ತನ್ನ ತವರಿನಲ್ಲೇ ಸಿಎಂ ಕಾರ್ಯಕ್ರಮಕ್ಕೆ ಭಾಗವಹಿಸದ ಈಶ್ವರಪ್ಪ: ಬಿಎಸ್‌ವೈ ಮೇಲಿನ ಮುನಿಸೇ ಕಾರಣವಾ?

ಶಿವಮೊಗ್ಗ ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರೊಂದಿಗೆ ಬಿಜೆಪಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಅಂತರ ಕಾಯ್ದುಕೊಂಡಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ಈಶ್ವರಪ್ಪನವರು ಭಾಗವಹಿಸದೇ ಇರುವುದು ಬಿಎಸ್‌ವೈ ಹಾಗೂ ಈಶ್ವರಪ್ಪ ನಡುವೆ ಒಳ ಮುನಿಸು ಇದೆ ಎಂಬ ಚರ್ಚೆಗೆ ಗ್ರಾಸವಾಗಿದೆ.

ಸಿಎಂ ಯಡಿಯೂರಪ್ಪ ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ಬಿಎಸ್‌ವೈ ಭಾಗವಹಿಸಲಿದ್ದಾರೆ. ಆದರೆ, ಶಿವಮೊಗ್ಗ ಜಿಲ್ಲೆಯವರೇ ಆದ ಈಶ್ವರಪ್ಪನವರು ಸಿಎಂ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ ಮನೆಯಲ್ಲೇ ಉಳಿದಿದ್ದಾರೆ.

ನಿಗದಿತ ಸಾಹಿತ್ಯ ಗ್ರಾಮ ಮತ್ತು ಸರ್ಕಾರಿ ನೌಕರರ ಸಂಘದ ಸಭಾಂಗಣ ಉದ್ಘಾಟನೆಯನ್ನು ಮುಖ್ಯಮಂತ್ರಿಗಳು ನೆರೆವೇರಿಸಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರೂ, ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಈಶ್ವರಪ್ಪ ಅವರು ಗೈರುಹಾಜರಾಗಿದ್ದಾರೆ.

ಇದನ್ನೂ ಓದಿ: ಹೆಣದ ಮೇಲೆ ರಾಜಕಾರಣ ಮಾಡುವುದು ಬಿಜೆಪಿಯ ಚಾಳಿ: ಜಿ ಪರಮೇಶ್ವರ್

ಇಂದು ತಮ್ಮ ನಿವಾಸದಲ್ಲಿ ಹಬ್ಬ ಮತ್ತು ಹಿರಿಯರ ಪೂಜೆ ನೆಪದಲ್ಲಿ ಸಿ.ಎಂ ಜೊತೆ ವೇದಿಕೆ ಹಂಚಿಕೊಳ್ಳದೆ ಮನೆಯಲ್ಲೆ ಉಳಿದ ಈಶ್ವರಪ್ಪನವರ ನಡೆ ಕುತೂಹಲ ಹುಟ್ಟಿಸಿದೆ. ಈ ಇಬ್ಬರೂ ನಾಯಕರ ನಡುವಿನ ರಾಜಕೀಯ ವೈಷಮ್ಯ ಕುರಿತು ಪಕ್ಷದ ವಲಯದಲ್ಲೆ ತರಾವರಿ ಮಾತುಗಳು ಕೇಳಿಬರುತ್ತಿವೆ.

ಜಿಲ್ಲೆಯ ಎಂ.ಎಡಿಬಿ, ನಗರಾಭಿವೃದ್ಧಿ ಪ್ರಾಧಿಕಾರ, ಕಾಡಾ ಗಳಿಗೆ ಅಧ್ಯಕ್ಷರ ನೇಮಕಾತಿ ಹಾಗೂ ವಿವಿಧ ನಿಗಮಗಳಿಗೆ ಸದಸ್ಯರ ನೇಮಕಾತಿ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ತಮ್ಮನ್ನು ನಿರ್ಲಕ್ಷಿಸಲಾಗಿದೆ. ಪಕ್ಷದ ಸಕ್ರಿಯ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂಬ ಅಸಮಾಧಾನ ಈಶ್ವರಪ್ಪ ಅವರ ಮುನಿಸಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಜಿಲ್ಲೆಯ ವಿಚಾರಗಳಲ್ಲಿ ಸಂಸದ ಬಿ.ವೈ ರಾಘವೇಂದ್ರ ಮತ್ತು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಾಕ್ಷರಿ ಅವರ ಮಾತಿಗೆ ಹೆಚ್ಚಿನ ಮನ್ನಣೆ ಸಿಗುತ್ತಿರುವುದು ಈಶ್ವರಪ್ಪ ಅವರನ್ನು ಕೆರಳಿಸಿದೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ. ಇದೇ ಕಾರಣಕ್ಕೆ ಇಂದು ಈಶ್ವರಪ್ಪನವರು ಇಂದಿನ ಸಿ.ಎಂ ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ.


ಇದನ್ನೂ ಓದಿ: ಏಕತ್ವಂ: ಕಂಪನಿ ಜಾಹೀರಾತು ಮಾತ್ರವಲ್ಲ, ಭಾರತೀಯ ಭ್ರಾತೃತ್ವದ ಸಂಕೇತ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights