ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು: ವಿಷ್ಣು ವಿಚಾರದಲ್ಲಿ ಸರ್ಕಾರಗಳ ಧೋರಣೆಗಳೇನು ಗೊತ್ತೇ?

ವಿಷ್ಣು ಅಭಿಮಾನಿಗಳನ್ನಗಲಿ 10 ವರ್ಷಗಳ ಬಳಿಕ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ. ಮೈಸೂರು ತಾಲ್ಲೂಕಿನ ಹಾಲಾಳು ಗ್ರಾಮದಲ್ಲಿ  ‘ಡಾ.ವಿಷ್ಣುವರ್ಧನ್ ಸ್ಮಾರಕ ಭವನ’ ಕ್ಕೆ ನಿರ್ಮಾಣವಾಗಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವರ್ಚುವಲ್ ವೇದಿಕೆ ಮೂಲಕ ಮಂಗಳವಾರ ಶಂಕು ಸ್ಥಾಪನೆ ನೆರವೇರಿಸಿದ್ದಾರೆ.

ಕನ್ನಡನಾಡು ಕಂಡ ಅಪ್ರತಿಮ ಕಲಾವಿದ ದಿವಂಗತ ಡಾ. ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣಕ್ಕೆ ಇಂದು ಆನ್ ಲೈನ್ ಮೂಲಕ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಡಾ. ವಿಷ್ಣುವರ್ಧನ್ ತವರು ಜಿಲ್ಲೆ ಮೈಸೂರಿನಲ್ಲಿ, ಅವರ ಸ್ಮಾರಕ ನಿರ್ಮಾಣವಾಗುತ್ತಿರುವುದು ಔಚಿತ್ಯಪೂರ್ಣವಾಗಿದ್ದು, ಸುಸಜ್ಜಿತ ಸ್ಮಾರಕ ನಿರ್ಮಾಣಕ್ಕೆ ನಾವು ಬದ್ಧರಾಗಿದ್ದೇವೆ  ಎಂದು ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ವಿಷ್ಣು ಸ್ಮಾರಕ ವಿಚಾರದಲ್ಲಿ ಕಳೆದ ಹತ್ತು ವರ್ಷಗಳಲ್ಲಾಗಿದ್ದೇನು?

ಸರ್ಕಾರ, ಅಭಿಮಾನಿಗಳು ಮತ್ತು ಕುಟುಂಬದವರ ನಡುವಿನ ಅಸಮಾಧಾನ, ಅಸಹಕಾರಗಳಿಂದ ಒಬ್ಬ ಧೀಮಂತ ನಟ ದಿನನಿತ್ಯದ ಚರ್ಚೆಯ ವಿಷಯವಾಗಿ ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಲೇ ಇತ್ತು. ಈ ನಡುವೆ ವಿಷ್ಣು ಅವರ ಕುಚುಕು ಗೆಳೆಯ ಅಂಬರೀಶ್ ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ ಅಂಬರೀಶ್ ಸ್ಮಾರಕ ನಿರ್ಮಾಣದ ವಿಷಯ ಪ್ರಸ್ತಾಪವಾಗಿತ್ತು. ಆಗಲೂ ಸಹ ವಿಷ್ಣು ಸ್ಮಾರಕ ನಿರ್ಮಾಣದ ಚರ್ಚೆ ಮುನ್ನೆಲೆಗೆ ಬಂದಿತ್ತು.

ಬೆಂಗಳೂರಿನ ಅಭಿಮಾನ್ ಸ್ಟೂಡಿಯೋದಲ್ಲಿ 2009ರಲ್ಲಿ ವಿಷ್ಣು ಅಂತಿಮ ಸಂಸ್ಕಾರವನ್ನು ಮಾಡಲಾಗಿತ್ತು. ಅಭಿಮಾನ್ ಸ್ಟುಡಿಯೋ ನಿರ್ಮಾಣಕ್ಕಾಗಿ 20 ಎಕರೆ ಜಾಗವನ್ನು ಸರ್ಕಾರವೇ ಬಾಲಕೃಷ್ಣವರಿಗೆ ಮಂಜೂರು ಮಾಡಿತ್ತು. ಅದರಲ್ಲಿ 10 ಎಕರೆ ಜಾಗವನ್ನು ಬಾಲಕೃಷ್ಣರ ಮಗ ಮಾರಾಟ ಮಾಡಲು ಮುಂದಾಗಿದ್ದರು. ಹಾಗಾಗಿ ಅಭಿಮಾನ್ ಸ್ಟುಡಿಯೋ ಬಾಲಣ್ಣನ ಕುಟುಂಬದ ವ್ಯಾಜ್ಯವಾಗಿ ಹೈ ಕೋರ್ಟ್ ಮೆಟ್ಟಿಲೇರಿತ್ತು. ಆದರೂ ಅಭಿಮಾನ್ ಸ್ಟುಡಿಯೋದಲ್ಲೇ ಸಂಸ್ಕಾರ ಮಾಡಿದ್ದರಿಂದ ವಿಷ್ಣು ಸ್ಮಾರಕವನ್ನು ಅಲ್ಲಯೇ ಕಟ್ಟಲು ಸರ್ಕಾರ ಮುಂದಾಗಿತ್ತು. ವ್ಯಾಜ್ಯವಿದ್ದರಿಂದ ಹೈ ಕೋರ್ಟ್ ಸ್ಮಾರಕ ನಿರ್ಮಾಣಕ್ಕೆ ತಡೆ ನೀಡಿತ್ತು.

Construct Vishnu Smaraka in Mysore itself, requests Bharati Vishnuvardhan |  ವಿಷ್ಣು ಸ್ಮಾರಕ ನಿರ್ಮಾಣ ಮಾಡಿ; ಸಿಎಂಗೆ ಭಾರತಿ ವಿಷ್ಣುವರ್ಧನ್ ಮನವಿ News in Kannada

ಹೀಗಾಗಿ ವಿಷ್ಣು ಕುಟುಂಬ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡುವಂತೆ ಕೋರಿಕೆ ಸಲ್ಲಿಸಿತ್ತು. ಅದರಂತೆ 2016 ಮೈಸೂರಿನಲ್ಲಿ 5 ಎಕರೆ ಜಾಗವನ್ನು ಸರ್ಕಾರ ಮಂಜೂರು ಮಾಡಿತ್ತು. ಆ ನಡುವೆ, ಅಂಬರೀಶ್‌ ಸಾವನ್ನಪ್ಪಿದ ನಂತರ, ಅಂಬರೀಶ್ ಸ್ಮಾರಕದ ಜೊತೆಗೆ ಕಂಠೀರವ ಸ್ಟುಡಿಯೋದಲ್ಲೇ ವಿಷ್ಣು ಸ್ಮಾರಕವನ್ನು ನಿರ್ಮಿಸುವ ನಿರ್ಧಾರವನ್ನು ಸರ್ಕಾರ ವ್ಯಕ್ತಪಡಿಸಿತ್ತು. ಇದಕ್ಕೆ ಅಭಿಮಾನಿಗಳು ಮತ್ತು ವಿಷ್ಣು ಕುಟುಂಬದಿಂದ ತೀವ್ರ ವಿರೋಧ ವ್ಯಕ್ತವಾದ ಮೇಲೆ ಸರ್ಕಾರ ಆ ವಿಚಾರದಲ್ಲಿ ತುಟಿ ಬಿಚ್ಚಲಿಲ್ಲ.

ಹೀಗೆ ಅವರ್ ಬಿಟ್ ಇವರ್ ಬಿಟ್ ಇನ್ಯಾರು ಎಂಬಂತೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡಿಸುತ್ತಾ ಸರ್ಕಾರ ಕಣ್ಣಾಮುಚ್ಚಾಲೆಯ ಆಟವಾಡುತ್ತಿರುವುದನ್ನು ನೋಡಿ ಬೇಸರಗೊಂಡ ಅಭಿಮಾನಿಯೊಬ್ಬ, ತಾನೆ ಸ್ಮಾರಕಕ್ಕೆ ಜಾಗ ಕೊಡುವುದಾಗಿ ಹೇಳಿ ಸರ್ಕಾರದ ಮೇಲಿನ ಆಕ್ರೋಶ ವ್ಯಕ್ತಪಡಿಸಿದ್ದ. ಇತ್ತ ಮೈಸೂರಿನಲ್ಲಿ ರೈತರು ತಮ್ಮ ಜಾಗವನ್ನು ಬಿಟ್ಟುಕೊಡಲು ನಿರಾಕರಿಸಿ, ಕೋರ್ಟ್ ಮೆಟ್ಟಿಲೇರಿದ್ದರು.

Foundation work of Vishnu Memorial to begin soon: Bharathi – Mysuru Today

ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾದರೆ ರೈತರ ಅನುಮತಿಯೊಂದಿಗೆ, ಆ ಜಾಗದ ಮಾರುಕಟ್ಟೆ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚು ಬೆಲೆಕೊಟ್ಟು, ಅದು ಕೃಷಿ ಭೂಮಿಯಾಗಿದ್ದಲ್ಲಿ ಬೇರೆಡೆ ಭೂಮಿಯನ್ನೂ ಕೊಟ್ಟು ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಕಾನೂನು ಹೇಳುತ್ತದೆ. ಆದರೆ ಆ ಜಾಗಕ್ಕೆ ಇದಾವುದೂ ಅಪ್ಲೈ ಆಗಿಲ್ಲ. ಕಡಿಮೆ ಬೆಲೆ ಕೊಟ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಹೆಚ್ಚಿನ ಕಾಂಪೆನ್ಸೇಷನ್ ಕೊಡಬೇಕು ಎಂದು ಆ ಭೂಮಿಯ ಮಾಲೀಕರಾದ ರೈತರು ಕೋರ್ಟ್‍ನಲ್ಲಿ ಅಫಿಡವಿಟ್ ಸಲ್ಲಿಸಿದ್ದರು. ಈ ಮಧ್ಯೆ ವಿಷ್ಣು ಅಳಿಯ ಅನಿರುದ್ ಮೈಸೂರಿನಲ್ಲಿ ದಿಢೀರನೆ ಭೂಮಿ ಪೂಜೆಗೆ ಮುಂದಾಗಿದ್ದರು. ಆ ಸಂದರ್ಭದಲ್ಲಿ ಮತ್ತಷ್ಟು ವಿವಾದ ಸೃಷ್ಟಿಸಿತ್ತು.

ಸದ್ಯ ವ್ಯಾಜ್ಯಗಳೆಲ್ಲಾ ಮುಗಿದು ವಿಷ್ಣು ಸ್ಮಾರಕಕ್ಕೆ ಗ್ರೀನ್‌ ಸಿಗ್ನಲ್‌ ಸಿಕ್ಕಿದ್ದರಿಂದಾಗಿ ಇಂದು ಸಿಎಂ ಯಡಿಯೂರಪ್ಪನವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಸ್ಮಾರಕ ನಿರ್ಮಾಣ ಕೆಲಸಕ್ಕೆ ಚಾಲನೆ ನೀಡಿದ್ದಾರೆ.

– ಸೋಮಶೇಖರ್ ಚಲ್ಯ


ಇದನ್ನೂ ಓದಿ: ನರ್ಮದಾ ಕಣಿವೆ: ಮುಳುಗಿದ ಜನ ಜೀವನ; ಪ್ರವಾಹದ ನೀರಿನ ಮಧ್ಯೆಯೇ ಉಪವಾಸ ಪ್ರತಿಭಟನೆ

Spread the love

Leave a Reply

Your email address will not be published. Required fields are marked *