ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆ ಆಗುತ್ತೋ? ಇಲ್ಲವೋ? ರಾಜ್ಯ ರಾಜಕಾರಣದಲ್ಲಿ ಗುಸುಗುಸು!
ಅಧಿವೇಶನಕ್ಕೆ ಮುನ್ನ ಸಂಪುಟ ವಿಸ್ತರಣೆ ಆಗುತ್ತೋ ಇಲ್ಲವೋ ಸ್ಪಷ್ಟವಾಗಿಲ್ಲ. ಆದರೆ ರಾಜ್ಯ ರಾಜಕಾರಣದಲ್ಲಿ ಸದ್ಯ ತೆರೆ ಮರೆ ಚಟುವಟಿಕೆ ಮಾತ್ರ ಜೋರು ಪಡೆದಿದೆ.
ಯಾರು ಎಲ್ಲಿಗೆ ಹೋಗುತ್ತಾರೆ, ಯಾರನ್ನು ಭೇಟಿ ಆಗುತ್ತಾರೆ ಎಂಬುದರ ಬಗೆಗಿನ ಗುಸುಗುಸು ತೀವ್ರವಾಗಿದ್ದು ರಾಜಕೀಯದ ತಾಪಮಾನ ಏರಿದೆ.
ಈ ಮದ್ಯೆ ಮುಖ್ಯಮಂತ್ರಿ ಯಡಿಯೂರಪ್ಪನವರು ಏಕಾಂತದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ನಾನಾ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ತುದಿಗಾಲ ಮೇಲೆ ನಿಂತಿದ್ದರೂ ದಿಲ್ಲಿ ಪ್ರಭುಗಳು ಅದಕ್ಕೆ ಹಸಿರು ನಿಶಾನೆ ತೋರುತ್ತಿಲ್ಲ.
ದಿಲ್ಲಿ ಭೇಟಿಗೆ ಸಮಯ ನಿಗದಿ ಆಗಬಹುದು ಎಂಬ ನಿರೀಕ್ಷೆಯಲ್ಲಿಯೇ ಯಡಿಯೂರಪ್ಪ ಮತ್ತು ಸಚಿವ ಸ್ಥಾನದ ಆಕಾಂಕ್ಷಿಗಳು ಕಾಯುತ್ತ ಕುಂತವ್ರೆ.
ಆದರೆ ಅತ್ತ ವರಿಷ್ಠರು ಮುಖ್ಯಮಂತ್ರಿಗಳನ್ನು ದಿಲ್ಲಿಯ ಹತ್ತಿರ ಸಹ ಬಿಟ್ಟುಕೊಳ್ಳಲು ತಯಾರಿದ್ದಂತೆ ಕಾಣುತ್ತಿಲ್ಲ. ಕುಂಟು ನೆಪಗಳಲ್ಲಿಯೇ ಪರಿಸ್ಥಿತಿಯನ್ನು ದಿಲ್ಲಿ ನಾಯಕರು ಸಂಭಾಳಿಸುತ್ತಿದ್ದಾರೆ.
ಇನ್ನು ಅಧಿವೇಶನಕ್ಕೆ ಮುನ್ನ ಹೇಗಾದರೂ ಮಾಡಿ ದಿಲ್ಲಿ ದಂಡಯಾತ್ರೆ ಮಾಡಲು ಯಡಿಯೂರಪ್ಪ ಸಹಾ ನಿರ್ಧರಿಸಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆಯೇ ಎಂಎಲ್ಸಿಗಳಾದ ಎಂಟಿಬಿ, ಶಂಕರ್ ಮುಂತಾದ ಸಚಿವಾಕಾಂಕ್ಷಿಗಳು ಮುಕ್ಯಮಂತ್ರಿಗಳ ಮನೆಗೆ ಎಡತಾಕಿದ್ದೂ ಆಗಿದೆ.
ಇದೆಲ್ಲದರ ನಡುವೆ ಯಡಿಯೂರಪ್ಪನವರಿಗೆ ಪರ್‍ಯಾಯ ನಾಯಕತ್ವ ರೂಪಿಸುವ ಬಗ್ಗೆ ಮಾತನಾಡುತ್ತಿರುವ ನಾಯಕರ ಪ್ರಯತ್ನ ಸಹಾ ನಿಂತಿಲ್ಲ.
ಹಾಗೆ ನೋಡಿದರೇ ಆ ಬಣದ ನಾಯಕರಿಗೆ ದಿಲ್ಲಿ ಭೇಟಿ ಸುಗಮವಾಗಿದೆ. ಯಡಿಯೂರಪ್ಪನವರ ಭೇಟಿಗೆ ಇಲ್ಲದ ಸಮಯ ಅಪಸ್ವರದ ನಾಯಕರ ಭೇಟಿಗೆ ವರಿಷ್ಠರ ಬಳಿ ಇರುವಂತಿದೆ.
ದಿಢೀರ್ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ದಿಲ್ಲಿಗೆ ಹಾರಲು ತಯಾರಿ ನಡೆಸಿದ್ದಾರೆಂಬ ವರದಿಗಳಿವೆ.
ಇನ್ನು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮನ ಬಂದಾಗಲೆಲ್ಲ ದಿಲ್ಲಿಗೆ ದಂಡಯಾತ್ರೆ ಕೈಗೊಂಡಿದ್ದಾರೆ. ಇದೆಲ್ಲದರ ನಡುವೆ ಶೆಟ್ಟರ್ ಮತ್ತು ಕೇಂದ್ರ ಸಚಿವ ಜೋಶಿ ನಡುವಿನ ಸುದೀರ್ಘ ಭೇಟಿ ಊಹಾಪೋಹಗಳಿಗೆ ರೆಕ್ಕೆಪುಕ್ಕ ನೀಡಿವೆ.
ಒಟ್ಟಿನಲ್ಲಿ ರಾಜ್ಯದ ರಾಜಕಾರಣ ಮೇಲ್ನೋಟಕ್ಕೆ ಪ್ರಶಾಂತವಾಗಿರುವಂತೆ ಕಂಡರೂ ಒಳಗೊಳಗೇ ಸಾಧ್ಯತೆಗಳ ಕುದಿಯಲ್ಲಿ ಬೇಯುತ್ತಿರುವುದು ಸ್ಪಷ್ಟ ಎನ್ನುತ್ತವೆ ಮೂಲಗಳು.

