ಶಿವಸೇನೆ ಪುಂಡರಿಂದ ಮತ್ತೆ ನಾಡದ್ರೋಹಿ ಘೋಷಣೆ : ಬೆಳಗಾವಿಯಲ್ಲಿ ಕನ್ನಡ ಧ್ವಜ ತೆಗೆಯಲು ಯತ್ನ!
ಮಹಾರಾಷ್ಟ್ರ ಬೆಳಗಾವಿ ಗಡಿಯಲ್ಲಿ ಶಿವಸೇನೆ ಪುಂಡರು ಮತ್ತೆ ಅಟ್ಟಹಾಸ ಮೆರೆದಿದ್ದು ನಾಡದ್ರೋಹಿ ಘೋಷಣೆ ಕೂಗುವ ಮೂಲಕ ಬೆಳಗಾವಿಯಲ್ಲಿ ಕನ್ನಡ ಧ್ವಜ ತೆಗೆಯಲು ಯತ್ನಿಸಿದ್ದಾರೆ.
ಬೆಳಗಾವಿಯಲ್ಲಿ ಶಾಂತಿ ಕದಡುವ ಕೆಲಸಕ್ಕೆ ಮುಂದಾದ ಶಿವಸೇನೆ ಕಾರ್ಯಕರ್ತರು ನಮ್ಮ ಕನ್ನಡ ಧ್ವಜವನ್ನು ತೆಗೆದು ತಮ್ಮ ಧ್ವಜವನ್ನು ಹಾರಿಸಲು ಮುಂದಾಗಿದ್ದಾರೆ. ಈ ವೇಳೆ ಶಿವಸೇನೆಯ ಪುಂಡರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ್ದಾರೆ.
ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಮೊನ್ನೆಯಷ್ಟೇ ‘ಬೆಳಗಾವಿ ನಮ್ಮದು ನಮ್ಮದಾಗುವವರೆಗೂ ಹೋರಾಡೋಣ’ ಎನ್ನುವ ಟ್ವೀಟ್ ಮಾಡಿ ಕನ್ನಡಿಗರನ್ನು ಕೆರಳಿದ್ದರು. ನಿಪ್ಪಾಣಿ, ಬೆಳಗಾವಿ, ಕಾರವಾರ ಕರ್ನಾಟಕ ಆಕ್ರಮಿತ ಪ್ರದೇಶಗಳು. ನಮಗೆ ಈ ಪ್ರದೇಶಗಳು ಸೇರುವವರೆಗೂ ಹೋರಾಡೋಣ ಎಂದು ಟ್ವೀಟ್ ಮಾಡಿದ್ದರು.
ಈ ಹೇಳಿಕೆ ಹಿನ್ನೆಲೆಯಲ್ಲಿ ಶಿವಸೇನೆ ಪುಂಡರು ಮಹಾರಾಷ್ಟ್ರ ಬೆಳಗಾವಿ ಗಡಿಗೆ ನುಗ್ಗಿ ತಮ್ಮ ಭಗವಾ ಧ್ವಜ ಸ್ತಂಭ ನೆಡುವುದಾಗಿ ಗಲಾಟೆ ನಡೆಸುತ್ತಿದ್ದಾರೆ. ಪೊಲೀಸರನ್ನು ತಳ್ಳಿ ಗಲಾಟೆ ಮಾಡಿ ರಾಜ್ಯ ಪ್ರವೇಶಕ್ಕೆ ಪ್ರಯತ್ನಿಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, “ ನಾವು ಗಡಿ ಭಾಗಕ್ಕೆ ಹೋಗುತ್ತೇವೆ. ಶಿವಸೇನೆಯನ್ನು ಮಟ್ಟಹಾಕುತ್ತೇವೆ. ಒಂದು ನರಪಿಳ್ಳೆಯನ್ನು ಪೊಲೀಸರು ಒಳಬಿಡಬಾರದು. ಅವರನ್ನು ಜೈಲಿಗೆ ಹಾಕಬೇಕು. ನಾವು ಅಲ್ಲಿಗೇ ಹೋಗಿ ಹೋರಾಟ ಮಾಡುತ್ತೇವೆ. ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ”ಎಂದು ವಾಟಾಳ್ ಕಿಡಿ ಕಾರಿದ್ದಾರೆ.