ಸಿಬಿಐ ಮಾಜಿ ನಿರ್ದೇಶಕ ಅಶ್ವನಿ ಕುಮಾರ್ ಶವವಾಗಿ ಪತ್ತೆ: ಆತ್ಮಹತ್ಯೆ ಇರಬಹುದು ಎಂದ ಪೊಲೀಸರು!

ಮಣಿಪುರ ಮತ್ತು ನಾಗಾಲ್ಯಾಂಡ್‌ನ ಮಾಜಿ ಗವರ್ನರ್ ಮತ್ತು  ಸಿಬಿಐ ಮಾಜಿ ನಿರ್ದೇಶಕ ಅಶ್ವನಿ ಕುಮಾರ್ (70) ಅವರು ಶಿಮ್ಲಾದ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಿಪಡಿಸಿದ್ದಾರೆ.

ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ಶವವನ್ನು ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಚೋಟಾ ಶಿಮ್ಲಾದ ಪೊಲೀಸ್ ಠಾಣಾ ಪೊಲೀಸರು ವಿಚಾರಣಾ ಕ್ರಮಗಳನ್ನು ಪ್ರಾರಂಭಿಸಿದ್ದಾರೆ.

ಅಶ್ವನಿ‌ ಕುಮಾರ್ ಅವರು 1973 ರಲ್ಲಿ ಭಾರತೀಯ ಪೊಲೀಸ್ ಪಡೆಗೆ ಸೇರಿದ್ದರು. ನಂತರ 1985 ರಲ್ಲಿ ಶಿಮ್ಲಾದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಹೊಸದಾಗಿ ರಚಿಸಿದ ವಿಶೇಷ ಸಂರಕ್ಷಣಾ ಗುಂಪು (ಎಸ್‌ಪಿಜಿ)ಗೆ ಅವರನ್ನುನೇಮಿಸಲಾಗಿತ್ತು. ಅಲ್ಲಿ ಅವರು 1990 ರವರೆಗೆ ಕಾರ್ಯನಿರ್ವಹಿಸಿದ್ದರು.  ಆಗಸ್ಟ್ 2006 ರಲ್ಲಿ, ಅವರನ್ನು ಹಿಮಾಚಲ ಪ್ರದೇಶದ ಡಿಜಿಪಿಯಾಗಿ ನೇಮಿಸಲಾಯಿತು. ನಂತರದಲ್ಲಿ ಜುಲೈ 2008 ರಲ್ಲಿ, ಸಿಬಿಐ ನಿರ್ದೇಶಕರಾಗಿ ನೇಮಕಗೊಂಡು 2010 ರಲ್ಲಿ ನಿವೃತ್ತರಾದರು.

ಅಶ್ವನಿ‌ ಕುಮಾರ್‌ ಮಾರ್ಚ್ 2013 ರಿಂದ ಜುಲೈ 2014 ರವರೆಗೆ ನಾಗಾಲ್ಯಾಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು ಮತ್ತು ಮಣಿಪುರದ ರಾಜ್ಯಪಾಲರಾಗಿದ್ದರು. ಆದರೆ 2014 ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅವರನ್ನು ರಾಜ್ಯಪಾಲ ಹುದ್ದೆಯಿಂದ ತೆಗೆದುಹಾಕಲಾಯಿತು.

ಅಶ್ವನಿ ಕುಮಾರ್ ಸಿಬಿಐ ಮುಖ್ಯಸ್ಥರಾಗಿದ್ದ ಅಧಿಕಾರವಧಿಯಲ್ಲಿಯೇ ಸಿಬಿಐ ಈಗಿನ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಜುಲೈ 2010 ರಲ್ಲಿ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಬಂಧಿಸಿತ್ತು. ಆಗ ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರ್ಕಾರದಲ್ಲಿ ಅಮಿತ್‌ ಶಾ ಅವರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಸಚಿವರಾಗಿದ್ದರು. ಈ ಪ್ರಕರಣದಲ್ಲಿ ಅಮಿತ್‌ ಶಾ ಸೇರಿದಂತೆ ವಿಚಾರಣೆಯನ್ನು ಎದುರಿಸಿದ 22 ಆರೋಪಿಗಳನ್ನು 2018 ರ ಡಿಸೆಂಬರ್‌ನಲ್ಲಿ ಅಲಹಾಬಾದ್ ಹೈಕೋರ್ಟ್ ಖುಲಾಸೆಗೊಳಿಸಿತು.


ಇದನ್ನೂ ಓದಿ: ದೇಶದಲ್ಲಿ ಅತ್ಯಾಚಾರ, ಕೊಲೆ, ದೌರ್ಜನ್ಯ ಹೆಚ್ಚಾಗಿವೆ, ಚೌಕಿದಾರ ಎಲ್ಲಿದ್ದಾರೆ: ಸಿದ್ದರಾಮಯ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights