ಸರ್ಕಾರಿ ಅಧಿಕಾರಿಗಳು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದಾರೆ: ಹೆಚ್‌ಡಿ ರೇವಣ್ಣ
ಹಾಸನ ಜಿಲ್ಲೆಯ ಕೆಲವು ಅಧಿಕಾರಿಗಳು ಬಿಜೆಪಿ ಮುಖಂಡರ ಅಧೀನದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಬಿಜೆಪಿಯ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್‌ಡಿ ರೇವಣ್ಣ ಆರೋಪಿಸಿದ್ದಾರೆ.
ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಮೀಸಲಾತಿ ಮತ್ತು ಚುನಾವಣೆ ದಿನಾಂಕ ನಿಗದಿಗೆ ಸಂಬಂಧಿಸಿದಂತೆ ಬಿಜೆಪಿ ಏಜೆಂಟರಂತೆ ಅಧಿಕಾರಿಗಳು ವರ್ತಿಸಿದ್ದಾರೆ. ಎಲ್ಲ ಸರ್ಕಾರಿ ಕಚೇರಿಗಳು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ತೆರೆದರೆ, ಹಾಸನ ಜಿಲ್ಲಾಧಿಕಾರಿ ಕಚೇರಿ ತಡೆ ರಾತ್ರಿವರೆಗೂ ತೆರೆದಿರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಸೇರಿದಂತೆ ಜಿಲ್ಲೆಯ ಅನೇಕ ಸರ್ಕಾರಿ ಅಧಿಕಾರಿಗಳು ಬಿಜೆಪಿ ಮುಖಂಡರ ಕುಣಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕ ತೆರಿಗೆ ಹಣದಿಂದ ಸಂಬಳ ಪಡೆದ ಅಧಿಕಾರಿಗಳು ನ್ಯಾಯಯುತವಾಗಿ ಕೆಲಸ ಮಾಡಬೇಕು. ಆದರೆ, ಬಿಜೆಪಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.
ತರಾತುರಿಯಲ್ಲಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿದೆ. ಚುನಾವಣೆಗೆ 7 ದಿನ ಮೊದಲು ಸದಸ್ಯರಿಗೆ ನೋಟಿಸ್ ಕಳಿಸಬೇಕು. ಆದರೆ, ಪಕ್ಷದ ಬಹುತೇಕ ಸದಸ್ಯರಿಗೆ ಇನ್ನೂ ನೋಟಿಸ್ ತಲುಪಿಲ್ಲ. ಅ. 8 ರಂದು ಮೀಸಲಾತಿ ಪ್ರಕಟಗೊಂಡಿದ್ದು, ಎರಡು ದಿನಗಳಲ್ಲಿ ಚುನಾವಣೆ ದಿನಾಂಕ (ಅ. 16) ನಿಗದಿಪಡಿಸಲಾಗಿದೆ. ಸಂಸದ ಪ್ರಜ್ವಲ್‌ಗೂ ನೋಟಿಸ್ ತಲುಪಿಲ್ಲ. ಚುನಾವಣಾ ಆಯೋಗದಿಂದ ಅ. 8ರ ಸಂಜೆ 6 ಗಂಟೆಗೆ ಮೀಸಲಾತಿ ಪಟ್ಟಿ ಪ್ರಕಟಿಸಿ, ಕೇವಲ ಮೂರು ಗಂಟೆಯಲ್ಲಿ ಎಲ್ಲರಿಗೂ ತಲುಪಿ ಚುನಾವಣೆ ದಿನಾಂಕ ನಿಗದಿಯಾಗುವ ಮಟ್ಟಕ್ಕೆ ಬಂದು ನಿಲ್ಲುತ್ತದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಪ್ರಬಲವಾಗಿಲ್ಲದ ಕಡೆ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ. ಮೀಸಲಾತಿ ಪಟ್ಟಿ ಪ್ರಕಟ ವಿರೋಧಿಸಿ ನ್ಯಾಯಾಲಯದ ಮೊರೆ ಹೋಗಿದ್ದು, ಕೋರ್ಟ್ ಆದೇಶಕ್ಕಾಗಿ ಕಾಯಲಾಗುತ್ತಿದೆ. ರೋಸ್ಟರ್ ಪ್ರಕಾರ ಹಾಸನ ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಹದಿನೈದು ವರ್ಷದ ನಂತರ ನಿಗದಿಯಾಗಬೇಕು. ಅರಸೀಕೆರೆ ನಗರಸಭೆ ಅಧ್ಯಕ್ಷ ಸ್ಥಾನ ಎಸ್‌ಟಿಗೆ ಮೀಸಲಾಗಿದೆ. ಇದರಲ್ಲೂ ನಿಯಮ ಪಾಲನೆ ಆಗಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಜಾಲತಾಣಿಗರಿಂದ ಅಜಿತ್ ಹನುಮಕ್ಕನವರ್ ಟ್ರೋಲ್; ಟ್ರೆಂಡಿಂಗ್‌ನಲ್ಲಿ “ಏಜೆಂಟ್ ಅಜಿತ್”