ಭಾರತದ ಹೆಸರು ಬದಲಿಸಿ; ದೇಶಕ್ಕೆ ಮೋದಿ ಹೆಸರಿಡುವ ದಿನ ದೂರವಿಲ್ಲ: ಮಮತಾ ಬ್ಯಾನರ್ಜಿ
ಕೊರೊನಾ ವ್ಯಾಕ್ಸಿನ್ ಪ್ರಮಾಣ ಪತ್ರದಲ್ಲಿ ತಮ್ಮ ಫೋಟೋವನ್ನು ಹಾಕಿಸಿಕೊಂಡಿರುವ ಮೋದಿ, ಭಾರತದ ಹೆಸರನ್ನೂ ಬದಲಿಸಿ ದೇಶಕ್ಕೆ ಮೋದಿ ಎಂದು ಹೆಸರಿಡುವ ದಿನಗಳು ದೂರವಿಲ್ಲ ಎಂದು ಟಿಎಂಸಿ ನಾಯಕಿ, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ಕೊಲ್ಕತ್ತಾದಲ್ಲಿ ರ್ಯಲಿ ನಡೆಸಿದ ಪ್ರಧಾನಿ ಮೋದಿ ಅವರು ಟಿಎಂಸಿ ಸರ್ಕಾರದ ವಿರುದ್ದ ಸುಳ್ಳು ಮತ್ತು ದ್ವೇಷದ ಪ್ರಚೋದನೆಯನ್ನು ಹರಡಿದ್ದಾರೆ. ಬಂಗಾಳದ 294 ಕ್ಷೇತ್ರಗಳಲ್ಲಿಯೂ ದೀದಿ ವರ್ಸಸ್ ಬಿಜೆಪಿ ಹೋರಾಟ ನಡೆಯಲಿದೆ. ಸತತ ಮೂರನೇ ಬಾರಿಯೂ ಸಿಎಂ ಆಗಿ ಅಧಿಕಾರಕ್ಕೆ ಮರಳಲಿದ್ದೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
“ಬಿಜೆಪಿ ನಾಯಕರು ಚುನಾವಣೆಯ ಸಮಯದಲ್ಲಿ ಮಾತ್ರ ಬಂಗಾಳಕ್ಕೆ ಬರುತ್ತಾರೆ. ಸುಳ್ಳು ಮತ್ತು ದ್ವೇಷವನ್ನು ಹರಡುತ್ತಾರೆ. ಅವರು ಮಹಿಳೆಯರ ಸುರಕ್ಷತೆಯ ಬಗ್ಗೆ ನಮಗೆ ಬೋಧಿಸುತ್ತಿದ್ದಾರೆ. ಹಾಗೊಂದು ವೇಳೆ ಬಂಗಾಳದಲ್ಲಿ ಮಹಿಳೆಯರಿಗೆ ಸುರಕ್ಷತಾ ಭಾವನೆ ಇಲ್ಲದಿದ್ದರೆ, ಅವರು ರಾತ್ರಿವೇಳೆಯಲ್ಲಿ ಮುಕ್ತವಾಗಿ ತಿರುಗಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮಹಿಳೆಯರ ಪರಿಸ್ಥಿತಿ ಏನು? ಮೋದಿಯವರ ನೆಚ್ಚಿನ ಗುಜರಾತ್ನ ಪರಿಸ್ಥಿತಿ ಏನು?. ವರದಿಗಳ ಪ್ರಕಾರ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪ್ರತಿದಿನ 04 ಅತ್ಯಾಚಾರ ಮತ್ತು 2 ಕೊಲೆಗಳು ದಾಖಲಾಗುತ್ತಿವೆ” ಎಂದು ಬಂಗಾಳ ಸಿಎಂ ವಿವರಿಸಿದ್ದಾರೆ.
ಅಹಮದಾಬಾದ್ನ ಕ್ರಿಕೆಟ್ ಕ್ರೀಡಾಂಗಣಕ್ಕೆ ಪ್ರಧಾನಿ ಮೋದಿ ತಮ್ಮ ಹೆಸರನ್ನಿಟ್ಟಿದ್ದಾರೆ. ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿ ತಮ್ಮ ಭಾವಚಿತ್ರವನ್ನು ಹಾಕಿಸಿದ್ದಾರೆ. ಮುಂದೆ ದೇಶಕ್ಕೆ ತಮ್ಮ ಹೆಸರನ್ನು ಇಡುವ ದಿನಗಳು ಬರಲಿವೆ ಎಂದು ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಬಂಗಾಳದಲ್ಲಿ ಮೋದಿ ರ್ಯಾಲಿಗಾಗಿ 3 ರೈಲು ಬಾಡಿಗೆಗೆ; ವಿವಿಧ ಪ್ರದೇಶದ ಜನರನ್ನು ಕರೆತಂದ BJP!