ಖಜಾನೆ ಖಾಲಿ ಮಾಡಿರುವುದೇ BSY ಸಾಧನೆ, ತೆರಿಗೆ ಪಾಲು ಕೊಡದ ಮೋದಿ ಸರಕಾರ- HDK..

ಪ್ರಧಾನಿ ಮೋದಿ ಆಗಮನದ ಸಂದರ್ಭದಲ್ಲಿಯೇ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದು ಮತ್ತು ಸಲ್ಲಬೇಕಾದ ನ್ಯಾಯಯುತವಾದ ಪಾಲು ನೀಡದಿರುವ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರಧಾನ ಮಂತ್ರಿ ಹಾಗೂ ಸಿಎಂ ಬಿಎಸ್ವೈ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು ರಾಜ್ಯದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು ಇದಕ್ಕೆ ಕೇಂದ್ರದ ಕೆಟ್ಟ ನೀತಿಗಳೇ ಕಾರಣ ಎಂದು ಕಿಡಿ ಕಾರಿದ್ದಾರೆ.

ರಾಜ್ಯದ ಖಜಾನೆ ಖಾಲಿಯಾಗಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಮುದ್ರಾಂಕ ಮತ್ತು ನೋಂದಣಿ, ಮೋಟಾರು ವಾಹನ ಕ್ಷೇತ್ರ, ವಾಣಿಜ್ಯ ತೆರಿಗೆ ಬಹುದೊಡ್ಡ ಆದಾಯದ ಮೂಲವಾದರೂ ಅವುಗಳಿಂದ ಸಂಪನ್ಮೂಲ ಬಂದಿಲ್ಲ‌ ಎಂದು ಅವರು ಹೇಳಿದ್ದಾರೆ.

ಕೇಂದ್ರದ ಕೆಟ್ಟ ಆರ್ಥಿಕ‌ ನೀತಿಗಳೇ ಇಂದಿನ ಈ ಸ್ಥಿತಿಗೆ ಕಾರಣ. ದೇಶದ ಅಭಿವೃದ್ಧಿ ನುಂಗಿದ ಕೇಂದ್ರದ ನೀತಿಗಳು ಈಗ ರಾಜ್ಯದ ಮೇಲೂ ಪರಿಣಾಮ ಬೀರಿದೆ ಎಂದು ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟಿದ್ದಾರೆ.

ತೆರಿಗೆಯಲ್ಲಿ ರಾಜ್ಯಕ್ಕೆ ನೀಡಬೇಕಾದ ಪಾಲನ್ನೂ ಕೊಡದೇ ಕೇಂದ್ರ ವಂಚಿಸಿದೆ‌. ರಾಜ್ಯಕ್ಕೆ ಬರಬೇಕಿದ್ದ ಪಾಲಿನಲ್ಲಿ 5.44% ರಷ್ಟು ಇನ್ನೂ ಬಂದಿಲ್ಲ. ಇದು ರಾಜ್ಯದ ಅಭಿವೃದ್ಧಿಯ ವಿಚಾರದಲ್ಲಿ ಕೇಂದ್ರದ ಮಲತಾಯಿ ಧೋರಣೆ ತೋರುತ್ತದೆ.

ಲೋಕಸಭೆ ಸ್ಥಾನಗಳ ಮೇಲೆ ಮಾತ್ರ ಕಣ್ಣಿಡುವ ಕೇಂದ್ರ ಇಲ್ಲಿನ ಬೇಕು ಬೇಡಗಳನ್ನು ನಿರ್ಲಕ್ಷಿಸುತ್ತದೆ. ಪ್ರಧಾನಿ ಮೋದಿ ಈ ಬಗ್ಗೆ ಈಗಲಾದರೂ ಮಾತಾಡಲಿ ಎಂದು ಅವರು ಹೇಳಿದ್ದಾರೆ.

ರಾಜ್ಯದ ಆರ್ಥಿಕ ಪರಿಸ್ಥಿತಿ ವಿಷಮವಾಗಿದೆ. ಕೇಂದ್ರದಿಂದ ಬರಬೇಕಾದ ಬರ ಪರಿಹಾರ, ಅನುದಾನ, ತೆರಿಗೆ ಹಂಚಿಕೆಗಳನ್ನು ದಿಟ್ಟತನದಿಂದ ಕೇಳುವ ಶಕ್ತಿ ಬಿಎಸ್ವೈ ಅವರಿಗಿಲ್ಲ. ನ್ಯಾಯವಾಗಿ ಬರಬೇಕಾದ್ದನ್ನು ಪಡೆಯಲಾಗದ ಬಿಎಸ್ವೈ ಅವರು ದುರ್ಬಲ ಸಿಎಂ ಎಂದು ಎಚ್ಡಿಕೆ ಜರೆದಿದ್ದಾರೆ.

ರಾಜ್ಯದಿಂದ 25 ಸಂಸದರನ್ನು ಪಡೆದಿರುವ ಮೋದಿಯವರು, ಕೇಂದ್ರದ ಚಂದಮಾಮನನ್ನು ತೋರಿಸಿ ‘ಅನರ್ಹ ಸರ್ಕಾರ’ ರಚಿಸಿಕೊಂಡ ಬಿಎಸ್ವೈ ಅವರು ಶಿವಕುಮಾರ ಸ್ವಾಮೀಜಿಗಳು ಐಕ್ಯರಾಗಿರುವ ತುಮಕೂರಿನ ನೆಲದಲ್ಲಿ ನಿಂತು ಇವೆಲ್ಲಕ್ಕೂ ಉತ್ತರ ಕೊಡುವರೇ ಎಂದೂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights