ಕನ್ನಡಿಗರ ಹಿತ ಮರೆತ BJP: ಚುನಾವಣೆಗಾಗಿ ಮರಾಠಿಗರ ಅಭಿವೃದ್ಧಿ 50 ಕೋಟಿ ಅನುದಾನ!

ಚುನಾವಣೆ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನೇ ಬುಡಮೇಲು ಮಾಡುತ್ತಿರುವ ಬಿಜೆಪಿ ಪ್ರತಿ ಚುನಾವಣೆ ಮತ್ತು ಉಪಚುನಾವಣೆಗಳಿಗೂ ಒಂದೊಂದು ನಿಗಮ ಮಂಡಳಿಗಳನ್ನು ಆರಂಭಿಸುತ್ತಾ ಹೊರಟಿದೆ. ಚುನಾವಣೆಗಳಲ್ಲಿ ಮತದಾರರ ಓಲೈಕೆಗೆ ಆಮಿಷಗಳನ್ನು ಒಡ್ಡುತ್ತಿರುವ ಬಿಜೆಪಿ ಇದೀಗ ಕರ್ನಾಟಕದಲ್ಲಿ ಕನ್ನಡಿಗರ ಹಿತವನ್ನು ಮರೆತು, ಕನ್ನಡಿಗರಿಗೇ ಸವಾಲು ಹಾಕಿ ನಿಂತಿದೆ. ಆದರೆ, ಬಿಜೆಪಿಯನ್ನು ಅಂದಾಭಿಮಾನದಿಂದ ಬೆಂಬಲಿಸುತ್ತಿರುವ ಜನರಿಗೆ ಬಿಜೆಪಿಯ ಸಂಚು ಅರ್ಥವಾಗದೇ ಇರುವುದು ವಿಪರ್ಯಾಸ.

ಚುನಾವಣೆಯ ನಂತರ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರದ ದೃಷ್ಠಿ ಪ್ರತಿಯೊಬ್ಬ ಪ್ರಜೆಯ ಹಿತ ರಕ್ಷಣೆ ಎಂಬುದನ್ನು ಮರೆತಿರುವ ಬಿಜೆಪಿ ಸರ್ಕಾರ, ಚುನಾವಣೆಗೊಂದು ಮಂಡಳಿ, ಪ್ರಾಧಿಕಾರ ರಚಿಸುವ ಮೂಲಕ ಉಪ ಚುನಾವಣಾ ಕಣದ ಸಂಖ್ಯಾ ಬಾಹುಳ್ಯದ ಮತದಾರ ಸಮುದಾಯಗಳ ಓಲೈಕೆಗೆ ಎಂಬುದನ್ನು ಸಾಬೀತು ಮಾಡುತ್ತಿದೆ.

ಕೆಲವೇ ದಿನಗಳ ಹಿಂದೆ ಕಾಡುಗೊಲ್ಲ ಸಮುದಾಯದವರು ನಿರ್ಣಾಯಕರಾಗಿರುವ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಡುಗೊಲ್ಲ ಅಭಿವೃದ್ಧಿ ನಿಗಮ ರಚಿಸಿ, ಬರೋಬ್ಬರಿ 50 ಕೋಟಿ ರೂಪಾಯಿ ಅನುದಾನ ಮೀಸಲಿರಿಸಿದ್ದ ರಾಜ್ಯ ಬಿಜೆಪಿ ಸರ್ಕಾರ, ಇದೀಗ ಮರಾಠ ಸಮುದಾಯ ನಿರ್ಣಾಯಕರಾಗಿರುವ ಬೆಳಗಾವಿ ಲೋಕಸಭಾ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ತಯಾರಿಯ ಭಾಗವಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. ಆ ಪ್ರಾಧಿಕಾರಕ್ಕೂ ಬರೋಬ್ಬರಿ 50 ಕೋಟಿ ಅನುದಾನ ಘೋಷಿಸಿದೆ. ಜೊತೆಗೆ ಆ ಎರಡೂ ಕ್ಷೇತ್ರಗಳಲ್ಲಿ ಮತ್ತೊಂದು ಬಹುಸಂಖ್ಯಾತ ಸಮುದಾಯವಾದ ಲಿಂಗಾಯಿತ- ವೀರಶೈವರಿಗೆ ಸಂಬಂಧಿಸಿದ ಮಠಮಾನ್ಯಗಳಿಗೂ 88 ಕೋಟಿಯಷ್ಟು ಭಾರೀ ಮೊತ್ತದ ಸಾರ್ವಜನಿಕ ತೆರಿಗೆ ಹಣವನ್ನು ನೀಡಲಾಗಿದೆ.

ಇದನ್ನೂ ಓದಿ: ಮಂಡ್ಯ ಡಿಸಿಸಿ ಬ್ಯಾಂಕ್‌ ಚುಣಾವಣೆ: ಕಾಂಗ್ರೆಸ್‌ ಸೋಲಿಸಲು BJP ಮೊರೆಹೋದ JDS

ಅಂದರೆ; ಬಿಜೆಪಿ ಸರ್ಕಾರ, ರಾಜ್ಯದ ಪ್ರತಿಯೊಂದು ಸಮುದಾಯ, ಧರ್ಮದ ಜನರ ತೆರಿಗೆ ಹಣವನ್ನು ಹೀಗೆ ತನ್ನ ಮತ ಬ್ಯಾಂಕ್ ಬೆಳೆಸಲು, ಉಪ ಚುನಾವಣೆ ಗೆಲ್ಲಲು ಪಕ್ಷದ ನಿಧಿಯಂತೆ ಬಳಕೆ ಮಾಡುತ್ತಿದೆ. ಬಸವಕಲ್ಯಾಣದ ವಿಧಾನಸಭಾ ಚುನಾವಣೆಯಲ್ಲಿ ಮರಾಠ ಸಮುದಾಯದ ಬರೋಬ್ಬರಿ 44 ಸಾವಿರ ಮತಗಳಿವೆ. ಹಾಗೇ ಇತ್ತೀಚೆಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾದ ಸಂಸದ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕೂಡ ಮರಾಠ ಸಮುದಾಯದ ಸುಮಾರು 6 ಲಕ್ಷಕ್ಕೂ ಅಧಿಕ ಮತಗಳಿವೆ. ಆ ಹಿನ್ನೆಲೆಯಲ್ಲಿ ಈ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ಲೆಕ್ಕಾಚಾರದಲ್ಲೇ ಬಿಜೆಪಿ ಸರ್ಕಾರ ಈ ಭಾರೀ ಉಡುಗೊರೆ ಘೋಷಿಸಿದೆ.

ಆದರೆ, ಬಿ ಎಸ್ ಯಡಿಯೂರಪ್ಪ ಅವರ ಸರ್ಕಾರದ ಇಂತಹ ಓಲೈಕೆ ರಾಜಕಾರಣಕ್ಕೆ ಬಳಕೆಯಾಗುತ್ತಿರುವ ಹಣ ಯಾರದ್ದು ಎಂಬುದು ಈಗ ಕೇಳಬೇಕಿರುವ ಪ್ರಶ್ನೆ. ಸಾರ್ವಜನಿಕ ತೆರಿಗೆ ಹಣವನ್ನು ಆಳುವ ಪಕ್ಷಗಳು ತಮ್ಮದೇ ಪಕ್ಷದ ಮತ ಬ್ಯಾಂಕ್ ಬೆಳೆಸಲು ಮನಸೋ ಇಚ್ಛೆ ಬಳಸುವ, ಸರ್ಕಾರದ ಖಜಾನೆಯನ್ನು ಪಕ್ಷದ ಬೊಕ್ಕಸದಂಗೆ ದುಂದುವೆಚ್ಚ ಮಾಡುವ ಈ ಹೇಯ ಚಾಳಿ ಭಾರತದ ಮಟ್ಟಿಗೆ ಲಾಗಾಯ್ತಿನಿಂದಲೂ ಚಾಲ್ತಿಯಲ್ಲಿದೆ. ಆ ವಿಷಯದಲ್ಲಿ ಕಾಂಗ್ರೆಸ್, ಜನತಾ ಪರಿವಾರ ಮತ್ತು ಈಗ ಬಿಜೆಪಿ ಸೇರಿ ಯಾವ ಪಕ್ಷವೂ ಹಿಂದೆ ಬಿದ್ದಿಲ್ಲ. ಆದರೆ, ಈಗಿನ ಬಿಎಸ್ ವೈ ಸರ್ಕಾರದ ರೀತಿಯಲ್ಲಿ ಉಪ ಚುನಾವಣೆಗಳನ್ನು ಗೆಲ್ಲುವ ಏಕೈಕ ಕಾರಣಕ್ಕಾಗಿ ಸರ್ಕಾರದ ಬೊಕ್ಕಸವನ್ನು ಬರಿದುಮಾಡುವುದು ಮಾತ್ರ ಹೊಸ ರೀತಿ.

ವಿಪರ್ಯಾಸವೆಂದರೆ ಒಂದು ಕಡೆ ಸಾರಿಗೆ ನೌಕರರಿಗೆ, ಅತಿಥಿ ಉಪನ್ಯಾಸಕರಿಗೆ, ಮತ್ತಿತರರಿಗೆ ಸಂಬಳ ಕೊಡಲು ಕೂಡ ಹಣವಿಲ್ಲವೆನ್ನುತ್ತಿದ್ದ ಸರ್ಕಾರ, ಬರೋಬ್ಬರಿ ಎಂಟು ತಿಂಗಳ ಕಾಲ ನಯಾಪೈಸೆ ವೇತನ ನೀಡದೆ ಸತಾಯಿಸಿದ ಸರ್ಕಾರ, ಕೋವಿಡ್ ಸಂದರ್ಭದಲ್ಲಿ ಕೂಲಿ ಕಾರ್ಮಿಕರಿಗೆ ನೆರವು ನೀಡಲು ಹಣವಿಲ್ಲ ಎಂದ ಸರ್ಕಾರ, ಕಳೆದ ವರ್ಷದ ಭೀಕರ ಪ್ರವಾಹದ ವೇಳೆ ಸಂತ್ರಸ್ತರಿಗೆ ನೆರವು ನೀಡಲು ಹಣವಿಲ್ಲ ಎಂದು ಕೈಚೆಲ್ಲಿದ ಸರ್ಕಾರ, ಈಗ ಹೀಗೆ ನೂರಾರು ಕೋಟಿ ರೂ. ಅನುದಾನ ಘೋಷಿಸುತ್ತಿದೆ. ಅಂದರೆ; ಸರ್ಕಾರದ ನೆರವು ಸಿಗಬೇಕೆಂದರೆ; ಚುನಾವಣೆ ಬರಬೇಕು ಮತ್ತು ನೀವು ಆ ಕ್ಷೇತ್ರದ ನಿರ್ಣಾಯಕ ಮತ ಬ್ಯಾಂಕ್ ಆಗಿರಬೇಕು ಎಂದಲ್ಲವೆ?

ಇದನ್ನೂ ಓದಿ: ನಾವು ಹೊರಗಿನಿಂದ ಬಂದವರು, ಬಿಜೆಪಿ ಅಂತರಂಗದ ಗುಟ್ಟು ಬಿಟ್ಟುಕೊಡುತ್ತಿಲ್ಲ: ಸಚಿವ ಎಸ್‌.ಟಿ. ಸೋಮಶೇಖರ್

ಅಲ್ಲದೆ, ಹೀಗೆ ಚುನಾವಣೆಗಳನ್ನು ಗೆಲ್ಲುವುದೊಂದನ್ನೇ ಗುರಿಯಾಗಿಸಿಕೊಂಡು ಜಾತಿಗೊಂದು, ಸಮುದಾಯಕ್ಕೊಂದು ಮಂಡಳಿ, ನಿಗಮ, ಪ್ರಾಧಿಕಾರ ರಚಿಸಿ ಕೋಟಿಕೋಟಿ ಅನುದಾನ ನೀಡತೊಡಗಿದರೆ ಅದಕ್ಕೆ ಕೊನೆ ಎಂದು ಎಂಬುದು. ಈಗಾಗಲೇ ಈ ವಿಷಯದಲ್ಲಿ ಲಿಂಗಾಯಿತ-ವೀರಶೈವರೂ ಸೇರಿದಂತೆ ಹಲವು ಸಮುದಾಯಗಳು ತಮಗೂ ಮಂಡಳಿ, ನಿಗಮ ಘೋಷಿಸಿ ಎಂದು ಸರ್ಕಾರದ ಮುಂದೆ ಹಕ್ಕು ಮಂಡಿಸಿದ್ದಾರೆ. ಹೀಗೆ ಕೇಳಿದವರಿಗೆಲ್ಲಾ ಮಂಡಳಿಗಳನ್ನು ರಚಿಸುತ್ತಾ ಹೋದರೆ, ಸಮಾಜದ ಪ್ರತಿ ಸಮುದಾಯಕ್ಕೂ ಒಂದೊಂದು ನಿಗಮ-ಮಂಡಳಿಗಳು ಅಸ್ತಿತ್ವಕ್ಕೆ ಬಂದು ಆ ಸಮುದಾಯಕ್ಕೆ ಸಂಬಂಧಿಸಿದ ಎಲ್ಲವನ್ನೂ ಅವುಗಳೇ ನಿರ್ವಹಿಸುವುದಾದರೆ, ಸರ್ಕಾರಿ ಇಲಾಖೆಗಳ, ಸಚಿವಾಲಯಗಳ ಅಗತ್ಯವೇನಿದೆ? ಎಂಬ ಪ್ರಶ್ನೆಯೂ ಇದೆ.

ಜೊತೆಗೆ ಸಾರ್ವಜನಿ ಹಣಕಾಸು ಬಳಕೆಯ ನೈತಿಕತೆ ಮತ್ತು ಹೊಣೆಗಾರಿಕೆಯ ಜೊತೆಗೆ ಈ ಮರಾಠ ಅಭಿವೃದ್ಧಿ ಪ್ರಾಧಿಕಾರದ ವಿಷಯದಲ್ಲಿ ಮತ್ತೊಂದು ಸೂಕ್ಷ್ಮವೂ ಇದೆ. ಅದು ಭಾಷಾ ಸೂಕ್ಷ್ಮತೆ. ಮರಾಠರು ಮತ್ತು ಕನ್ನಡಿಗರ ನಡುವೆ ಶತಮಾನದಿಂದ ನೆಲ-ಜಲ ಮತ್ತು ನುಡಿಯ ವಿಷಯದಲ್ಲಿ ದೊಡ್ಡ ಮಟ್ಟದ ಸಂಘರ್ಷವಿದೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವ ವಿವಿಧ ಪರಿಷತ್, ಅಕಾಡೆಮಿ, ಪ್ರಾಧಿಕಾರ-ಮಂಡಳಿಗಳಿಗೆ ಕೋವಿಡ್ ಸಂಕಷ್ಟದ ನೆಪದಲ್ಲಿ ಅನುದಾನ ಕಡಿತ ಮಾಡಿರುವ ಬಿ ಎಸ್ ಯಡಿಯೂರಪ್ಪ, ಈಗ ಕನ್ನಡದ ವಿಷಯದಲ್ಲಿ ಹಗೆತನಕ್ಕಾಗಿಯೇ ಹೆಸರಾಗಿರುವ ಬೆಳಗಾವಿ ಮರಾಠ ಭಾಷಾ ಮೂಲಭೂತವಾದಿಗಳ ವಿಷಯದಲ್ಲಿ ಮಮಕಾರದ ಪ್ರವಾಹವನ್ನೇ ಹರಿಸುತ್ತಿರುವುದು ಕನ್ನಡಿಗರಿಗೆ ಬಗೆದ ದ್ರೋಹವಲ್ಲವೆ ಎಂಬ ಪ್ರಶ್ನೆಯೂ ಕನ್ನಡ ಹೋರಾಟಗಾರರಿಂದ ಕೇಳಿಬಂದಿದೆ.

ಹಾಗಾಗಿ, ಕೇವಲ ಉಪ ಚುನಾವಣೆಗಳ ಮೇಲೆ ಕಣ್ಣಿಟ್ಟು ಹೀಗೆ ಕನ್ನಡಿಗರ ಬೆವರಿನ ಹಣವನ್ನು ಮರಾಠಿಗರ ಅಭಿವೃದ್ಧಿಗೆ ಮನಸೋ ಇಚ್ಛೆ ಬಳಸುತ್ತಿರುವ ಮುಖ್ಯಮಂತ್ರಿಗಳು ಮತ್ತು ಅವರ ಬಿಜೆಪಿ ಪಕ್ಷದ ಕನ್ನಡಪರ ನಿಷ್ಠೆಯ ಬಗ್ಗೆ ಮತ್ತೊಮ್ಮೆ ಗಂಭೀರ ಅನುಮಾನಕ್ಕೆ ಈ ಬೆಳವಣಿಗೆ ಕಾರಣವಾಗಿದೆ. ಜೊತೆಗೆ ಸಾರ್ವಜನಿಕ ಹಣವನ್ನು ಪಕ್ಷದ ಮುಫತ್ತು ನಿಧಿಯಂತೆ ಬಳಸುವ ನಾಚಿಕೆಗೇಡಿನ ಪ್ರವೃತ್ತಿಯ ಬಗ್ಗೆಯೂ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಆ ಹಿನ್ನೆಲೆಯಲ್ಲಿ ಈ ವಿಷಯ ಇದೀಗ ಹೊಸ ವಿವಾದವಾಗಿ ಹೊರಹೊಮ್ಮಿದೆ. ಕನ್ನಡ ಸಂಘಟನೆಗಳೂ ಸಿಡಿದೆದ್ದಿವೆ. ಅವುಗಳ ಆಕ್ರೋಶ ಮುಂದಿನ ದಿನಗಳಲ್ಲಿ ಪಡೆಯಬಹುದಾದ ಸ್ವರೂಪದ ಮೇಲೆ ರಾಜ್ಯ ಸರ್ಕಾರದ ಮುಂದಿನ ನಡೆ ನಿಂತಿದೆ.

ಕೃಪೆ: ಪ್ರತಿಧ್ವನಿ


ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಉಪಚುನಾವಣೆ: ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್‌ನಿಂದ ಸಮಿತಿ ರಚನೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights