ಕರ್ನಾಟಕದ ಮಾಧ್ಯಮಕ್ಕೆ ಸಿಂಗಂ ಆಗಿದ್ದ ಅಣ್ಣಾಮಲೈ; ಅಸಲಿಗೆ ಸಾಧಿಸಿದ್ದು ಶೂನ್ಯ!

ತಮಿಳುನಾಡಿನಲ್ಲಿ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿರುವ ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ “ನಾನು ನನ್ನ ಕರ್ನಾಟಕದ ಮುಖವನ್ನು ತೋರಿಸಬೇಕಾಗುತ್ತದೆ” ಎಂದಿದ್ದಾರೆ. ಏನದು ಕರ್ನಾಟಕದ ಮುಖ ? ಕರ್ನಾಟಕದ ಹಲವೆಡೆ ಐಪಿಎಸ್ ಅಧಿಕಾರಿಯಾಗಿ ಕೆಲಸ ಮಾಡಿರುವ ಅಣ್ಣಾಮಲೈ ಪ್ರಚಾರಕ್ಕಾಗಿ ಮಾಧ್ಯಮಗಳನ್ನು “ಚೆನ್ನಾಗಿಟ್ಟುಕೊಂಡು” ಸಿಂಗಂ ಅನ್ನಿಸಿಕೊಂಡರೇ ವಿನಹ ಅವರ ಸರ್ವಿಸ್ ರೆಕಾರ್ಡ್ ಅಂತದ್ದನ್ನೇನೂ ಹೇಳುತ್ತಿಲ್ಲ.

ಉಡುಪಿಯಲ್ಲಿ ಅಣ್ಣಾಮಲೈ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಜ್ವಲಂತ ಕಾನೂನು ಸುವ್ಯವಸ್ಥೆ ಸಮಸ್ಯೆಗಳಾದ ಅಂಡರ್ ವಲ್ಡ್, ನಕ್ಸಲ್, ಮರಳು ಮಾಫಿಯಾ, ಮಾನವ ಕಳ್ಳ ಸಾಗಾಟವನ್ನು ತಡೆದ ಒಂದೇ ಒಂದು ಉದಾಹರಣೆಯಿಲ್ಲ. ಐಎಎಸ್ ಅಧಿಕಾರಿ ಹರ್ಷಾಗುಪ್ತ ಮತ್ತು ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಚಿಕ್ಕಮಗಳೂರಿನಲ್ಲಿ ಸೇವೆ ಸಲ್ಲಿಸಿದ್ದ ಸಂದರ್ಭದಲ್ಲಿ ಇಡೀ ಚಿಕ್ಕಮಗಳೂರಿನ ಮಾಫಿಯಾವನ್ನು ನಿಲ್ಲಿಸಿದ್ದರು. ಹಾಗಾಗಿ ಚಿಕ್ಕಮಗಳೂರಿನ ಗ್ರಾಮವೊಂದರ ಪ್ರದೇಶಕ್ಕೆ ಗುಪ್ತಶೆಟ್ಟಿ ಹಳ್ಳಿ ಎಂದು ನಾಮಕರಣ ಮಾಡಲಾಗಿತ್ತು. ಅದೇ ಚಿಕ್ಕಮಗಳೂರಿಗೆ ಅಣ್ಣಾಮಲೈ ಎಸ್ಪಿಯಾಗಿ ಬಂದ ಮೇಲೆ ಮತ್ತೆ ಮರಳು ಮಾಫಿಯಾ, ರೌಡೀಸಂ ಶುರುವಾಗಿತ್ತು.

ಮೀಡಿಯಾ ಮ್ಯಾನೇಜ್ಮೆಂಟ್ ಮತ್ತು ಸೋಶಿಯಲ್ ಮೀಡಿಯಾ ಮ್ಯಾನೇಜ್ಮೆಂಟ್ ಚೆನ್ನಾಗಿ ಬಲ್ಲ ಅಣ್ಣಾಮಲೈ ಬೆಂಗಳೂರು ದಕ್ಷಿಣ ಡಿಸಿಪಿ ಆಗಿ ಬಂದ ನಂತರವಂತೂ ಸಿಂಗಂ ಎಂದು ಹೆಚ್ಚು ಪ್ರಚಲಿತವಾದರು. ಅಣ್ಣಾಮಲೈ ಪತ್ತೆ ಹಚ್ಚಿದ ಒಂದು ಕೇಸ್ ತೋರಿಸಿ ಎಂದರೆ ಯಾರಲ್ಲೂ ಉತ್ತರವಿಲ್ಲ. ಅಣ್ಣಾಮಲೈ ಬೆಂಗಳೂರು ದಕ್ಷಿಣ ಡಿಸಿಪಿಯಾಗಿ ಬರುವ ಅವದಿಯಲ್ಲೆ 7 ಕ್ಕೂ ಹೆಚ್ಚು ಮಹಿಳೆಯರ ಕೇಸ್ ಅನ್ನು ಪತ್ತೆ ಹಚ್ಚಲೂ ಅಣ್ಣಾಮಲೈರಿಂದ ಸಾಧ್ಯವಾಗಲಿಲ್ಲ. ರೋಲ್ ಕಾಲ್ ಗಳು, ಬೀದಿ ಬದಿ ವ್ಯಾಪಾರಿಗಳಿಂದ ರೌಡಿಗಳು ಮತ್ತು ಪೊಲೀಸರು ಮಾಡ್ತಿದ್ದ ಸುಲಿಗೆ, ರಿಯಲ್ ಎಸ್ಟೇಟ್ ಮಾಫಿಯಾದಲ್ಲಿ ಯಾವ ಬದಲಾವಣೆಯೂ ಅಣ್ಣಾಮಲೈ ಕಾಲದಲ್ಲಿ ಆಗಿರಲಿಲ್ಲ.

Read Also:  ಆಗ ಸಿಗಂ, BJP ಸೇರಿದ ಮೇಲೆ……?: ವೈರಲ್‌ ಆಗುತ್ತಿರುವ ಅಣ್ಣಾಮಲೈ ಫೋಟೋದ ಹಿನ್ನೆಲೆ ಏನು?

ಬೆಂಗಳೂರಿನ ನಟೋರಿಯಸ್ ರೌಡಿ ಸೈಕಲ್ ರವಿ ಪತ್ತೆಗೆ ಅಣ್ಣಾಮಲೈ ಮೂರು ತಂಡಗಳನ್ನು ರಚಿಸುತ್ತಾರೆ. ಆ ಮೂರೂ ತಂಡಗಳು ಸೈಕಲ್ ರವಿ ಪತ್ತೆಗೆ ವಿಫಲವಾಗುತ್ತದೆ. ಸಿಸಿಬಿ ಟೀಮ್ ಸೈಕಲ್ ರವಿಯನ್ನು ಪತ್ತೆ ಹಚ್ಚುತ್ತದೆ ಮತ್ತು ಆತನ ಮೇಲೆ ಶೂಟ್ ಮಾಡುತ್ತದೆ. ಇದು ಅಣ್ಣಾಮಲೈ ಕಾರ್ಯನಿರ್ವಹಣೆಗೆ ಸಾಕ್ಷಿ. ಒಂದೇ ಒಂದು ರೌಡಿ ಎನ್ ಕೌಂಟರ್ ಬಿಡಿ, ಕನಿಷ್ಟ ಸುಳಿವು ಪತ್ತೆ ಹಚ್ಚಲೂ ಅಣ್ಣಾಮಲೈರಿಂದ ಸಾಧ್ಯವಾಗಿಲ್ಲ.

ಯಾವ ಪ್ರಕರಣವನ್ನೂ ಭೇದಿಸದ ಅಣ್ಣಾಮಲೈ, ಐಪಿಎಸ್ ಅಲ್ಲದೇ ಇರುವ ಕೆಳಹಂತದ ಅಧಿಕಾರಿಗಳ ವಿರುದ್ದ ತಾತ್ಸಾರ ಭಾವನೆ ಹೊಂದಿದ್ದರು. ಹಾಗಾಗಿ ತನಗಿಂತ ವಯಸ್ಸಿನಲ್ಲಿ ಹಿರಿಯರಾಗಿರುವ ಪೊಲೀಸ್ ಅಧಿಕಾರಿಗಳನ್ನು ಕ್ಯಾಮರಾ ಮುಂದೆ ಬೈಯ್ಯುತ್ತಿದ್ದರು. ಇದನ್ನು ನೋಡಿದ ಪತ್ರಕರ್ತರು ಸಿನೇಮಾ ನೋಡಿದಂತೆ ರೋಮಾಂಚಿತರಾಗಿ ಸಿಂಗಂ ಎಂದು ಹೆಸರಿಟ್ಟರು. ಮತ್ತೊಂದೆಡೆ, ಮಾಧ್ಯಮಗಳಲ್ಲಿ ಯಾವುದಾದರೂ ಪೊಲೀಸ್ ಅಧಿಕಾರಿ ವಿರುದ್ದ ಸುದ್ದಿ ಬಂದರೆ ಅವರನ್ನು ಅಮಾನತ್ತು ಮಾಡುವ ಮೂಲಕ ಮಾಧ್ಯಮ ಪ್ರಚಾರವನ್ನು ಪಡೆಯುತ್ತಿದ್ದರು. ಸಿಂಗಂ ಆಗಲು ಇವೆರೆಡೇ ಅರ್ಹತೆಯಾದರೆ ನಿಜಕ್ಕೂ ಅಣ್ಣಾಮಲೈ ಸಿಂಗಂ ಅನ್ನೋದು ನಿಜ. ಅಣ್ಣಾಮಲೈಗೆ ಕರ್ನಾಟಕದ ಪೊಲೀಸ್ ಇತಿಹಾಸದಲ್ಲಿ ಯಾವ ಮುಖವೂ ಇಲ್ಲ. ಸೋಶಿಯಲ್ ಮೀಡಿಯಾ ಮತ್ತು ಮಾಧ್ಯಮಗಳ ಮೂಲಕ ತಾನೇ ಸೃಷ್ಟಿಸಿರುವ ನಕಲಿ ಇತಿಹಾಸಕ್ಕೆ ಯಾವ ಮನ್ನಣೆಯೂ ಇರುವುದಿಲ್ಲ. ನನ್ನ ಕರ್ನಾಟಕದ ಮುಖ ಎನ್ನುವುದು ಸಿಂಗಂನಷ್ಟೇ ನಕಲಿ.

ನವೀನ್ ಸೂರಿಂಜೆ


Read Also: ಹೋಟೆಲ್‌ನಲ್ಲಿ ಪ್ರಚಾರ ಪಡೆಯಲು ಮುಂದಾದ ತೇಜಸ್ವಿ ಸೂರ್ಯ; ತಂಬಿ ಇದು ತಮಿಳುನಾಡು ಎಂದ ತಮಿಳರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights