುಕೊಳ್ಳುವಂತಾಗುತ್ತದೆ ಇಂತಹ ದುರಂಕಾರಿ ಪೊಲೀಸರನ್ನು ಕೂಡಲೇ ಅಮಾನತು ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.

“ಇಂತಹ ಪೊಲೀಸರಿಂದ ಇಡೀ ಪೊಲೀಸ್ ಸಮೂಹಕ್ಕೆ ಕಪ್ಪುಚುಕ್ಕೆ ಯಾಗಿರುತ್ತದೆ. ಅಶೋಕ್‌ರವರು ತಮ್ಮ ಜೀವನಪೂರ್ತಿ ಬಡ, ನಿರ್ಗತಿಕ, ಅಲ್ಪಸಂಖ್ಯಾತರ, ದಲಿತ ಮತ್ತು ಮಹಿಳೆಯರ ಪರ ಹೋರಾಟ ಮಾಡಿಕೊಂಡು ಬಂದಂತಹ ವ್ಯಕ್ತಿಯಾಗಿದ್ದು ಅವರ ಕುಟುಂಬದ ಸಮ್ಮುಖದಲ್ಲೆ ಸಣ್ಣ ವಿಚಾರವಾಗಿ ಕೆಟ್ಟ ಶಬ್ದ ಉಪಯೋಗಿಸಿ ನಿಂದಿಸಿರುವುದು ಪೊಲೀಸ್ ಗೂಂಡಾಗಿರಿಯಾಗಿರುತ್ತದೆ. ಪೊಲೀಸರ ವರ್ತನೆ ಹೀಗೆ ಮುಂದುವರಿದರೆ ಮುಂದೊಂದು ದಿನ ಪೊಲೀಸರ ವಿರುದ್ಧ ಜನ ತಿರುಗಿ ಬೀಳುವುದರಲ್ಲಿ ಅನುಮಾನ ಇಲ್ಲ ಆದ್ದರಿಂದ ಪೊಲೀಸ್ ವರಿಷ್ಠಾಧಿಕಾರಿಯವರು ದುರಹಂಕಾರಿ ಕೊಪ್ಪ ಪಿ.ಎಸ್.ಐ ಮತ್ತು ಕಾನ್ ಸ್ಟೇಬಲ್ ಅವರನ್ನು ತಕ್ಷಣವೇ ಅಮಾನತು ಮಾಡಿ ಕಾನೂನು ರೀತಿಯಲ್ಲಿ ತನಿಖೆ ನಡೆಸಿ ಶಿಕ್ಷೆಗೆ ಗುರಿ ಮಾಡಬೇಕು ಇಲ್ಲದಿದ್ದರೆ ನಾವು ಎಲ್ಲಾ ರೀತಿಯ ಕಾನೂನು ಹೋರಾಟ ಮಾಡಬೇಕಾಗುತ್ತದೆ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕೊಪ್ಪಗೇಟ್‌ಗೆ ಖಾಸಗಿ ಕೆಲಸದ ನಿಮಿತ್ತ ಬಂದಿದ್ದ ಸಂವಿಧಾನ ಉಳಿವಿಗಾಗಿ ಕರ್ನಾಟಕ ಮತ್ತು ಕರ್ನಾಟಕ ಜನಶಕ್ತಿಯ ಮುಖಂಡರಾದ ಕೆ.ಎಲ್‌ ಅಶೋಕ್‌ರವರು ನೋ ಪಾರ್ಕಿಂಗ್‌ ಜಾಗದಲ್ಲಿ ಕಾರು ನಿಲ್ಲಿಸಿದ್ದಾರೆ. ಅಲ್ಲಿಗೆ ಬಂದ ರಮೇಶ್ ಎಂಬ ಪೊಲೀಸ್ ಪೇದೆ ಯೂನಿಫಾರ್ಮ್ ಸಹ ಹಾಕಿರದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಗೊತ್ತಿಲ್ಲದೆ ನಿಲ್ಲಿಸಿದ್ದೇವೆ, ಈಗಲೇ ಹೊರಡುತ್ತೇವೆ ಅಥವಾ ದಂಡ ಕಟ್ಟುತ್ತೇವೆ ಎಂದರೂ ಬಿಡದೆ ಕಾರಿನ ಫೋಟೊ ತೆಗೆದುಕೊಂಡಿದ್ದಲ್ಲದೇ ಕಾರು ಸೀಜ್‌ ಮಾಡಲು ಮುಂದಾದಾಗಿದ್ದರು.

ಪೊಲೀಸರು ಅಡ್ರೆಸ್ ಕೇಳಿದಾಗ ಅಶೋಕ್‌ ಅವರು, ಶಿವಮೊಗ್ಗದ ಅವರ ಮನೆಯ ವಿಳಾಸ ನೀಡಿದ್ದರು. ಆಗ ಪೇದೆಯು ಚಿಕ್ಕಮಗಳೂರಿನಲ್ಲಿದ್ದು, ಶಿವಮೊಗ್ಗದ ಅಡ್ರೆಸ್‌ ನೀಡುತ್ತೀಯ, ನಾಟಕ ಮಾಡುತ್ತೀಯ ಎಂದು ನಿಂದಿಸಿದ್ದರು. ನಂತರ ಅವರು ಠಾಣೆಗೆ ಹೋದಾಗ ಅಲ್ಲಿದ್ದ ಎಸ್‌ಐ  ರವಿ ಎಂಬುವವರು ಸಹ ಅನುಚಿತವಾಗಿ ನಡೆದುಕೊಂಡು ಘಾಸಿಗೊಳಿಸಿದ್ದರು.


ಇದನ್ನೂ ಓದಿ: ದ್ವೇಷದ ಪ್ರಚೋದನೆಯಿಂದ ಲಾಭ ಗಳಿಸುತ್ತಿದೆ ಫೇಸ್‌ಬುಕ್‌; ಉದ್ಯೋಗ ತೊರೆದ ಭಾರತ ಮೂಲದ ಇಂಜಿನಿಯರ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights