ಟ್ರಂಪ್ ಎಂದರೆ ಟ್ರಂಪ್ ಮಾತ್ರವಲ್ಲ! ಅಮೆರಿಕಾ ಗೆಲುವು ಮತ್ತು ಸೋಲಿನ ಕಂದಕಗಳೇನು?

ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವು ಸಾಧಿಸುವ ಅವಕಾಶ ಕಡಿಮೆಯಾಗುತ್ತಿದೆ.

ಹಾಗಾದರೆ, ಈ ಬೆಳವಣಿಗೆಯನ್ನು ಟ್ರಂಪ್ ಸೋಲನ್ನು ಆತ ಪ್ರತಿನಿಧಿಸುತ್ತಿದ್ದ ಬಿಳಿಯ ಮೇಲರಿಮೆ, ಸಾಮ್ರಾಜ್ಯಶಾಹಿ ಧೋರಣೆ, ಪರಿಸರ ವಿರೋಧಿ , ವಿಜ್ಞಾನ ವಿರೋಧಿ ಹಾಗೂ ಎಲ್ಲಾ ಜನವಿರೋಧಿ ಧೋರಣೆಗಳ ಸೋಲು ಎಂದು ಅರ್ಥಮಾಡಿಕೊಳ್ಳಬಹುದೇ?

ಅಥವಾ ಆ ಧೋರಣೆಗಳಿಗೆ ಅಮೆರಿಕಾ ಸಮಾಜ ಮನ್ನಣೆ ಕೊಡಲಿಲ್ಲ ಎಂದು ಅರ್ಥಮಾಡಿಕೊಳ್ಳಬಹುದೇ?

ಖಂಡಿತಾ ಇಲ್ಲ…

ಟ್ರಂಪ್ ಎಂದರೆ ಒಬ್ಬ ವ್ಯಕ್ತಿ ಮಾತ್ರವಲ್ಲ. ಟ್ರಂಪ್ ನ ಉಮೇದುವಾರಿಕೆಯನ್ನು ರಿಪಬ್ಲಿಕನ್ ಪಕ್ಷದೊಳಗೆ ಶೇ. 93ಜನ ಬೆಂಬಲಿಸಿದ್ದರು. ಹೀಗಾಗಿ ಟ್ರಂಪ್ ಎಂದರೆ ಇವತ್ತಿನ ಇಡೀ ರಿಪಬ್ಲಿಕನ್ ಪಕ್ಷ.

ಮಾತ್ರವಲ್ಲ. ಟ್ರಂಪ್ ಎಂದರೆ ಅಮೇರಿಕಾದ ಸಮಾಜದಲ್ಲಿ ನಾಗರಿಕ ಮುಸುಕನ್ನು ಬಿಸುಟು ನಿಂತ ಎಲ್ಲಾ ದಮನಕಾರಿ ಧೋರಣೆಗಳ ಬಹಿರಂಗ ರೂಪ.

ಈ ಧೋರಣೆಗಳು ಅಮೆರಿಕ ಸಮಾಜದಲ್ಲಿ ಎಷ್ಟು ಆಳವಾಗಿ ಬೇರೂರಿವೆ, ಅಮೆರಿಕ ಸಮಾಜ ಎಷ್ಟು ಧ್ರುವೀಕರಣಗೊಂಡಿದೆ ಎಂಬುದನ್ನು ಈ ಚುನಾವಣೆ ನಿಚ್ಚಳವಾಗಿ ಸಾಬೀತುಮಾಡಿದೆ.

ಕೆಲವು ಉದಾಹರಣೆಗಳು:

– ಟ್ರಂಪ್ ನ ನೀತಿಗಳಿಂದಾಗಿ, ಅಮೇರಿಕಾದ ಆರ್ಥಿಕತೆ ಕುಸಿಯುತ್ತಿದ್ದರೂ, ಕೋವಿಡ್ ಸಾಂಕ್ರಾಮಿಕದಿಂದ ಈಗಾಗಲೇ 3 ಲಕ್ಷ ಅಮೆರಿಕನ್ನು ಪ್ರಾಣ ಕಳೆದುಕೊಂಡಿದ್ದರೂ ಟ್ರಂಪ್ ಗೆ ಈಗಾಗಲೇ ಶೇ. 48 ರಷ್ಟು ಓಟುಗಳು ಬಿದ್ದಿವೆ.

ಅಂದರೆ ಹೆಚ್ಚು ಕಡಿಮೆ ಅಮೇರಿಕಾದ ಅರ್ಧದಷ್ಟು ಜನರು ಟ್ರಂಪ್ ನೀತಿಗಳನ್ನು ಬೆಂಬಲಿಸುತ್ತಿದ್ದಾರೆ ಎಂದಾಯಿತು!

– ಈವರೆಗೆ ಟ್ರಂಪಿನ ಪರವಾಗಿ 6.9 ಕೋಟಿ ಅಮೆರಿಕನ್ನರು ಮತಹಾಕಿದ್ದಾರೆ.

ಇದು ಆತ 2016ರಲ್ಲಿ ಗಳಿಸಿದ ಮತಗಳಿಗಿಂತ 50 ಲಕ್ಷ ಜಾಸ್ತಿ.. !

ಹಾಗೂ ಇದು ಈವರೆಗಿನ ಅಮೇರಿಕಾದ ಇತಿಹಾಸದಲ್ಲೇ ಸೋತ (ಸೋಲಬ‌ಹುದಾದ) ಅಧ್ಯಕ್ಷೀಯ ಅಭ್ಯರ್ಥಿ ಯೊಬ್ಬ ಪಡೆದುಕೊಂಡ ಅತಿ ಹೆಚ್ಚು ಮತಗಳಿಕೆಯಾಗಿದೆ.

– ಟ್ರಂಪ್ ಅವಧಿಯಲ್ಲಿ ಕರಿಯರ ವಿರುದ್ಧ ನಿರಂತರ ದಾಳಿಗಳು ನಡೆದರೂ, ಟ್ರಂಪ್ ಖುದ್ದಾಗಿ ಬಿಳಿ ಭಯೋತ್ಪಾದಕರ ಬೆಂಬಲಕ್ಕೆ ನಿಂತಿದ್ದರೂ, ಮೆಕ್ಸಿಕೋದಿಂದ ಬಡ ಹಿಸ್ಪಾನಿಕರ ವಲಸೆಯನ್ನು ಅತ್ಯಂತ ಕ್ರೂರಕ್ರಮಗಳಿಂದ ತಡೆಗಟ್ಟಿ ದರೂ….

ಈ ಬಾರಿ ಟ್ರಂಪಿಗೆ ಶೇ. 12 ರಷ್ಟು ಕರಿಯರೂ, ವಿಶೇಷವಾಗಿ ಯುವಜನರು ಮತ್ತು ಶೇ. 34 ರಷ್ಟು ಹಿಸ್ಪಾನಿಕರು ಓಟು ಹಾಕಿದ್ದಾರೆಂದು ಪ್ರಾರಂಭಿಕ ವರದಿಗಳು ಹೇಳುತ್ತಿವೆ!

ಇದು 2016 ರಲ್ಲಿ ಟ್ರಂಪ್ ಈ ಸಮುದಾಯಗಳಿಂದ ಪಡೆದ ಮತಗಳಿಗಿಂತ ಹೆಚ್ಚು .

ಇದಕ್ಕೆ ಅಸಹಾಯಕತೆಯೂ ಕಾರಣವಿರಬಹುದು….ಇಟ್ಟ ವಿಶ್ವಾಸಕ್ಕೆ ತಕ್ಕಂತೆ ನಡೆದುಕೊಳ್ಳದ ಡೆಮಾಕ್ರಾಟರ ಬಗೆಗಿನ ಅವಿಶ್ವಾಸವೂ ಕಾರಣವಾಗಿರಬಹುದು

– ಅಷ್ಟು ಮಾತ್ರವಲ್ಲ. ಶೇ. 41 ರಷ್ಟು ಜನ ಟ್ರಂಪ್ ಅಧಿಕಾರಕ್ಕೆ ಬಂದ ಮೇಲೆ ತಮ್ಮ ಬದುಕಿನ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳುತ್ತಿದ್ದರೆ ಶೇ. 20ರಷ್ಟು ಜನ ಮಾತ್ರ ಬದುಕು ಅವನತಿಯತ್ತ ಜಾರುತ್ತಿದೆ ಎಂದು ಹೇಳಿದ್ದಾರಂತೆ ..!

ಕರಿಯರ ಅಸರ್ಷನ್ ಹೆಚ್ಚುತ್ತಿದ್ದಂತೆ, ಬಿಳಿಯರಲ್ಲಿ ಹೆಚ್ಚುತ್ತಿರುವ ಅಭದ್ರತೆ ತಮ್ಮ ಬದುಕಿನ ವಾಸ್ತವಗಳನ್ನೂ ಮೀರಿ, ರಿಪಬ್ಲಿಕನ್ನರ ಪರವಾಗಿ ಹಾಗೂ ಟ್ರಂಪ್ ಪರವಾಗಿ ನಿಲ್ಲುವಂತೆ ಮಾಡುತ್ತಿರಬಹುದೇ….

– ಜೊತೆಗೆ ಒಂದು ವೇಳೆ ಅಧ್ಯಕ್ಷಗಿರಿ ಬಿಡೆನ್ ಪಾಲಾದರೂ ಈವರೆಗಿನ ಟ್ರೆಂಡ್ ಹೇಳುವಂತೆ ಅಧ್ಯಕ್ಷ ತೆಗೆದುಕೊಳ್ಳುವ ಯಾವುದೇ ನೀತಿ ಹಾಗೂ ಕ್ರಮಗಳನ್ನು ಅನುಮೋದಿಸಬೇಕಾದ ಸೆನೆಟ್ಟು ರಿಪಬ್ಲಿಕನ್ನರ ತೆಕ್ಕೆಗೆ ಹೋದಂತಿದೆ.

ಹಾಗೊಂದು ವೇಳೆ ಆದಲ್ಲಿ ಡೆಮಾಕ್ರಾಟ್ ಅಧ್ಯಕ್ಷರು ತಮಗೆ ಬೇಕಾದ ಕ್ಯಾಬಿನೆಟ್ಟನ್ನು ರಚಿಸಲು ಕಷ್ಟವಾಗಬಹುದು ..

ಇದು ಪ್ಯಾಸಿಸಂ ಅಥವಾ ಬಹುಸಂಖ್ಯಾತ ದುರಭಿಮಾನವಾದಗಳು ಮಾಡುವ ಆಳವಾದ ಪರಿಣಾಮಗಳು..

ಅವುಗಳನ್ನು ಕೇವಲ ಚುನಾವಣೆಯಲ್ಲಿ ಸೋಲಿಸಲಾಗುವುದಿಲ್ಲ.

ಪ್ರಗತಿಪರ ಹಾಗು ಜನಮುಖಿ ಸಿದ್ಧಾಂತ, ರಾಜಕೀಯ ಹಾಗೂ ಕಾರ್ಯಕ್ರಮಗಳ ಮೂಲಕ ಅದರ ವಿರುದ್ಧ ಸಮಾಜದಲ್ಲಿ ನಿರಂತರ ಹಾಗು ಸುದೀರ್ಘ ಸಮರ ನಡೆಸದೆ ಟ್ರಂಪಿಸಮ್ಮನ್ನು ಸೋಲಿಸಲಾಗುವುದಿಲ್ಲ..

– ಶಿವಸುಂದರ್


ಇದನ್ನೂ ಓದಿ: ಭಾರೀ ಕುತೂಹಲ ಕೆರಳಿಸಿದ ಅಮೇರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ : ಟ್ರಂಪ್-ಬಿಡೆನ್ ನಡುವೆ ತೀವ್ರ ಪೈಪೋಟಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights