ಮುಂಬರುವ ಉಪ ಚುನಾವಣೆಯಲ್ಲಿ ಬಸವಕಲ್ಯಾಣ ಕ್ಷೇತ್ರದಿಂದ ಸಿಎಂ ಪುತ್ರ ವಿಜಯೇಂದ್ರ ಕಣಕ್ಕೆ..?

ರಾಜ್ಯ ಬಿಜೆಪಿಯಲ್ಲಿ ಗಟ್ಟಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವ ಸಿಎಂ ಪುತ್ರ ವಿಜಯೇಂದ್ರ ಅವರನ್ನು ಅಸೆಂಬ್ಲಿಗೆ ಕರೆತರುವ ಪ್ರಯತ್ನ ಚಾಲೂ ಆಗಿದೆ. ಮುಂಬರುವ ಉಪ ಚುನಾವಣೆಯಲ್ಲಿ ಬಸವಕಲ್ಯಾಣ ಕ್ಷೇತ್ರದಿಂದ ವಿಜಯೇಂದ್ರ ಅವರನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿಯಲ್ಲಿ ಚಿಂತನೆ ಆರಂಭವಾಗಿದೆ ಎಂದು ವರದಿಗಳು ಹೇಳುತ್ತಿವೆ.

ಕಲ್ಯಾಣ ಕರ್ನಾಟಕದ ಕ್ಷೇತ್ರವೊಂದರಿಂದ ವಿಜಯೇಂದ್ರ ಅವರನ್ನು ಗೆಲ್ಲಿಸಿಕೊಂಡು ಬರುವುದರಿಂದ ಆ ಭಾಗದಲ್ಲಿ ಬಿಜೆಪಿಯ ನೆಲೆ ಮತ್ತಷ್ಟು ಸುಭದ್ರವಾಗಲಿದೆ ಎಂಬುದು ಈ ವಿಚಾರದ ಪರ ಇರುವವರ ವಾದವಾಗಿದೆ.ಈಗಾಗಲೇ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರುವ ವಿಜಯೇಂದ್ರ ಅವರು 2018ರಲ್ಲಿಯೇ ಪಕ್ಷದ ಟಿಕೆಟ್ ಆಕಾಂಕ್ಷಯಾಗಿದ್ದರು. ರಾಜ್ಯ ರಾಜಕಾರಣದಲ್ಲಿ ಸುದೀರ್ಘ ಇನಿಂಗ್ಸ್ ಆಡುವ ಇರಾದೆ ಅವರಿಗೆ ಇರುವುದು ರಹಸ್ಯದ ವಿಚಾರವೇನೂ ಅಲ್ಲ.

ಈ ಮಧ್ಯೆ ಕೆಆರ್‍ ಪೇಟೆಯಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸುವಲ್ಲಿ ಯಶಸ್ವಿಯಾಗಿದ್ದ ವಿಜಯೇಂದ್ರ ಈಗ ಶಿರಾದಲ್ಲೂ ಅಂತಹುದೇ ಸಾಧನೆಯ ನಿರೀಕ್ಷೆಯಲ್ಲಿದ್ದಾರೆ.ಮತಗಟ್ಟೆ ಸಮೀಕ್ಷೆಗಳು ಹೇಳುವಂತೆಯೇ ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡರು ಗೆಲುವು ಸಾಧಿಸಿದ್ದೇ ಆದಲ್ಲಿ ಪಕ್ಷದಲ್ಲಿ ವಿಜಯೇಂದ್ರ ಅವರ ವರ್ಚಸ್ಸು ಇನ್ನಷ್ಟು ಹೆಚ್ಚುವುದರಲ್ಲಿ ಸಂಶಯವೇ ಇಲ್ಲ.

ಒಂದು ವೇಳೆ ಶಿರಾ ಗೆಲ್ಲುವಲ್ಲಿ ಬಿಜೆಪಿ ಯಶಸ್ವಿಯಾದರೇ ಆಗ ವಿಜಯೇಂದ್ರ ಅವರನ್ನು ಅಸೆಂಬ್ಲಿಗೆ ಅವಕಾಶ ನೀಡುವ ಬಗ್ಗೆ ಹೈಕಮಾಂಡ್ ಮೇಲೆ ತೀವ್ರ ಒತ್ತಡ ಬೀಳಲಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಶಾಸಕರಾಗಿದ್ದ ನಾರಾಯಣ ರಾವ್ ಅವರ ನಿಧನದಿಂದಾಗಿ ತೆರವಾಗಿರುವ ಬಸವಕಲ್ಯಾಣ ವಿಜಯೇಂದ್ರ ಅವರ ಮತ ರಾಜಕೀಯ ಅರಂಗೇಟ್ರಂಗೆ ಪ್ರಶಸ್ತವಾದ ಕ್ಷೇತ್ರ ಎಂಬದುದು ಅವರ ನಿಷ್ಠರ ಲೆಕ್ಕಾಚಾರವಾಗಿದೆ.

ಬಸವಕಲ್ಯಾಣ ಮಾತ್ರವಲ್ಲದೇ ಮಸ್ಕಿ ಕ್ಷೇತ್ರದಿಂದ ಸಹ ಉಪ ಚುನಾವಣೆ ನಡೆಯಬೇಕಿದ್ದು, ಅಲ್ಲಿಗೆ ಪಕ್ಷಾಂತರಿ ಪ್ರತಾಪ್ ಗೌಡ ಪಾಟೀಲ್ ಬಿಜೆಪಿ ಅಭ್ಯರ್ಥಿಯಾಗುವುದು ನಿಶ್ಚಿತವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights