ಆಯ್ಕೆಯಾದರೂ ನೇಮಕಾತಿ ಪತ್ರವಿಲ್ಲ-ಸಂಬಳವಿಲ್ಲ; ಕಾಲೇಜು ಶಿಕ್ಷಣ ಇಲಾಖೆಯ ಮುಂದೆ ಪ್ರಾಧ್ಯಾಪಕರ ಧರಣಿ

ಅನುದಾನಿತ ಪ್ರಥಮದರ್ಜೆ ಕಾಲೇಜುಗಳಿಗೆ ಆಯ್ಕೆಗೊಂಡಿರುವ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯನ್ನು, ಆರ್ಥಿಕ ಸಂಕಷ್ಟದ ಕಾರಣ ನೀಡಿ ತಡೆಹಿಡಿಯಲಾಗಿದೆ. ನೇಮಕಾತಿಯಾಗಿದ್ದರೂ, ನೇಮಕಾತಿ ಪತ್ರವನ್ನು ನೀಡದೆ ಕಾಲೇಜು ಆಡಳಿತ ಸತಾಯಿಸುತ್ತಿದ್ದು, ತಡೆಹಿಡಿಯಲಾಗಿರುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಿ ಆಯ್ಕೆಗೊಂಡಿರುವ ಪ್ರಾಧ್ಯಾಪಕರು ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯಕಚೇರಿಯ ಮುಂಬಾಗದಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ.

ಖಾಸಗಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ನೀಡಿದ್ದ ಆದೇಶದಂತೆ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ನೀಡಲಾಗಿತ್ತು. ಅದರಂತೆ ಸಹಾಯಕ ಪ್ರಾಧ್ಯಾಪಕರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇದೀಗ ಕೊರೊನಾದ ಹೆಸರು ಹೇಳಿ ವಿವಿಧ ಅನುದಾನಿತ ಪ್ರಥಮದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಿರುವ ಸುಮಾರು 300ಕ್ಕೂ ಹೆಚ್ಚು ಅಭ್ಯರ್ಥಿಗಳ ನೇಮಕಾತಿಯನ್ನು 2020-21 ನೇ ಸಾಲಿನಲ್ಲಿ ತಡೆಹಿಡಿಯಲಾಗಿದೆ.

ನಾನುಗೌರಿ.ಕಾಮ್ ಜೊತೆ ಮಾತನಾಡಿದ ಪ್ರಾಧ್ಯಾಪಕರೊಬ್ಬರು, “ಕಳೆದ ಹಲವು ವರ್ಷಗಳಿಂದ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದೆವು, ಈಗ ಅನುದಾನಿತ ಪದವಿ ಕಾಲೇಜುಗಳಲ್ಲಿ ಆಯ್ಕೆಗೊಂಡಿದ್ದೇವೆ. ಈಗಾಗಲೇ ನಮ್ಮ ವಯೋಮಿತಿಯು ಮೀರುತ್ತಿದ್ದು, ನೇಮಕಾತಿ ಆದೇಶ ಪತ್ರದ ನಿರೀಕ್ಷೆಯಲ್ಲಿರುವಾಗಲೇ ಆರ್ಥಿಕ ಇಲಾಖೆಯಿಂದ ಹೊರಬಂದ ಸುತ್ತೋಲೆಯಿಂದ ದಿಕ್ಕು ತೋಚದಂತಾಗಿದೆ. ಪಿಯುಸಿ ಉಪನ್ಯಾಸಕರನ್ನು ಈಗಾಗಲೆ ಸರ್ಕಾರ ನೇಮಿಸಿಕೊಂಡಿದೆ ಆದರೆ ನಮ್ಮ ನೇಮಕಾತಿಯನ್ನು ತಡೆಹಿಡಿದು ನಮಗೆ ಅನ್ಯಾಯ ಎಸಗುತ್ತಿದೆ. ನಮಗೆ ನ್ಯಾಯ ಸಿಗುವವರೆಗೂ ಇಲ್ಲಿಂದ ಕದಲುವುದಿಲ್ಲ” ಎಂದು ಹೇಳಿದ್ದಾರೆ.

“ಈ ಹಿಂದೆಯೆ ಪೊಲೀಸರೊಂದಿಗೆ ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡಲು ಅವಕಾಶ ನೀಡುವಂತೆ ಕೇಳಿಕೊಂಡಿದ್ದೆವು. ಆದರೆ ಅವರು ’ಸಂಘಟನೆ’ ಇಲ್ಲ ಎಂಬ ಕಾರಣ ನೀಡಿ ಪ್ರತಿಭಟನೆಗೆ ಅವಕಾಶ ಕೊಟ್ಟಿರಲಿಲ್ಲ. ಆದ್ದರಿಂದ ಯಾವುದೆ ದಾರಿ ಕಾಣದೆ ಇಂದು ಬೆಳಿಗ್ಗೆಯಿಂದ ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯಕಚೇರಿಯ ಮುಂಬಾಗ ಪ್ರತಿಭಟನೆ ಮಾಡುತ್ತಿದ್ದೇವೆ. ಇಲಾಖೆಯ ಕಮೀಷನರ್ ಬಂದು ಇಲ್ಲಿ ಪ್ರತಿಭಟನೆ ಮಾಡದಂತೆ ಹೇಳಿಹೋಗಿದ್ದಾರೆ ವಿನಃ ನಮ್ಮ ಸಂಕಷ್ಟಗಳಿಗೆ ಪರಿಹಾರದ ಬಗ್ಗೆ ಮಾತನಾಡಿಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದರು.

“ಇದೀಗ ಪೊಲೀಸರು ಬಂದು ಪ್ರತಿಭಟನೆಗೆ ಅನುಮತಿ ಪಡೆದಿಲ್ಲ ಎಂದು ಹೇಳಿ ನಮ್ಮನ್ನು ಹೊರಕಳುಹಿಸಲು ನೋಡುತ್ತಿದ್ದಾರೆ. ಇಲ್ಲಿಂದ ಹೊರಗಡೆ ಹೊರ ಕಳುಹಿಸಿದರೂ ಸರಿ, ನಮ್ಮ ಪ್ರತಿಭಟನೆಯನ್ನು ಬೀದಿಯಲ್ಲಿ ಕೂತು ಮುಂದುವರೆಸುತ್ತೇವೆ. ಆರ್ಥಿಕ ಇಲಾಖೆಯ ಈ ಹಿಂದಿನ ಸುತ್ತೋಲೆಯನ್ನು ಹಿಂಪಡೆದು, ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವವರೆಗೂ ನಮ್ಮ ಪ್ರತಿಭಟನೆ ಮುಂದುವರೆಯುತ್ತದೆ” ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: BJP ಆಡಳಿತ ನಡೆಸಲು ವಿಫಲವಾದರೂ ಚುನಾವಣೆಗಳನ್ನು ಗೆಲ್ಲುತ್ತದೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights